ಮಂಗಳೂರು : ಕಿರಣ್, ನಿರ್ಕಾಣ್ ಕಾವ್ಯನಾಮದಲ್ಲಿ ಬರೆಯುತ್ತಿರುವ ಪ್ರತಿಭಾವಂತ ಯುವ ಬರಹಗಾರ ಫ್ಲೋಯ್ಡ್ ಕಿರಣ್ ಮೊರಾಸ್ 2024ನೇ ಸಾಲಿನ ‘ಶ್ರೀ ಲಿಯೋ ರೊಡ್ರಿಗಸ್ ಕುಟುಂಬ ದತ್ತಿ ಕಿಟಾಳ್ ಯುವ ಪುರಸ್ಕಾರ’ ಕ್ಕೆ ಆಯ್ಕೆಯಾಗಿದ್ದಾರೆ. ಉದ್ಯಮ ಆಡಳಿತದಲ್ಲಿ ಪದವಿ ಪಡೆದು ಪ್ರಸ್ತುತ ದುಬಾಯ್ಯಲ್ಲಿ ಉದ್ಯೋಗದಲ್ಲಿರುವ ಕಿರಣ್ ಅವರ ’ನಕ್ತಿರಾಂ’ (ನಕ್ಷತ್ರಗಳು) ಎಂಬ ಹೆಸರಿನ ಶಿಶುಗೀತೆಗಳ ಸಂಕಲನ ಇತ್ತೀಚೆಗೆ ಪ್ರಕಟವಾಗಿದೆ.
ಕವಿತೆ ಮತ್ತು ಪ್ರಬಂದ ಸಾಹಿತ್ಯದ ಕಡೆ ವಿಶೇಷ ಒಲವು ಇರುವ ಕಿರಣ್, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಿಂದ ಕೊಂಕಣಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿದ್ದು, ಕೊಂಕಣಿಯ ಹಿರಿಯ ಸಾಹಿತಿ “ವಲ್ಲಿ ವಗ್ಗ ಇವರ ಕತೆಗಳಲ್ಲಿ ಪ್ರಕೃತಿ” ಈ ಕುರಿತು ಸಂಶೋಧನಾ ಪ್ರಬಂದವನ್ನು ಮಂಡಿಸಿದ್ದಾರೆ. ಆರ್ಸೊ ಸಾಹಿತ್ಯ ಪತ್ರಿಕೆಯಲ್ಲಿ ನಿಯಮಿತವಾಗಿ ಇವರ ಅಂಕಣ ಪ್ರಕಟವಾಗುತ್ತಿದ್ದು, ನಿರ್ಕಾಣ್ಚೆಂ ಕೀರ್ಣ್, ಆಮ್ಚೊ ಯುವಕ್ ಪತ್ರಿಕೆಗಳಲ್ಲಿ ಸಂಪಾದಕ/ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿರುತ್ತಾರೆ.
ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ ಇದರ ಸದಸ್ಯರಾಗಿದ್ದು, ಪ್ರಸ್ತುತ ಕೊಲ್ಲಿ ರಾಷ್ಟದಿಂದ ಕರಾವಳಿಯ ಮಾಧ್ಯಮಗಳಿಗೆ ಅರೆಕಾಲಿಕ ವರದಿಗಾರರಾಗಿ ಸೇವೆ ನೀಡುತ್ತಿದಾರೆ. ಸಂಘಟಕರಾಗಿ ದುಬಾಯ್ಯಲ್ಲಿ ಗೀತ್ – ಗಜಾಲ್ ಸರಣಿ ಕಾರ್ಯಕ್ರಮ ಮತ್ತು ಬಹುಭಾಷಾ ಕವಿಗೋಷ್ಠಿಗಳನ್ನು ಆಯೋಜಿಸಿದ್ದಾರೆ.
ಅಬುದಾಬಿಯ ಅನಿವಾಸಿ ಉದ್ಯಮಿ ಮತ್ತು ಕೊಂಕಣಿ ಸಮರ್ಥಕರಾದ ಶ್ರೀ ಲಿಯೋ ರೊಡ್ರಿಗಸ್ ತಮ್ಮ ಕುಟುಂಬದ ವತಿಯಿಂದ, ಕಳೆದ 12 ವರ್ಷಗಳಿಂದ ಕೊಂಕಣಿ ಸಾಹಿತಿ ಮತು ಪತ್ರಕರ್ತ ಎಚ್. ಎಮ್. ಪೆರ್ನಾಲ್ ಅವರ ಕಿಟಾಳ್ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಮೂಲಕ ಪ್ರತಿಭಾವಂತ ಯುವ ಬರಹಗಾರನ್ನು ಪ್ರೊತ್ಸಾಹಿಸುವ ಸಲುವಾಗಿ ವರ್ಷಂಪ್ರತಿ ಯುವ ಪುರಸ್ಕಾರವನ್ನು ನೀಡುತ್ತಾ ಬಂದಿರುತ್ತಾರೆ. ಪುರಸ್ಕಾರ ರೂ. 25,000/- ನಗದು, ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
ಅಕ್ಟೋಬರ್ 5 ರಂದು ಶನಿವಾರ, ಸಂಜೆ 7.00 ಕ್ಕೆ, ಹಂಪನಕಟ್ಟೆ ಎಂ.ಸಿ.ಸಿ. ಬ್ಯಾಂಕಿನ ಆಡಳಿತ ಸೌಧದ, ಫಿ.ಎಫ್.ಎಕ್ಸ್. ಸಲ್ಡಾನ್ಹಾ ಸಭಾಗೃಹದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಎಮ್.ಎಲ್.ಸಿ. ಶ್ರೀ ಐವನ್ ಡಿ’ಸೊಜಾ ಮತ್ತು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಶ್ರೀ ಅನಿಲ್ ಲೋಬೊ ಮುಖ್ಯ ಅತಿಥಿಗಳಾಗಿರುತ್ತಾರೆ.