ಉಡುಪಿ : ಯಾವುದೇ ಪ್ರಕಾರದ ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಕಲಾಸಕ್ತರನ್ನು ತೊಡಗಿಸಿಕೊಳ್ಳುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ಯಕ್ಷಗಾನಕ್ಕೆ ಸಂಬoಧಿಸಿದoತೆ ಕರಾವಳಿ ಜಿಲ್ಲೆಗಳಲ್ಲಿ ಅತೀ ಹೆಚ್ಚು ಪ್ರೋತ್ಸಾಹ ಧಾರ್ಮಿಕ ಕೇಂದ್ರಗಳಿoದ ಸಿಗುತ್ತಿರುವುದು ಸಂತೋಷದ ಸಂಗತಿ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಬುಧವಾರ ಉಡುಪಿ ಕನ್ನರ್ಪಾಡಿಯ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ಸಹಯೋಗದಲ್ಲಿ ನೂತನವಾಗಿ ಆರಂಭಿಸಲಾದ ‘ಶ್ರೀ ಜಯದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಮಂಡಳಿ’ಯನ್ನು ಉದ್ಘಾಟಿಸಿ, ಶುಭ ಹಾರೈಸಿದರು.
ಈ ಹಿಂದೆ ಕಲೆಗಳಿಗೆ ರಾಜಾಶ್ರಯವಿತ್ತು. ಆದರೆ ಇಂದು ಸರಕಾರಗಳು, ಅಭಿಮಾನಿಗಳ ಪ್ರೋತ್ಸಾಹ ಯಕ್ಷಗಾನಕ್ಕೆ ಲಭ್ಯವಿದೆ. ನಮ್ಮ ರಾಜ್ಯ ಸರಕಾರದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಯಕ್ಷಗಾನ ಕಲೆಗೆ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದ್ದಾರೆ. ಸರಕಾರ ನೀಡುವ ಅನುದಾನವನ್ನು ಯಕ್ಷಗಾನ ಅಕಾಡೆಮಿ ಅರ್ಹ ಕಾರ್ಯಕ್ರಮಗಳಿಗೆ ನೀಡುತ್ತಿದೆ. ಮಕ್ಕಳ ಯಕ್ಷಗಾನ, ಹಿರಿಯ ಕಲಾವಿದರ ಹೆಸರಿನಲ್ಲಿ ಸಪ್ತಾಹ, ಯಕ್ಷಗಾನ ತರಬೇತಿಯಂತಹ ಕಾರ್ಯಕ್ರಮಗಳಿಗೆ ಅಕಾಡೆಮಿ ಸಹಕಾರ ನೀಡುತ್ತಿದೆ. ಸಂಘಸoಸ್ಥೆಗಳು ಇದರ ಪ್ರಯೋಜನ ಪಡೆಯಬೇಕು ಎಂದು ಅವರು ಮನವಿ ಮಾಡಿದರು.
ಉಡುಪಿಯ ಯಕ್ಷಗಾನ ಕಲಾರಂಗ ಅಧ್ಯಕ್ಷ ಗಂಗಾಧರ ರಾವ್ ಅವರ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಇದೀಗ ಜಯಪ್ರಕಾಶ್ ಕೆದ್ಲಾಯ ಅವರ ಗೌರವಾಧ್ಯಕ್ಷತೆಯಲ್ಲಿ ನೂತನ ಯಕ್ಷಗಾನ ಕಲಾಮಂಡಳಿ ಅಸ್ವಿತ್ವಕ್ಕೆ ಬಂದಿರುವುದು ಕಲೆಯ ಉಳಿವು ಬೆಳವಣಿಗೆಯ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆ. ಯಕ್ಷಗಾನ ಅಕಾಡೆಮಿ ಇಂತಹ ಯೋಜನೆಗಳಿಗೆ ನಿರಂತರ ಪ್ರೋತ್ಸಾಹ ನೀಡಲಿದೆ ಎಂದರು.
ಯಕ್ಷಗಾನ ಕಲಾರಂಗ ಅಧ್ಯಕ್ಷ ಗಂಗಾಧರ ರಾವ್ ಮಾತನಾಡಿ, ಯಕ್ಷಗಾನ ಕಲಿಕೆಯಿಂದ ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆ ಆಗುತ್ತಿರುವುದನ್ನು ನಾವು ಕಂಡಿದ್ದೇವೆ. ಪ್ರಸ್ತುತ ಜಿಲ್ಲೆಯ 90ಕ್ಕೂ ಅಧಿಕ ಶಾಲೆಗಳಲ್ಲಿ 3000ದಷ್ಟು ಮಕ್ಕಳು ಯಕ್ಷಗಾನ ಕಲಿಯುತ್ತಿದ್ದಾರೆ. ಇದರಲ್ಲಿ ಮೂರನೇ ಎರಡರಷ್ಟು ಹೆಣ್ಮಕ್ಕಳಿರುವುದು ಹೆಮ್ಮೆಯ ಸಂಗತಿ ಎಂದರು.
ಮೇಳದ ಗೌರವಾಧ್ಯಕ್ಷ ಎಚ್.ಜಯಪ್ರಕಾಶ್ ಕೆದ್ಲಾಯ ಮಾತನಾಡಿ, ದೇವಳಗಳ ಆಶ್ರಯದಲ್ಲಿ ಹಲವಾರು ಯಕ್ಷಗಾನ ಕಲಾಮಂಡಳಿಗಳು, ಮೇಳಗಳು ಇಂದು ಬಹುಜನಪ್ರಿಯವಾಗಿರುವುದನ್ನು ಕಂಡಿದ್ದೇವೆ. ಪ್ರಸ್ತುತ ಈ ಕನ್ನರ್ಪಾಡಿ ಜಯದುರ್ಗಾ ದೇವಳದ ಈ ಮೇಳ 2024ರ ಫೆಬ್ರವರಿಯಲ್ಲಿ ಯಕ್ಷಗಾನ ಆಸಕ್ತ ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ 23 ಮಂದಿ ಸಮಾನ ಮನಸ್ಕರು ಸೇರಿಕೊಂಡು ಯಕ್ಷಗಾನ ಗುರು ವಾಗೀಶ್ವರ ರಾವ್ ಕಲ್ಮಂಜೆ ಇವರ ನೇತೃತ್ವದಲ್ಲಿ ಯಕ್ಷಗಾನ ತರಬೇತಿ ಪಡೆದಿದ್ದಾರೆ. ಕಳೆದ ಒಂದು ವರ್ಷದಿಂದ ಯಕ್ಷಗಾನ ತರಬೇತಿ ನಡೆಯುತ್ತಾ ಬಂದಿದೆ. ಇದೀಗ ಈ ತಂಡ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧವಾಗಿ ನಿಂತಿದೆ ಎಂದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಿತು. ಯಕ್ಷಗಾನ ಗುರು ವಾಗೀಶ್ವರ ರಾವ್ ಕಲ್ಮಂಜೆ ಹಾಗೂ ಭಾಗವತ ಕೇಶವ ಆಚಾರ್ ನೀಲಾವರ ಇವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಯಕ್ಷಗಾನ ಮೇಳದ ಅಧ್ಯಕ್ಷ ರಾಘವೇಂದ್ರ ಭಟ್, ಕಿನ್ನಿಮುಲ್ಕಿ ಬ್ರಾಹ್ಮಣ ಸಂಘದ ಅಧ್ಯಕ್ಷ ರಾಜೇಂದ್ರ ಎಂ.ಎನ್., ಕಡೆಕಾರು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ನಾರಾಯಣ ರಾವ್, ಕಿನ್ನಿಮುಲ್ಕಿ ಬ್ರಹ್ಮ ಬೈದರ್ಕಳ ಗರೋಡಿಯ ಅರ್ಚಕ ಭಾಸ್ಕರ ಸುವರ್ಣ, ಕಡೆಕಾರ್ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯೆ ಆಶಾ ತಿಲಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.