ಉಡುಪಿ : ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಅಣ್ಣಾಮಲೈ ಅವರು, ನಾವೆಲ್ಲರೂ ರಾಷ್ಟ್ರೀಯ ಪಕ್ಷದ ಸದಸ್ಯರು. ನಾನು ಒಬ್ಬ ಕಾರ್ಯಕರ್ತ. ಪಕ್ಷ ನನಗೆ ಒಂದು ಜವಾಬ್ದಾರಿ ನೀಡಿತ್ತು. ಈಗ ಇನ್ನೊಂದು ಜವಾಬ್ದಾರಿ ನೀಡಿದರೂ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಕೆಲಸ ಮಾಡುವುದು ಮಾತ್ರ ನನ್ನ ಕರ್ಮ. ಪಕ್ಷವು ಯಾವುದೇ ಅವಕಾಶ ನೀಡಿದರೂ ನಾನು ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.
ತಮಿಳುನಾಡಿನಲ್ಲಿ ಚುನಾವಣೆ ಸಮೀಪಿಸುತ್ತಿದೆ. ಗೃಹ ಸಚಿವರನ್ನು ತಮಿಳುನಾಡು ವಿರೋಧ ಪಕ್ಷದ ನಾಯಕ ಪಳನಿಸ್ವಾಮಿ ಅವರು ಭೇಟಿಯಾಗಿದ್ದಾರೆ. ಗೃಹ ಸಚಿವರು ಮೈತ್ರಿಯ ಬಗ್ಗೆ ಮಾತನಾಡಿದ್ದಾರೆ. ಎಐಡಿಎಂಕೆ ಕುರಿತ ನನ್ನ ನಿಲುವು ಎಲ್ಲರಿಗೂ ತಿಳಿದಿದೆ. ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಇಳಿಸುವುದು ನಮ್ಮೆಲ್ಲರ ಮುಖ್ಯ ಉದ್ದೇಶ. ಅದು ನಮ್ಮ ನಂಬರ್ ಒನ್ ಕಾರ್ಯಕ್ರಮ. ಎಐಡಿಎಂಕೆ ಬಹಳ ದೊಡ್ಡ ದ್ರಾವಿಡ ಪಕ್ಷ. ಗೃಹ ಸಚಿವರನ್ನು ಭೇಟಿಯಾಗಿರುವುದರಿಂದ ಮೈತ್ರಿ ಕುರಿತ ಸಂದೇಶ ಸ್ಪಷ್ಟವಾಗಿದೆ. ಎಐಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಬಯಸುತ್ತಿದೆ ಎಂದು ಗೃಹ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ.
ನಾನು ಎಲ್ಲಿ ಇರಬೇಕು, ಯಾವ ಸ್ಥಾನದಲ್ಲಿ ಇರಬೇಕು ಎಂದು ಪಕ್ಷಕ್ಕೆ ತಿಳಿದಿದೆ. ಮೈತ್ರಿಗೆ ಯಾವುದು ಸರಿಯಾದ ನಿಲುವು ಎಂಬುದೂ ಪಕ್ಷಕ್ಕೆ ಅರಿವಿದೆ. ಪಕ್ಷವು ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಒಬ್ಬ ಕಾರ್ಯಕರ್ತನಾಗಿ ಅದಕ್ಕೆ ಬದ್ಧನಾಗಿರುತ್ತೇನೆ. ತಮಿಳುನಾಡಿನಲ್ಲಿ ಬದಲಾವಣೆ ಆಗಲಿದೆ. ಪಕ್ಷಕ್ಕೆ ಇನ್ನೊಂದು ಅವಕಾಶ ಸಿಗಬಹುದು. ಮಹಾರಾಷ್ಟ್ರ ಮತ್ತು ಒರಿಸ್ಸಾದಲ್ಲಿ ಪ್ರಾಮಾಣಿಕ ಪ್ರಯತ್ನದಿಂದ ಏನಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ತಮಿಳುನಾಡು ಒಂದು ಸುದೀರ್ಘ ಕಾಲದ ಆಟ. ಬಹಳ ವರ್ಷಗಳಿಂದ ನಾವು ತಾಳ್ಮೆಯಿಂದ ಕಾಯುತ್ತಿದ್ದೇವೆ ಮತ್ತು ಕಾಯುತ್ತೇವೆ. ಇನ್ನು 20 ವರ್ಷ ಅಥವಾ 30 ವರ್ಷಗಳೇ ಬೇಕಾದರೂ ಆಗಲಿ, ನಾವು ಅಧಿಕಾರಕ್ಕೆ ಬರುತ್ತೇವೆ. ಪಕ್ಷದ ನಿರ್ಧಾರಕ್ಕೆ ಕಾರ್ಯಕರ್ತರಾಗಿ ಒಪ್ಪಿಗೆ ನೀಡಬೇಕು. ಪಕ್ಷವು ರಾಷ್ಟ್ರೀಯ ಮಟ್ಟದಿಂದ ಆಲೋಚನೆ ಮಾಡುತ್ತದೆ. ಡಿಎಂಕೆ ಎಂತಹ ಭ್ರಷ್ಟ ಸರ್ಕಾರವನ್ನು ನಡೆಸುತ್ತಿದೆ ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ. 13 ಸಚಿವರ ಮೇಲೆ ಭ್ರಷ್ಟಾಚಾರ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಒಬ್ಬ ಮಂತ್ರಿ ಒಂದೂವರೆ ವರ್ಷ ಜೈಲಿನಲ್ಲಿದ್ದು ಮತ್ತೆ ಮಂತ್ರಿಯಾಗಿದ್ದಾರೆ. ದೀರ್ಘಕಾಲೀನ ದೃಷ್ಟಿಕೋನದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರಾಜಕೀಯದಲ್ಲಿ ಅಧಿಕಾರಕ್ಕಿಂತ ತಾಳ್ಮೆ ಮುಖ್ಯ. ನಾನು ತಾಳ್ಮೆಯಿಂದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಒಂದಲ್ಲ ಒಂದು ದಿನ ಬಿಜೆಪಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ. ನಮ್ಮ ಪಕ್ಷದಲ್ಲಿ ರಾಜೀನಾಮೆ ನೀಡುವ ವಿಚಾರ ಬರುವುದಿಲ್ಲ. ಮುಂದಿನ ರಾಜ್ಯಾಧ್ಯಕ್ಷ ಚುನಾವಣೆ ನಡೆಯುವಾಗ ನಾನು ಸ್ಪರ್ಧೆಯಲ್ಲಿ ಇರುವುದಿಲ್ಲ. ಯಾವಾಗ ಬೇಕಾದರೂ ರಾಜ್ಯಾಧ್ಯಕ್ಷ ಚುನಾವಣೆ ನಡೆಯಬಹುದು ಎಂದು ಅಣ್ಣಾಮಲೈ ಹೇಳಿದರು.