ಉಡುಪಿ : ಯಕ್ಷಗಾನ ಕಲೆ ಕಲಿಯಲು, ಅಭ್ಯಸಿಸಲು ಯಾವುದೇ ಪ್ರಾದೇಶಿಕ ಸರಹದ್ದಿನ ಭಯವಿಲ್ಲ. ಈ ನಿಟ್ಟಿನಲ್ಲಿ ಗೋವಾದ ಕನ್ನಡ ಸಮಾಜ ಯಕ್ಷಗಾನ ಪ್ರೇಮವನ್ನು ಮೆರೆದಿರುವುದು ಅಭಿನಂದನೀಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಇತ್ತೀಚೆಗೆ ಗೋವಾ ಪಣಜಿಯ ಕನ್ನಡ ಸಮಾಜದ ಆಶ್ರಯದಲ್ಲಿ ಮೆನೆಜಸ್ ಭ್ರಗಾಂಜ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕçತಿ ಇಲಾಖೆಯ ಜಂಟಿ ಸಹಕಾರದಲ್ಲಿ ಹಮ್ಮಿಕೊಂಡ ‘ಯಕ್ಷ ಶರಧಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಯಕ್ಷಗಾನ ಸೀಮೋಲ್ಲಂಘನೆ ನಡೆಸಿದೆ. ಬೆಂಗಳೂರು, ಮುಂಬಯಿ, ದೆಹಲಿ ಅಲ್ಲದೆ ಅಮೇರಿಕಾದಲ್ಲಿಯೂ ತನ್ನ ಕಂಪನ್ನು ಬೀರುತ್ತಿದೆ. ಅಪಾರ ಯಕ್ಷಗಾನ ಪ್ರೇಮಿಗಳನ್ನು ಹುಟ್ಟುಹಾಕಿದೆ. ಅಕಾಡೆಮಿ ಇಂತಹ ಯಕ್ಷಗಾನ ಕಾರ್ಯಕ್ರಮಗಳಿಗೆ ನಿರಂತರ ಪ್ರೋತಾಹ ನೀಡಲಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷನಾಗಿ ಸಾಧ್ಯವಾದಷ್ಟು ಪ್ರವಾಸ ಮಾಡಿ, ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.
ಗೋವಾ ಬಂಟ್ಸ್ ಸಂಘ ಮತ್ತು ಮಡಗಾಂವ್ ವಿಮಾ ಸರ್ವೇಯರ್ ಸಂಸ್ಥೆಯ ಕಾರ್ಯದರ್ಶಿ ಸುನೀಲ್ ಶೆಟ್ಟಿ, ಪತ್ರಕರ್ತ ಹಾಗೂ ಭಾಗವತ ಎ.ಜಿ.ಶಿವಾನಂದ ಭಟ್, ಗೋವಾ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರದ ಹಿರಿಯ ಪ್ರಾಧ್ಯಾಪಕ ಡಾ.ಗಣೇಶ್ ಸೋಮಯಾಜಿ ಸಂದರ್ಭೋಚಿತವಾಗಿ ಮಾತನಾಡಿ, ಯಕ್ಷಗಾನ ಕಲೆಯ ಮಹತ್ವವನ್ನು ಸಾರಿದರು.