ತೆಕ್ಕಟ್ಟೆ : ತೆಕ್ಕಟ್ಟೆಯ ಹಯಗ್ರೀವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಶಸ್ವೀ ಕಲಾವೃಂದದ ಸಹಕಾರದೊಂದಿಗೆ ಯಕ್ಷಾಂತರಂಗ-ವ್ಯವಸಾಯೀ ಯಕ್ಷ ತಂಡದ ಯಕ್ಷ ದುಂದುಭಿ-2024ರಲ್ಲಿ ‘ಕಾರಂತ ಯಕ್ಷಾಂತರoಗ ಪ್ರಶಸ್ತಿ ಪ್ರದಾನ’ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ “ಹಿರಿಯರಾಗಿ ಸಾಕಷ್ಟು ಅನುಭವವುಳ್ಳ ಕೃಷ್ಣಮೂರ್ತಿ ಉರಾಳರು ಅನುಭವೀ ಕಲಾವಿದರ ತಂಡವನ್ನು ಕಟ್ಟಿಕೊಂಡು ‘ಯಕ್ಷಾಂತರಂಗ’ ಸಂಘಟನೆಯ ಮೂಲಕ ಸಾಂಪ್ರದಾಯಿಕ ಯಕ್ಷ ನಡೆಯನ್ನೇ ಸಾರ್ವತ್ರಿಕವಾಗಿ ಮತ್ತೆ ಮತ್ತೆ ನೆನಪಿಸುತ್ತಾ ಸಮಾಜದಲ್ಲಿ ಪ್ರಶಂಸೆಗೆ ಪಾತ್ರವಾಗುವಂತೆ ಮಾಡಿದ್ದಾರೆ. ಸಂಸ್ಥೆಯು ಮತ್ತೆ ಮತ್ತೆ ಸಾಂಸ್ಕೃತಿಕವಾಗಿ ಬೆಳಗುತ್ತಾ ಇನ್ನಷ್ಟು ಕಾಲ ಕಾಂತಿಯನ್ನು ನೀಡಲಿ.” ಎಂದು ಹಾರೈಸಿದರು.
ವೇದಿಕೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರನ್ನು ಗೌರವಿಸಿ ಅಭಿನಂದಿಸಲಾಯಿತು. ಅಭಿನಂದನೆಯನ್ನು ಸ್ವೀಕರಿಸಿದ ಡಾ. ತಲ್ಲೂರು ಸಂಸ್ಥೆಗೆ ಶುಭ ಹಾರೈಸಿದರು.
ಅಭಿನಂದನಾ ನುಡಿಗಳನ್ನಾಡಿದ ಖ್ಯಾತ ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು “ಯಕ್ಷಗಾನದ ಸರ್ವಾಂಗವನ್ನು ಬಲ್ಲ ಅನೇಕರ ಪರಂಪರೆಯ ಕೊಂಡಿ ಬಡಗು ತಿಟ್ಟಿನ ಹಿರಿಯ ಭಾಗವತ ಸಾಧಕ ಶ್ರೇಷ್ಠರು ಹೆರೆಂಜಾಲು ಗೋಪಾಲ ಗಾಣಿಗರು. ಯಕ್ಷರಂಗದಲ್ಲಿ ಹಂತ ಹಂತವಾಗಿ ಮೇಲೆ ಬಂದ ಗಾಣಿಗರು ಭಾಗವತಿಗೆ ಕಲಿತು ಮೇಳ ಸೇರಿಕೊಂಡವರು. ಮರವಂತೆಯ ಭೋರ್ಗೆರೆಯುವ ಕಡಲಿನ ಭಾಗವತರಾದ ನರಸಿಂಹ ದಾಸರ ಒಡನಾಟಿಕೆಯನ್ನು ಹೊಂದಿ ಸಾರ್ಥಕ್ಯವನ್ನು ಕಂಡುಕೊಂಡವರು. ಸಾಮಾಜಿಕ, ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಂಗಗಳ ಮೂರು ಘಟಕದಲ್ಲಿಯೂ ತನ್ನ ಛಾಪನ್ನು ಮೂಡಿಸಿದ ಹೆಗ್ಗಳಿಕೆ ಹೆರೆಂಜಾಲರದ್ದು. ‘ನಾಚುತ ನುಡಿದನು ಆ ಕ್ಷಣಪೂರ್ವನು | ಓ ಚೆಲುವೆ ನೀನ್ಯಾರೆನುತಾ’ ಎನ್ನುವ ಪದ್ಯ ಹೆರೆಂಜಾಲರ ಕಂಠದಲ್ಲಿ ಸುಶ್ರಾವ್ಯವಾಗಿ ಬರುತ್ತಿದ್ದಾಗ ಹಿರಿಯ ಪ್ರಸಂಗಕರ್ತ ಡಾ. ವೈ. ಚಂದ್ರಶೇಖರ ಶೆಟ್ಟಿಯವರು ಯಾವಾಗಲೂ ಮನದುಂಬಿ ಪ್ರಶಂಸಿಸುತ್ತಿದ್ದರು. ಕವಿಗೆ ಹಾಡುಗಾರಿಕೆಯಿಂದ ಸಂತೃಪ್ತಿಯನ್ನು ತಂದೊದಗಿಸಿದ ಕಲಾವಿದ ಹೆರೆಂಜಾಲರು. ಮುಮ್ಮೇಳ ಕಲಾವಿದರು ಹಾಗೂ ಹಿಮ್ಮೇಳ ಕಲಾವಿದರೂ ಗೋಪಾಲ ಗಾಣಿಗರೊಂದಿಗಿನ ರಂಗ ಸುಖವನ್ನು ಮತ್ತೆ ಮತ್ತೆ ನೆನಪಿಸಿ ಅನುಭವಿಸುವ ಪ್ರಶಂನೆಯ ನುಡಿಗೆ ಪಾತ್ರರಾದವರು ಹೆರೆಂಜಾಲರು.” ಎಂದರು.
ಈ ಸಂದರ್ಭದಲ್ಲಿ ವಿಜಯಾ ಬ್ಯಾಂಕಿನ ನಿವೃತ್ತ ಪ್ರಭಂದಕರಾದ ಭುವನಪ್ರಸಾದ್ ಹೆಗ್ಡೆ, ಪ್ರೊ. ಸಿ. ಉಪೇಂದ್ರ ಸೋಮಯಾಜಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ಸ್ಥಾಪಕ ವಿಶ್ವನಾಥ ಶೆಣೈ ಉಡುಪಿ, ಮಣೂರು ಸುಬ್ರಾಯ ಆಚಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೃಷ್ಣಮೂರ್ತಿ ಉರಾಳರು ಸ್ವಾಗತಿಸಿ, ಕೃಷ್ಣಮೂರ್ತಿ ಬ್ರಹ್ಮಾವರ ಕೃತಜ್ಞತಾ ನುಡಿಗಳನ್ನಾಡಿದರು. ಸಭಾಕಾರ್ಯಕ್ರಮದ ಬಳಿಕ ಯಕ್ಷಾಂತರಂಗದ ಕಲಾವಿದರಿಂದ ಯಕ್ಷಗಾನ ಪ್ರಸಂಗ ‘ಶರಸೇತುಬಂಧ ಮತ್ತು ಸುಭದ್ರಾ ಕಲ್ಯಾಣ’ ರಂಗದಲ್ಲಿ ಪ್ರದರ್ಶನಗೊಂಡಿತು.