ಉಡುಪಿ : ಯಕ್ಷಗಾನ ಕಲೆಯ ಬೆಳವಣಿಗೆಗೆ ವಿವಿಧ ಕಾರ್ಯಾಗಾರಗಳ ಮೂಲಕ ಪ್ರೋತ್ಸಾಹ ನೀಡುತ್ತಿರುವ ಯಕ್ಷಗಾನ ಅಕಾಡೆಮಿ ಅಭಿನಂದನಾರ್ಹ. ಮುಂದಿನ ದಿನಗಳಲ್ಲಿ ಯಕ್ಷಗಾನಕ್ಕೆ ಸರಕಾರದಿಂದ ಸಿಗುವ ಸರಕಾರಿ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ತಿಳಿಸಿದರು.

ಅವರು ಗುರುವಾರ ಕೋಟದ ಶ್ರೀ ಹಂದೆ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ನಾಗಪ್ಪಯ್ಯ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಕಾರದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ತನ್ನ ಸುವರ್ಣ ಪರ್ವದ 9ನೇ ಕಾರ್ಯಕ್ರಮವಾಗಿ ಹಮ್ಮಿಕೊಂಡ ಆಹ್ವಾನಿತ ಯಕ್ಷಗಾನ ತಂಡಗಳ ಎರಡು ದಿನಗಳ ಯಕ್ಷೋತ್ಸವ ‘ಯಕ್ಷ ತ್ರಿವಳಿ ‘ಮಕ್ಕಳ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಅವರು ಅಕಾಡೆಮಿ ಅಧ್ಯಕ್ಷರಾಗಿ, ಉದ್ಯಮಿಯಾಗಿ, ಈ ಹಿಂದೆ ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಯಕ್ಷಗಾನಕ್ಕೆ ನೀಡಿದ ಪ್ರೋತ್ಸಾಹವನ್ನು ಗಮನಿಸಿದ್ದೇನೆ. ಕೋಟ, ಸಾಲಿಗ್ರಾಮ ಯಕ್ಷಗಾನದ ತವರೂರು ಎನ್ನಲಡ್ಡಿಯಿಲ್ಲ. ಸಾಲಿಗ್ರಾಮ ಮಕ್ಕಳ ಮೇಳವನ್ನು 50 ವರ್ಷದಿಂದ ಹಿಂದೆ ಸ್ಥಾಪಿಸಿ ಅದನ್ನು ವಿಶ್ವಕ್ಕೆ ಪ್ರಚಾರ ಪಡಿಸಿದ ಹೆಗ್ಗಳಿಕೆ ಶ್ರೀಧರ ಹಂದೆ ಅವರಿಗೆ ಸಲ್ಲಬೇಕು. ಆಗಿನ ಕಾಲದಲ್ಲಿ ಮಕ್ಕಳ ಯಕ್ಷಗಾನ ತಂಡವನ್ನು ಕಟ್ಟಿರುವುದು ಸುಲಭದ ಮಾತ್ರವಲ್ಲ. ಅಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿಯೂ ಮಕ್ಕಳ ಯಕ್ಷಗಾನ ತಂಡವನ್ನು ಕಟ್ಟಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲಬೇಕು ಎಂದು ಅವರು ತಿಳಿಸಿದರು. ಯಕ್ಷಗಾನಕ್ಕೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ನಾವು ಬದ್ಧರಿದ್ದೇವೆ. ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಕುಂದಾಪುರದ ಎಲ್ಲಾ ಪ್ರೌಢಶಾಲೆಗಳಲ್ಲಿ ಯಕ್ಷಗಾನ ಕಲಿಸುವಂತಾಗಬೇಕು ಎಂಬುದೇ ನಮ್ಮ ಆಶಯ ಎಂದು ಅವರು ಹೇಳಿದರು.
ಕೋಟ ಗೀತಾನಂದ ಫೌಂಡೇಶನ್ನ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ, ಸಾಲಿಗ್ರಾಮ ಮಕ್ಕಳ ಮೇಳ ಸುವರ್ಣ ಸಂಭ್ರಮದ 9ನೇ ಕಾರ್ಯಕ್ರಮವಾಗಿ ಇದೀಗ ಯಕ್ಷಗಾನ ತ್ರಿವಳಿ ಮೂಲಕ ಬಡಗುತಿಟ್ಟಿನ 2 ಯಕ್ಷಗಾನ ಹಾಗೂ ತೆಂಕುತಿಟ್ಟಿನ 1 ಪ್ರಸಂಗಗಳು ಪ್ರದರ್ಶನ ಮಾಡುತ್ತಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, ಕುಂದಾಪುರದ ಭಾಗದ ಮಕ್ಕಳು ಯಕ್ಷಗಾನವನ್ನು ಅತ್ಯಂತ ವೇಗವಾಗಿ ಗ್ರಹಿಸಲು ಇಲ್ಲಿನ ಮಣ್ಣಿನ ಗುಣವೇ ಕಾರಣವಾಗಿದೆ. ಯಕ್ಷ ಶಿಕ್ಷಣದಲ್ಲಿ ಭಾಗವಹಿಸುತ್ತಿರುವ ಮಕ್ಕಳಲ್ಲಿ ಹೆಣ್ಮಕ್ಕಳದ್ದೇ ಸಿಂಹಪಾಲು. ಅವರು ಸ್ವಲ್ಪ ಕಷ್ಟಪಟ್ಟರೆ ಮುಖವರ್ಣಿಕೆಯನ್ನೂ ತಾವೇ ಮಾಡಿಕೊಳ್ಳುವಷ್ಟು ಮುಂದುವರಿದಿರುವುದು ಉತ್ತಮ ಬೆಳವಣಿಗೆ. ವೇಷಭೂಷಣಗಳನ್ನು ತಾವೇ ಕಟ್ಟಿಕೊಳ್ಳುವ ಹಂತಕ್ಗಕೂ ಅವರನ್ನು ತಯಾರು ಮಾಡುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಶ್ರೀಧರ ಹಂದೆ ಅವರು 50 ವರ್ಷಗಳಿಂದ ಮಕ್ಕಳ ಯಕ್ಷಗಾನವನ್ನು ನಡೆಸಿಕೊಂಡು ಬರುತ್ತಿರುವುದು ಬೆರಗು ಹುಟ್ಟಿಸಿದೆ. ಇಡೀ ರಾಜ್ಯಕ್ಕೇ ಈ ಮೇಳ ಮಾದರಿಯಾಗಿದೆ. ಇದೀಗ ಶ್ರೀಧರ ಹಂದೆ ಅವರ ಮಗ ಸುಜಯೀಂದ್ರ ಹಂದೆ ಅವರು ಕೂಡಾ ತಂದೆಯ ಹಾದಿಯಲ್ಲಿಯೇ ಮುಂದುವರೆದಿರುವುದನ್ನು ಕಂಡಾಗ ಮಕ್ಕಳ ಯಕ್ಷಗಾನಕ್ಕೂ ಉತ್ತಮ ಭವಿಷ್ಯವಿದೆ ಎಂಬುದನ್ನು ಸಾಬೀತುಪಡಿಸಿದೆ. ಇಂದು ಅಕಾಡೆಮಿ ಮಕ್ಕಳಿಗೆ ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ದೃಷ್ಟಿಯಿಂದ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದೆ. ಪ್ರಸ್ತುತ ಯಕ್ಷಗಾನದಲ್ಲಿ ಪಾತ್ರಧಾರಿಗಳು ಯಕ್ಷಗಾನ ಚೌಕಟ್ಟನ್ನು ಮೀರಿ ಹೋಗುತ್ತಿದ್ದಾರೆ ಎಂದು ಅಕಾಡೆಮಿಗೆ ದೂರುಗಳು ಬರುತ್ತಿವೆ. ಅದನ್ನು ನಾವು ಸರಕಾರಕ್ಕೆ ಕಳುಹಿಸಿದ್ದೇವೆ. ಯಕ್ಷಗಾನ ಕಲಾವಿದರು ತಮ್ಮ ಪಾತ್ರದ ಇತಿಮಿತಿಯನ್ನು ಅರಿತುಕೊಂಡೇ ಅಭಿನಯಿಸಬೇಕು. ರಾಜಕೀಯ ಮಾತನಾಡುವುದು ಕಲೆಯ ದೃಷ್ಟಿಯಿಂದ ಸರಿಯಲ್ಲ ಎಂದು ಡಾ.ತಲ್ಲೂರು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಮಕ್ಕಳ ಯಕ್ಷಗಾನ ಕ್ಷೇತ್ರದ ಅನನ್ಯ ಸಾಧಕರಾದ ದೇವದಾಸ್ ರಾವ್ ಕೂಡ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಬಾರಿಕೆರೆ, ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕ ಎಚ್.ಶ್ರೀಧರ ಹಂದೆ, ಮಕ್ಕಳ ಯಕ್ಷಗಾನ ಕ್ಷೇತ್ರದ ಅನನ್ಯ ಸಾಧಕರಾದ ದೇವದಾಸ್ ರಾವ್ ಕೂಡ್ಲಿ, ಬಲರಾಮ್ ಕೆ., ಶ್ರೀಕಾಂತ ಉಡುಪ, ಮಕ್ಕಳ ಮೇಳದ ಉಪಾಧ್ಯಕ್ಷ ಜನಾರ್ದನ ಹಂದೆ ಉಪಸ್ಥಿತರಿದ್ದರು.
ಅಕಾಡೆಮಿಯ ಸದಸ್ಯ ಸಂಚಾಲಕ ರಾಘವ ಎಚ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್. ಸ್ವಾಗತಿಸಿದರು., ಸಾಲಿಗ್ರಾಮ ಮಕ್ಕಳ ಮೇಳದ ಕಾರ್ಯದರ್ಶಿ ಎಚ್.ಸುಜಯೀಂದ್ರ ಹಂದೆ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಲಾಪೀಠ ಕೋಟ ವತಿಯಿಂದ ಮೈಂದ ದ್ವಿವಿದ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.