ಉಡುಪಿ : ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅಧ್ಯಕ್ಷತೆಯಲ್ಲಿ ಇಂದು ಬನ್ನಂಜೆಯಲ್ಲಿರುವ ಬಿಲ್ಲವ ಸೇವಾ ಸಂಘದ ನಾರಾಯಣ ಗುರು ಸಭಾಂಗಣದಲ್ಲಿ ಉಡುಪಿ ತಾಲೂಕು ಮಟ್ಟದ ಜನಸ್ಪಂದನ ಸಭೆ ನಡೆಯಿತು. ಸಭೆಯಲ್ಲಿ ಒಟ್ಟು 54 ಅರ್ಜಿಗಳು ಸ್ವೀಕೃತವಾದವು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ-19, ನಗರಸಭೆಯ-14, ವಿವಿಧ ಗ್ರಾಮ ಪಂಚಾಯತ್‌ಗಳ-4, ಸರ್ವೇ ಇಲಾಖೆಯ-8, ಸಮಾಜ ಕಲ್ಯಾಣ ಇಲಾಖೆ, ಮುಜರಾಯಿ ಇಲಾಖೆ, ವಿಕಲಚೇತನರ ಇಲಾಖೆ, ಲೋಕೋಪಯೋಗಿ ಇಲಾಖೆ, ಮೀನುಗಾರಿಕಾ ಇಲಾಖೆ, ಉದ್ಯೋಗ ಇಲಾಖೆ, ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳ ತಲಾ-1ರಂತೆ ಒಟ್ಟು 54 ಅರ್ಜಿಗಳು ಸ್ವೀಕೃತವಾಗಿವೆ.
ಸಭೆಯಲ್ಲಿ ಭಾಗವಹಿಸಿದ ಗ್ರಾಮಸ್ಥರು ರಸ್ತೆ, ಮನೆ, ಜಮೀನು, ಒಳಚರಂಡಿ, ನೀರಿನ ಸೌಲಭ್ಯ ವಿದ್ಯುತ್ ಸಮಸ್ಯೆ, ಹಕ್ಕುಪತ್ರ, ಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ತಮ್ಮ ಅಹವಾಲುಗಳನ್ನು ಜಿಲ್ಲಾಧಿಕಾರಿಗಳ ಮುಂದೆ ಮಂಡಿಸಿದರು.
ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ನೆಕ್ಕೆರೆಕೆರೆಯ ಗುಂಡಿಬೈಲ್ ವಾರ್ಡ್ ಸಾರ್ವಜನಿಕರು, ತಮ್ಮ ಊರಿನ ಮುಖ್ಯ ರಸ್ತೆ ಸತತ ಮಳೆಯಿಂದಾ ಹದಗೆಟ್ಟು ಹೋಗಿದ್ದು, ಮಕ್ಕಳು ಹಾಗೂ ವಯಸ್ಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ಅಲ್ಲದೇ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಸಮಸ್ಯೆಗೆ ಶೀಘ್ರವೇ ಸೂಕ್ತ ಪರಿಹಾರ ಒದಗಿ ಸುವಂತೆ ಕೋರಿ ಅರ್ಜಿ ಸಲ್ಲಿಸಿದರು. ಅರ್ಜಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ನಗರಸಭೆ ಪೌರಾಯುಕ್ತರು ಇದನ್ನು ಪರಿಶೀಲಿಸಿ ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.