ಉಡುಪಿ : ಜೀವ ವಿಮಾ ಅಧಿಕಾರಿಗಳಾಗಿ ನಿವೃತ್ತರಾಗಿದ್ದ, ಕಲಾಪ್ರೇಮಿ ಸರ್ಪಂಗಳ ಸುಬ್ರಮಣ್ಯ ಭಟ್ ಸ್ಮರಣೆಯಲ್ಲಿ ಪ್ರತೀ ವರ್ಷ ಆಯೋಜಿಸುತ್ತಾ ಬಂದ ಸರ್ಪಂಗಳ ಯಕ್ಷೋತ್ಸವ, ಯಕ್ಷಗಾನ ಕಲಾರಂಗದ ಐ.ವೈ.ಸಿ.ಸಭಾಂಗಣದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಕಟೀಲು ಮೇಳದ ಹಿರಿಯ ಭಾಗವತರಾದ ಪದ್ಯಾಣ ಗೋವಿಂದ ಭಟ್ ಇವರನ್ನು ಸರ್ಪಂಗಳ ಸುಬ್ರಮಣ್ಯ ಭಟ್ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚೌಕಿ ಸಹಾಯಕರಾಗಿ ಐದು ದಶಕಗಳ ಕಾಲ ಸೇವೆ ಸಲ್ಲಿಸಿದ ಕಾಟುಕುಕ್ಕೆ ಗೋವಿಂದ ನಾಯ್ಕ ಇವರಿಗೆ ಸರ್ಪಂಗಳ ಕಲಾ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಈರ್ವರನ್ನು ಸನ್ಮಾನಿಸಿದರು. ಕಾರ್ಯಕ್ರಮದ ಪ್ರಾಯೋಕರಾದ ಡಾ. ನರೇಂದ್ರ ಶೆಣೈ, ಮತ್ತು ಡಾ.ಶೈಲಜಾ ಭಟ್ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದ್ದರು. ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.