ಉಡುಪಿ : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜನ ಸಾಮಾನ್ಯರ ನಡುವೆ ಪಸರಿಸಲು ಬೃಹತ್ ಮಾನವ ಸರಪಳಿಯನ್ನು ಸೆ. 15ರಂದು ಒಂದು ಲಕ್ಷಕ್ಕೂ ಹೆಚ್ಚು ಜನರು ನಿರ್ಮಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.
ಶನಿವಾರ ಮಣಿಪಾಲ ಜಿಲ್ಲಾ ಪಂಚಾಯತ್ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಜಿಲ್ಲೆಯಾದ್ಯಂತ ಮಾನವ ಸರಪಳಿ ಆಯೋಜಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ನಾವು ಹೊಂದಿದ್ದೇವೆ. ಯುವ ಪೀಳಿಗೆಗೆ ಪ್ರಜಾಪ್ರಭುತ್ವದ ಮೌಲ್ಯಾನುಸಾರ ಸಶಕ್ತವಾಗಲು ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಅಗತ್ಯ ಸರಕಾರ ಬೃಹತ್ ಮಾನವ ಸರಪಳಿಯನ್ನು ಸೆಪ್ಟೆಂಬರ್ 15ರಂದು ಬೀದರ್ನಿಂದ ಚಾಮರಾಜನಗರದವರೆಗೆ ನಿರ್ಮಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ದಾರಿಯುದ್ದಕ್ಕೂ ಪಸರಿಸುವ ಮೂಲಕ ಭಿನ್ನವಾಗಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಇದರ ಭಾಗವಾಗಿ ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದು ಜಿಲ್ಲೆಯ ಗಡಿ ಭಾಗಗಳಾದ ಬೈಂದೂರು ತಾಲೂಕಿನ ಶಿರೂರು ಗ್ರಾಮದಿಂದ ಕಾಪು ತಾಲೂಕಿನ ಹೆಜಮಾಡಿ ಗ್ರಾಮ ದವರೆಗೆ 26 ಗ್ರಾಮ ಪಂಚಾಯತ್ಗಳಲ್ಲಿ 100 ಕಿ.ಮೀ.ವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಇದರಲ್ಲಿ ಭಾಗವಹಿಸಿ, ಮಾನವಸರಪಳಿ ನಿರ್ಮಿಸಲಿದ್ದಾರೆ. ಜಿಲ್ಲೆಯ ಯುವಜನತೆ, ಸಾರ್ವಜನಿಕರು, ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಭಾಗಿತ್ವದಲ್ಲಿ ಇದನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.