ಮಂಗಳೂರು : ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ತಾಲೂಕು ಸಮಿತಿ, ಮಹಿಳಾ ಘಟಕ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಹಾಗೂ ಎಲ್ಲಾ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಮಾದಕದ್ರವ್ಯ ವ್ಯಸನಮುಕ್ತ ಮಂಗಳೂರು ಜಾಥಾ ನವೆಂಬರ್ 14ರ ಗುರುವಾರ ಸಂಜೆ 3 ಗಂಟೆಗೆ ಎಸ್.ಡಿ.ಎಂ. ಕಾನೂನು ಕಾಲೇಜು ಸಭಾಂಗಣದಲ್ಲಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Youth Awareness
ಹಿಂದೂ ಧರ್ಮೀಯರು ಆಚರಿಸುವ ದೀಪಾವಳಿ ಹಬ್ಬದ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯ ಇದೆ : ಶಾಸಕ ಯಶ್ಪಾಲ್ ಸುವರ್ಣ
ಉಡುಪಿ : ಹಿಂದೂ ಧರ್ಮೀಯರು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡುವ ಬೆಳಕಿನ ಹಬ್ಬದ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯ ಇದೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಸುವರ್ಣ ತಿಳಿಸಿದರು.
ಅವರು ಮೂಡುಬೆಟ್ಟು ಶ್ರೀ ಸಾಯಿಬಾಬಾ ಮಂದಿರದಲ್ಲಿ ಅಕ್ಟೋಬರ್ 27 ತಾರೀಕಿಗೆ ಶಬರಿ ಮಲೆ ಅಯ್ಯಪ್ಪ ಸಮಾಜಂ ಉಡುಪಿ ಜಿಲ್ಲೆ, ಶಬರಿ ಮಲೆ ಅಯ್ಯಪ್ಪ ಸಮಾಜಂ ಉಡುಪಿ ಮಹಿಳಾ ಘಟಕ, ಎ. ಪಿ. ಎಮ್. ಸಿ. ರಕ್ಷಣಾ ಸಮಿತಿ, ಉಡುಪಿ ಹಾಗೂ ಮೂಡುಬೆಟ್ಟು ಸಾಯಿಬಾಬಾ ಮಂದಿರದ ಸಹಭಾಗಿತ್ವದಲ್ಲಿ ನಡೆದ ಗೂಡುದೀಪ ಸ್ಪರ್ಧೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ದೀಪಾವಳಿ ಹಬ್ಬವನ್ನು ನಮ್ಮ ಹಿರಿಯೆರು ಬಹಳ ಶ್ರದ್ಧಾಭಕ್ತಿಯಿಂದ ಸಂಪ್ರದಾಯಬದ್ಧವಾಗಿ ಆಚರಿಸುತ್ತಿದ್ದರು. ಆದರೆ ಈಗಿನ ಯುವಪೀಳೀಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಮರೆಯುತ್ತಿದ್ದಾರೆ. ಅದನ್ನು ಈ ಗೂಡುದೀಪ ಸ್ಪರ್ಧೆಯ ಮುಖೇನ ಸಂಪ್ರದಾಯದ ಅರಿವು ಮೂಡಿಸುವ ಈ ಸಂಘಟಕರ ಕೆಲಸವನ್ನು ಮೆಚ್ಚುವಂತದ್ದು ಎಂದು ಆಯೋಜಕರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ‘ಶಬರಿಮಲೆ ಅಯ್ಯಪ್ಪ ಸಮಾಜಂ’ನ ಗೌರವಾಧ್ಯಕ್ಷರಾದ ಶ್ರೀ ಹರಿಯಪ್ಪ ಕೋಟ್ಯಾನ್, ಶ್ರೀ ಮೂಡುಬೆಟ್ಟು ತೋಟದಮನೆ ಸಾಯಿಬಾಬಾ ಮಂದಿರದ ಧರ್ಮದರ್ಶಿಗಳಾದ ಶ್ರೀ ದಿವಾಕರ ಶೆಟ್ಟಿ, ಉಡುಪಿ ನಗರಸಭಾಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಸಿರಿತುಳುವ ಚಾವಡಿ ಉಡುಪಿಯ ಕಾರ್ಯಾಧ್ಯಕ್ಷರಾದ ಶ್ರೀ ಈಶ್ವರ್ ಶೆಟ್ಟಿ ಚಿಟ್ಪಾಡಿ ಮಾತನಾಡಿದರು.
ಕಾರ್ಯಕ್ರಮದ ಸಂಯೋಜಕರಾದ ಉಡುಪಿ ನಗರಸಭಾ ಸದಸ್ಯ ಶ್ರೀ ವಿಜಯ ಕೊಡವೂರು ಪ್ರಾಸ್ತವಿಕ ಮಾತನಾಡಿದರು. ಶಬರಿಮಲೆ ಅಯ್ಯಪ್ಪ ಸಮಾಜಂ ನ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಮೆಂಡನ್ ಸ್ವಾಗತ ಮಾಡಿದರು, ಕಾರ್ಯದರ್ಶಿ ರಂಜಿತ್ ಶೆಟ್ಟಿ ವಂದಿಸಿದರು. ಜ್ಯೋತಿ ಎಸ್. ದೇವಾಡಿಗ ಪ್ರಾರ್ಥನೆ ಮಾಡಿದರು. ಕನ್ನಡ ಉಪನ್ಯಾಸಕರಾದ ರಾಮಾಂಜಿ ಉಡುಪಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಶಬರಿಮಲೆ ಅಯ್ಯಪ್ಪ ಸಮಾಜಂ ನ ಉಪಾಧ್ಯಕ್ಷರಾದ ಶ್ರೀ ಗೋಪಾಲ್ ಗುರುಸ್ವಾಮಿ, ಎ. ಪಿ. ಎಮ್. ಸಿ. ದ ವಿರೂಪಾಕ್ಷ, ಸಮಾಜಸೇವಕೆರಾದ ಶ್ರೀ ಸುಭಾಷಿತ್, ಶಬರಿಮಲೆ ಅಯ್ಯಪ್ಪ ಸಮಾಜಂ ಕಾಪು ವಲಯಾಧ್ಯಕ್ಷರಾದ ಶ್ರೀ ರಘರಾಮ ಶೆಟ್ಟಿ, ಮಾಧ್ಯಮ ಸಂಚಾಲಕಿ ಯಶೋದ ಕೇಶವ್ ಉಪಸ್ಥಿತರಿದ್ದರು.
ಗೂಡುದೀಪ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ವಿಜೇತರಿಗೆ ಸಮಾರೋಪದಲ್ಲಿ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಿಸಲಾಯಿತು.
ಮಂಗಳೂರು : “ಕಲ್ಕತ್ತಾದಲ್ಲಿ ನಡೆದಿರುವ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಹತ್ಯೆ ಘಟನೆಯಿಂದ ಹಿಡಿದು ಕಾರ್ಕಳದಲ್ಲಿ ನಡೆದಿರುವ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದವರೆಗೆ ದೇಶದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಎನ್ನುವುದೇ ಇಲ್ಲವಾಗಿದೆ. ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ ನೋಡಲಾಗುತ್ತದೆ. ಇದೆಲ್ಲದಕ್ಕೂ ಕಾರಣ ಮದ್ಯ ಮತ್ತು ಮಾದಕ ವಸ್ತುಗಳ ಬಳಕೆ ಮಾರಾಟವೇ ಆಗಿದೆ. ಇಷ್ಟೇ ಅಲ್ಲದೆ ಅಶ್ಲೀಲ ವೆಬ್ಸೈಟ್ಗಳ ವೀಕ್ಷಣೆ ಹಾಗೂ ಸಾಮಾಜಿಕ ಜಾಲತಾಣಗಳು ಯುವಜನತೆಯನ್ನು ದಾರಿ ತಪ್ಪಿಸುತ್ತಿವೆ. ಇಂತಹ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗವು ದೇಶಾದ್ಯಂತ ಒಂದು ತಿಂಗಳ ಕಾಲ ಅಭಿಯಾನವನ್ನು ಆಯೋಜಿಸಲಾಗುವುದು. ಸೆ.1ರಿಂದ 30ರವರೆಗೆ ನೈತಿಕತೆಯೇ ಸ್ವಾತಂತ್ರ್ಯ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಅಭಿಯಾನ ನಡೆಸಲಾಗುವುದು“ ಎಂದು ಅಭಿಯಾನದ ರಾಜ್ಯ ಸಮಿತಿ ಸದಸ್ಯೆ ಸಬೀಹಾ ಫಾತಿಮಾ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಸಂಘಟನೆಯ ಸಲಹಾ ಸಮಿತಿ ಸದಸ್ಯೆ ಶಮಿರಾ ಜಹಾನ್ ಮಾತನಾಡಿ, ಯುವ ಪೀಳಿಗೆಯನ್ನು ಸ್ವಾತಂತ್ರ್ಯದ ತಪ್ಪು ಕಲ್ಪನೆಯಿಂದ ಜಾಗೃತಗೊಳಿಸುವುದು ಮತ್ತು ಅದರಿಂದ ರಕ್ಷಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ವಿಶೇಷವಾಗಿ ಮುಸ್ಲಿಂ ಸಮುದಾಯದಲ್ಲಿ ಕುರ್ ಆನ್ ಮತ್ತು ಸುನ್ನತ್ ಬೆಳಕಿನಲ್ಲಿ ಇಸ್ಲಾಮಿನ ಸರಿಯಾದ ಅರಿವನ್ನು ಉಂಟು ಮಾಡುವುದು ಹಾಗೂ ತಮ್ಮ ಜೀವನವನ್ನು ಅದರ ಮಾನದಂಡದಲ್ಲಿ ಎರಕಹೊಯ್ಯುವಂತೆ ಪ್ರೇರೇಪಿಸುವುದರ ಕಡೆಗೆ ಗಮನವೀಯಲಾಗುವುದು. ಅಭಿಯಾನದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಉದಾಹರಣೆಗೆ, ‘ಧರ್ಮದಲ್ಲಿ ನೈತಿಕತೆಯ ಕಲ್ಪನೆ’ ಶೀರ್ಷಿಕೆಯಲ್ಲಿ ಅಂತರ್ ಧರ್ಮೀಯ ವಿಚಾರಗೋಷ್ಠಿ, ಮಹಿಳಾ ಸಮಾವೇಶ, ಶಾಲಾ-ಕಾಲೇಜುಗಳಲ್ಲೂ ಉಪನ್ಯಾಸ, ವೈಯಕ್ತಿಕ ಭೇಟಿ, ಸಮಾಜದ ಪ್ರಸಿದ್ಧ ವ್ಯಕ್ತಿಗಳ ಸಂದರ್ಶನ ನಡೆಸುವುದು ಅದರ ಪ್ರಮುಖ ಅಂಶಗಳನ್ನು ಆಯ್ದು ಸೋಶಿಯಲ್ ಮೀಡಿಯಾದ ಮೂಲಕ ಪ್ರಚಾರ ಮಾಡುವುದು. ಲೇಖನ, ಭಾಷಣ ಸ್ಪರ್ಧೆ, ಪೋಸ್ಟರ್ ಡಿಸೈನಿಂಗ್, ಕಥೆ ಮುಂತಾದವುಗಳ ಸ್ಪರ್ಧೆಗಳನ್ನು ನಡೆಸಲಾಗುವುದು. ಕರ್ನಾಟಕದಲ್ಲಿ ಈ ಅಭಿಯಾನದ ಉದ್ಘಾಟನೆಯು ಸೆಪ್ಟೆಂಬರ್ 1ರಂದು ನೆರವೇರಲಿರುವುದು. ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಡಾಕ್ಟರ್ ಮುಹಮ್ಮದ್ ಸಅದ್ ಬೆಳಗಾವಿಯವರು ಇದರ ಅಧ್ಯಕ್ಷತೆ ವಹಿಸಲಿದ್ದಾರೆ“ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ನಗರ ಸಂಚಾಲಕಿ ಸುಮಯ್ಯ ಹಮೀದುಲ್ಲ, ಶಹಿದಾ ಉಮರ್ ಉಪಸ್ಥಿತರಿದ್ದರು.
ಬ್ಲೂ ಪ್ಲಾಗ್ ಬೀಚ್ ನಲ್ಲಿ ಯುವತಿಯ ಫೊಟೋ ಶೂಟ್ – ಯುವತಿಯಿಂದ ದೂರು ಬಂದಿಲ್ಲ, ಪೊಲೀಸ್ ಸ್ಪಷ್ಟನೆ
ಪಡುಬಿದ್ರಿ : ಯುವತಿ ಮತ್ತು ಯುವಕ ಪಡುಬಿದ್ರೆ ಬ್ಲೂ ಫ್ಲಾಗ್ ಬೀಚಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಪೊಲೀಸರಿಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಅದರಂತೆ ಬೀಟ್ ಕರ್ತವ್ಯದಲ್ಲಿದ್ದ ಎಎಸ್ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿರುವ ಯುವಕ ಮತ್ತು ಯುವತಿಯನ್ನು ಕರೆದು ಬುದ್ಧಿಮಾತು ಹೇಳಿದ್ದಾರೆ. ಇದು ಬ್ಲೂ ಫ್ಲಾಗ್ ಬೀಚ್, ವಸತಿ ಪ್ರದೇಶ. ಇಲ್ಲಿ ಅಸಭ್ಯವಾಗಿ ವರ್ತಿಸಬಾರದು ಎಂದು ಹೇಳಿದ ಬಳಿಕ ಅವರು ಅಲ್ಲಿಂದ ತೆರಳಿದ್ದಾರೆ. ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿರುವುದಿಲ್ಲ. ಈ ಬಗ್ಗೆ ಯುವತಿಯನ್ನು ಸಂಪರ್ಕಿಸಿ ಅವರಿಗೆ ಯಾವುದೇ ದೂರುಗಳಿದ್ದಲ್ಲಿ ಮುಕ್ತವಾಗಿ ನೀಡಬಹುದಾಗಿ ತಿಳಿಸಲಾಗಿದೆ. ಈ ಬಗ್ಗೆ ದೂರು ಬಂದಲ್ಲಿ ಕಾನೂನಿನಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಆರೋಗ್ಯಪೂರ್ಣ ಬದುಕು : ಜಿಲ್ಲಾಧಿಕಾರಿ ವಿದ್ಯಾಕುಮಾರಿ
ಉಡುಪಿ : ಮಾದಕ ವಸ್ತುಗಳು ಸೇರಿದಂತೆ ಎಲ್ಲಾ ರೀತಿಯ ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಯುವಜನತೆ ಉತ್ತಮವಾದ ಆರೋಗ್ಯವನ್ನು ಹೊಂದಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.
ನಗರದ ಅಜ್ಜರಕಾಡು ಮಹಾತ್ಮ ಗಾಂಧೀ ಕ್ರೀಡಾಂಗಣದಲ್ಲಿ ಸೋಮವಾರ ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ನಿರ್ದೇಶನದಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್ ಕ್ರಾಸ್, ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಶಾಂತಿಗಾಗಿ ಜಿನೇವಾ ಒಪ್ಪಂದಗಳ ಸ್ಮರಣೆ ಮತ್ತು ನಶಾಮುಕ್ತ ಭಾರತ ಅಭಿಯಾನದ ಅಂಗವಾಗಿ ನಡೆದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶದಲ್ಲಿ ಅಪಾರವಾದ ಯುವಶಕ್ತಿಯಿದೆ. ಆದರೆ ಯುವ ಶಕ್ತಿಯ ಸದ್ಬಳಕೆಗೆ ಮಾದಕ ವ್ಯಸನ ಒಂದು ಸವಾಲಾಗಿದೆ. ಇದರಿಂದ ಮಾದಕ ವ್ಯಸನದ ವಿರುದ್ಧದ ಆಂದೋಲನವನ್ನು ಪ್ರತಿಯೊಬ್ಬ ವ್ಯಕ್ತಿಯ ಅಂತರಂಗಕ್ಕೂ ಮುಟ್ಟಿಸಬೇಕಾಗಿದೆ. ಇದು ಈ ಅಭಿಯಾನದ ಮುಖ್ಯ ಉದ್ದೇಶ ಎಂದರು.
ಯುವ ಪೀಳಿಗೆಯು ದುಶ್ಚಟಗಳಿಗೆ ಒಳಗಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ನಶಾ ಮುಕ್ತ ಭಾರತ ಅಭಿಯಾನವನ್ನು ಹಮ್ಮಿಕೊಂಡಿದ್ದು, ಯುವಜನತೆ ಮಾದಕವಸ್ತುಗಳ ವ್ಯಸನದ ದುಷ್ಪರಿಣಾಮಗಳನ್ನು ಅರಿತು ಮಾದಕ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ರಾಷ್ಟ್ರಧ್ವಜಕ್ಕಾಗುವ ಅಪಮಾನವನ್ನು ತಡೆಗಟ್ಟಲು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ
ಉಡುಪಿ : ಸುಪ್ರೀಂ ಕೋರ್ಟ್ ಆದೇಶದಂತೆ ಪ್ಲಾಸ್ಟಿಕ್ ರಾಷ್ಟ್ರ ಧ್ವಜ ಮಾರಾಟ ನಿಷೇಧಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಡುಪಿ ಜಿಲ್ಲೆಯಾದ್ಯಂತ ಉಡುಪಿ ಜಿಲ್ಲಾಧಿಕಾರಿಗಳಿಗೆ, ಉಡುಪಿ ನಗರ ಸಭಾ ಆಯುಕ್ತರಿಗೆ, ತಹಶೀಲ್ದಾರರಿಗೆ, ಜಿಲ್ಲಾ ಮತ್ತು ತಾಲ್ಲೂಕು ಶಿಕ್ಷಣ ಅಧಿಕಾರಿಗಳಿಗೆ ಹಾಗೂ ಅನೇಕ ಶಾಲಾ ಕಾಲೇಜುಗಳಿಗೆ ಮನವಿಯನ್ನು ನೀಡಲಾಯಿತು.
ರಾಷ್ಟ್ರ ಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ. ಆಗಸ್ಟ್ 15 ಮತ್ತು ಜನವರಿ 26ರಂದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತೇವೆ. ಆದರೆ ಅದೇ ದಿನ ಸಣ್ಣ ಸಣ್ಣ ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳು ಕಸ ಮತ್ತು ಚರಂಡಿಗಳಲ್ಲಿ ಕಾಣಸಿಗುತ್ತವೆ. ಪ್ಲಾಸ್ಟಿಕ್ ಧ್ವಜಗಳು ಬೇಗನೆ ನಾಶವಾಗುವುದಿಲ್ಲ ಆದ್ದರಿಂದ ಅನೇಕ ದಿನಗಳವರೆಗೆ ಈ ರಾಷ್ಟ್ರಧ್ವಜಗಳ ಅವಮಾನವನ್ನು ನೋಡಬೇಕಾಗುತ್ತದೆ. ರಾಜ್ಯ ಸರಕಾರ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಮನವಿಯನ್ನು ನೀಡಲಾಯಿತು. ಹಾಗೂ ವಿದ್ಯಾರ್ಥಿಗಳಿಂದ ರಾಷ್ಟ್ರಧ್ವಜದ ಅಪಮಾನ ಅಥವಾ ಅನಾದರವಾಗುವ ಕೃತ್ಯಗಳು ಆಗದಂತೆ ಶಿಕ್ಷಣ ಅಧಿಕಾರಿಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಮನವಿಯನ್ನು ನೀಡಲಾಯಿತು.
ಪ್ಲಾಸ್ಟಿಕ್ ಬಳಸಿ ರಾಷ್ಟ್ರಧ್ವಜದ ಅಪಮಾನ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದರಂತೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆಗಳು ಮತ್ತು ಶಿಕ್ಷಣ ಇಲಾಖೆಗಳು ಸುತ್ತೋಲೆ ಹೊರಡಿಸಿದ್ದವು. ಇದರೊಂದಿಗೆ ಕೇಂದ್ರ ಸರಕಾರ ಪ್ಲಾಸ್ಟಿಕ್ ನಿಷೇಧಿಸಲು ನಿರ್ಧರಿಸಿದೆ. ಅದರ ಪ್ರಕಾರ ಪ್ಲಾಸ್ಟಿಕ್ ರಾಷ್ಟ್ರ ಧ್ವಜ ಮಾರಾಟ ಸಂವಿಧಾನ ಬಾಹಿರವಾಗಿದೆ.
ಭಾವಿ ಪೀಳಿಗೆ ರಾಷ್ಟ್ರಾಭಿಮಾನಿಗಳಾಗಲಿ ಎಂಬ ಉದ್ದೇಶದಿಂದ ಸಮಿತಿಯು ಕಳೆದ 21 ವರ್ಷಗಳಿಂದ “ರಾಷ್ಟ್ರಧ್ವಜವನ್ನು ಗೌರವಿಸಿ” ಎಂಬ ಉಪಕ್ರಮವನ್ನು ಜಾರಿಗೊಳಿಸುತ್ತಿದೆ ಎಂದು ಹಿಂದೂ ಜನ ಜಾಗೃತಿ ಸಮಿತಿಯ ಸಮನ್ವಯಕರು ಚಂದ್ರ ಮೊಗವೀರ ತಿಳಿಸಿದ್ದಾರೆ.
ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಡಾ. ಮಹಾಂತೇಶ ಶಿವಯೋಗಿಗಳ ಕೊಡುಗೆ ಅಪಾರ : ಅಪರ ಜಿಲ್ಲಾಧಿಕಾರಿ
ಉಡುಪಿ : ಮಾದಕ ವ್ಯಸನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದರೊಂದಿಗೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಡಾ.ಮಹಾಂತೇಶ ಶಿವಯೋಗಿಗಳು ನೀಡಿದ ಕೊಡುಗೆ ಅಪಾರ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದರು.
ಅವರು ಗುರುವಾರ ನಗರದ ಪೂರ್ಣಪ್ರಜ್ಞ ಇಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ನ ಪ್ರಜ್ಞಾ ಹಾಲ್ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೂರ್ಣಪ್ರಜ್ಞ ಇಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಉಡುಪಿ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಮಹಾಂತೇಶ ಶಿವಯೋಗಿಗಳ ಜನ್ಮ ದಿನ-ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ.ಮಹಾಂತೇಶ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು. ಶ್ರೀಗಳು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ್ದಾರೆ. ಅನೇಕ ವ್ಯಸನಿಗಳು ಕುಡಿತದ ಚಟದಿಂದ ಹೊರಬರುವಂತೆ ಮಾಡಿ ಹಲವು ಕುಟುಂಬಗಳಿಗೆ ಬೆಳಕಾದ ಇವರ ಹುಟ್ಟಿದ ದಿನವನ್ನು ರಾಜ್ಯ ಸರ್ಕಾರವು ವ್ಯಸನಮುಕ್ತ ದಿನಾಚರಣೆ ಎಂದು ಆಚರಿಸುತ್ತಿರುವುದು ಸಮಂಜಸವಾಗಿದೆ ಎಂದರು.
ಡಾ. ಮಹಾಂತೇಶ ಶಿವಯೋಗಿಗಳು ಆ ದಿನಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ, ಅವರ ಶೈಲಿಯಲ್ಲಿ ಜನರಿಗೆ ಮನಮುಟ್ಟುವಂತೆ ತಿಳಿಸುವುದರೊಂದಿಗೆ ಸಾರ್ವಜನಿಕ ಹಾಗೂ ಸಾಮಾಜಿಕವಾಗಿ ಬದಲಾವಣೆ ಮಾಡಿದ್ದಾರೆ. ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು ಎಂದರು. ಡಾ. ಎ.ವಿ ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಉಪನ್ಯಾಸ ನೀಡಿ ಮಾತನಾಡುತ್ತಾ, ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೇ, ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ. ಆರಂಭದಲ್ಲಿ ಕುತೂಹಲ ಅಥವಾ ಸ್ನೇಹಿತರ ಒತ್ತಡದಿಂದ ತೊಡಗುವ ಮದ್ಯ ಅಥವಾ ಕಡಿಮೆ ಬೆಲೆಗೆ ಸಿಗುವ ತಂಬಾಕಿನಂತಹ ವಸ್ತುಗಳ ಸೇವನೆ ಕೊನೆಗೆ ಪ್ರಾಣಕ್ಕೆ ಕುತ್ತು ತರುವಂತಹ ಮಾದಕ ವಸ್ತುಗಳ ವ್ಯಸನಿಯನ್ನಾಗಿಸುತ್ತದೆ ಎಂದ ಅವರು, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ, ಜನರನ್ನು ತಪ್ಪು ದಾರಿಯಿಂದ ಸರಿ ದಾರಿಗೆ ತಲುಪಿಸಲು ಕೆಲಸ ಮಾಡಿದವರಲ್ಲಿ ಡಾ. ಮಹಾಂತೇಶ ಶಿವಯೋಗಿಗಳು ಒಬ್ಬರೂ ಎಂದರು. ಯುವಜನರು ದುಶ್ಚಟ ಎಂಬ ಚಕ್ರವ್ಯೂಹಕ್ಕೆ ಒಮ್ಮೆ ಸಿಲುಕಿದರೆ ಅದರಿಂದ ಹೊರಬರುವುದು ಕಷ್ಟಸಾಧ್ಯ. ವ್ಯಸನಿಗಳಾದ ಕೆಲವೇ ವ್ಯಕ್ತಿಗಳು ಮಾತ್ರ ವ್ಯಸನದ ಚಕ್ರವ್ಯೂಹದಿಂದ ಹೊರಬರುತ್ತಾರೆ. ಕೆಲವರು ಚಿಕಿತ್ಸೆ ಪಡೆದರೆ ಪೂರ್ಣ ಪ್ರಮಾಣದಲ್ಲಿ ಸದೃಢರಾಗುವುದಿಲ್ಲ ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಮಹಾಂತೇಶ ಶಿವಯೋಗಿಗಳು ದೇಶ-ವಿದೇಶಗಳಲ್ಲಿ ಸಂಚರಿಸಿ, ಜನರಲ್ಲಿರುವ ದುಶ್ಚಟಗಳನ್ನೆ ತಮ್ಮ ಜೋಳೀಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ, ವ್ಯಸನಮುಕ್ತ ಸಮಾಜಕ್ಕೆ ಅವಿರತವಾಗಿ ಶ್ರಮಿಸಿದ್ದಾರು ಎಂದರು. ಪೂರ್ಣಪ್ರಜ್ಞ ಇಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ನ ನಿರ್ದೇಶಕ ಡಾ. ಪಿ ಶ್ರೀರಮಣ ಐತಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಾದಕ ವಸ್ತುಗಳ ಸೇವನೆಯು ಒಂದು ರೀತಿಯ ಫ್ಯಾಷನ್ ಎಂಬುದಾಗಿ ತಿಳಿದ ಯುವಜನತೆ ಮಾದಕ ವಸ್ತುಗಳ ಕಡೆ ಆಕರ್ಷಿತರಾಗಿ ವ್ಯಸನಿಗಳಾಗುತ್ತಾರೆ. ಯುವಜನರಲ್ಲಿ ವ್ಯಸನದಿಂದ ಉಂಟಾಗುವ ದುಷ್ಟರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ರೋಗ ಬಂದು ಚಿಕಿತ್ಸೆ ಪಡೆಯುವ ಬದಲು ಮುಂಜಾಗ್ರತೆ ವಹಿಸುವುದು ಒಳ್ಳೆಯದು. ಅದೇ ರೀತಿ ವ್ಯಸನಿಗಳಾಗಿ ಚಿಕಿತ್ಸೆ ಪಡೆಯುವ ಬದಲು ಅದರಿಂದ ದೂರ ಉಳಿಯುವುದು ಒಳಿತು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್ ಮಾತನಾಡಿ, ಯುವಜನತೆ ಕ್ಷಣಿಕ ಸುಖಕ್ಕೆ ಮಾದಕ ವಸ್ತುಗಳ ಚಟಕ್ಕೆ ಮಾರುಹೋಗದೇ ಅವುಗಳಿಂದ ದೂರ ಉಳಿಯುವುದು ಒಳ್ಳೆಯದು. ಜಿಲ್ಲೆಯು ತಂಬಾಕು ಮುಕ್ತ ಸೇರಿದಂತೆ ಮತ್ತಿತರ ದುಶ್ಚಟಗಳಿಂದ ಜನರನ್ನು ಮುಕ್ತಗೊಳಿಸಲು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು. ಸಹಾಯಕ ಪ್ರಾಧ್ಯಾಪಕ ಡಾ. ನವೀನ್ ಕುಮಾರ್ ವ್ಯಸನಮುಕ್ತ ದಿನಾಚರಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ವಾರ್ತಾ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಶಿವಾನಂದ ಭಂಡರ್ಕರ್ ನಿರೂಪಿಸಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ್ತಿ ಮಂಜುಳಾ ಶೆಟ್ಟಿ ವಂದಿಸಿದರು.
ಆಚರಣೆ, ಸಂಪ್ರದಾಯಗಳ ಬಗ್ಗೆ ಯುವ ಜನಾಂಗಕ್ಕೆ ತಿಳಿಸುವ ಪ್ರಯತ್ನವಾಗಬೇಕು : ಮುಖ್ಯೋಪಾಧ್ಯಾಯಿನಿ ಸವಿತಾ ಸದಾನಂದ ಪೂಜಾರಿ
ಬೆಳ್ಮಣ್ : ಆಟಿ ತಿಂಗಳ ವಿವಿಧ ತಿನಿಸುಗಳು ನಮ್ಮ ದೇಹಕ್ಕೆ ಅವಶ್ಯಕವಾಗಿದೆ. ತುಳುವರ ನಂಬಿಕೆ, ಸಂಪ್ರದಾಯಗಳು ವಿಶೇಷವಾಗಿದೆ. ಅಂದು ಆಟಿ ದಿನಗಳು, ಸಂಭ್ರಮದ ದಿನಗಳಾಗಿರಲಿಲ್ಲ. ಇಂದು ಎಲ್ಲವೂ ಮರೆತು ಹೋಗುತ್ತಿರುವ ಕಾಲಘಟ್ಟದಲ್ಲಿ, ಪ್ರತಿ ಆಚರಣೆ, ಸಂಪ್ರದಾಯಗಳ ಬಗ್ಗೆ ಇಂದಿನ ಯುವ ಜನಾಂಗಕ್ಕೆ ತಿಳಿಸುವ ಪ್ರಯತ್ನ ನಾವು ಮಾಡಬೇಕಾಗಿದೆ ಎಂದು ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯಿನಿ ಸವಿತಾ ಸದಾನಂದ ಪೂಜಾರಿ ಹೇಳಿದರು.
ಬಿಲ್ಲವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಮುಂಡ್ಕೂರು-ಮುಲ್ಲಡ್ಕ-ಇನ್ನಾ ಇದರ ವತಿಯಿಂದ ಭಾನುವಾರ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆದ ಆಟಿಡೊಂಜಿ ದಿನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ತೋಟ ಮನೆ ಉಷಾ ವಾಸು ಅಂಚನ್ ದೀಪ ಬೆಳಗಿಸಿ ಕಾರ್ಯಕ್ರಮನ್ನು ಉದ್ಘಾಟಿಸಿದರು.
ಬಿಲ್ಲವ ಯವ ವೇದಿಕೆಯ ಅಧ್ಯಕ್ಷ ಹರೀಶ್ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಸಂತ ಪೂಜಾರಿ ಮುಂಬೈ, ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಕೃಷ್ಣ ಪೂಜಾರಿ ಬಂಟ್ರೊಟ್ಟು, ಬಿಲ್ಲವ ಸಂಘದ ಗೌರವ ಅಧ್ಯಕ್ಷ ಶ್ರೀಧರ್ ಸನಿಲ್, ಗ್ರಾಮ ಪಂಚಾಯತಿ ಸದಸ್ಯೆ ಶಶಿಕಲ ಕೃಷ್ಣ ಸಾಲ್ಯಾನ್, ಮಹಿಳಾ ವೇದಿಕೆಯ ಕೋಶಾಧಿಕಾರಿ ರಂಜನಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್ಸೆಸೆಲ್ಸಿಯಲ್ಲಿ ಶೇ. 98 ಅಂಕಗಳಿಸಿದ ದಿಶಾ ಎಸ್. ಅವರನ್ನು ಸನ್ಮಾನಿಸಲಾಯಿತು. ಬಳಿಕ ಎಸ್ಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದಿ.ಚಿಂದು ಪೂಜಾರ್ತಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಯುವ ವೇದಿಕೆಯ ಅಧ್ಯಕ್ಷ ಹರೀಶ್ ಪೂಜಾರಿ ಸ್ವಾಗತಿಸಿ, ಮಹಿಳಾ ವೇದಿಕೆಯ ಅಧ್ಯಕ್ಷೆ ಯಶೋಧ ವಂದಿಸಿದರು. ಉದಯ ಕುಮಾರ್ ಮುಂಡ್ಕೂರ್ ನಿರೂಪಿಸಿದರು.