ಉಳ್ಳಾಲ : ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕೆ ಇಪ್ಪತ್ತು ವರುಷ ಆಸುಪಾಸಿನ ಯುವತಿಯೋರ್ವಳು ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಸ್ಥಳೀಯರಿಗೆ ಸಿಕ್ಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರು ರಾಣಿಪುರ ರಿಷಿವನ ಕಾನ್ವೆಂಟ್ ಬಳಿ ನಡೆದಿದ್ದು, ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಬಗ್ಗೆ ಶಂಕಿಸಲಾಗಿದೆ.
ತೀವ್ರ ಅಸ್ವಸ್ಥಗೊಂಡಿರುವ ಯುವತಿಯನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಘಟನೆ ಕುರಿತು ತನಿಖೆ ಕೈಗೆತ್ತಿಕೊಂಡಿದ್ದಾರೆ.
ನಿನ್ನೆ ಮಧ್ಯರಾತ್ರಿ ಯುವತಿಯು ರಾಣಿಪುರ ಎಂಬಲ್ಲಿ ಸ್ಥಳೀಯರಿಗೆ ಸಿಕ್ಕಿದ್ದಾಳೆ ಎನ್ನಲಾಗಿದೆ. ಮಧ್ಯರಾತ್ರಿ ಸುಮಾರು 1.30 ಗಂಟೆ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ಯುವತಿಯು ಸ್ಥಳೀಯರೋರ್ವರ ಮನೆಯ ಬಾಗಿಲನ್ನು ತಟ್ಟಿದ್ದು ಕುಡಿಯಲು ನೀರು ಕೇಳಿದ್ದಾಳೆ. ಯುವತಿಯ ಮೈಮೇಲೆ ತರಚಿದ ಗಾಯಗಳಾಗಿದ್ದು, ಗಾಬರಿಗೊಂಡ ಸ್ಥಳೀಯರು ಆಕೆಯನ್ನ ಉಪಚರಿಸಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದು ಪೊಲೀಸರು ಆಕೆಯನ್ನ ಚಿಕಿತ್ಸೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕರ ತಂಡವೊಂದು ಯುವತಿಯನ್ನ ರಾಣಿಪುರದ ನೇತ್ರಾವತಿ ನದಿ ತಟದ ಬಳಿ ಕರೆತಂದಿದ್ದು ಆಕೆಯ ಮೇಲೆ ಅತ್ಯಾಚಾರವೆಸಗಿರುವ ಶಂಕೆ ವ್ಯಕ್ತವಾಗಿದೆ. ಹೊರ ರಾಜ್ಯದ ಕೂಲಿ ಕಾರ್ಮಿಕರು ಆಗಿಂದಾಗ್ಗೆ ಈ ನಿರ್ಜನ ಪ್ರದೇಶಕ್ಕೆ ಭೇಟಿ ಕೊಟ್ಟು ಗುಂಡು-ತುಂಡಿನ ಮೋಜು ಮಸ್ತಿ ಮಾಡುತ್ತಿರುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತರ ಸಹಿತ ಪೊಲೀಸರ ತನಿಖಾ ತಂಡವು ಭೇಟಿ ನೀಡಿ ಘಟನಾ ಸ್ಥಳದ ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸುತ್ತಿದೆ.