ಉಡುಪಿ : ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ – ಸಂಜೀವಿನಿ, ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಹೆಬ್ರಿ, ಗ್ರಾಮ ಪಂಚಾಯತ್ ಹೆಬ್ರಿ ಹಾಗೂ ಹೆಬ್ಬೇರಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಹೆಬ್ಬೇರಿ ಉತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಸಂಜೀವಿನಿ ಮಾರಾಟ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಬ್ರಿ ರಾಮ ಮಂದಿರದ ಮುಂಭಾಗದಲ್ಲಿ ಫೆಬ್ರವರಿ 13 ರಿಂದ 15 ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಈ ಮಾರಾಟ ಮೇಳದಲ್ಲಿ ಮಹಿಳೆಯರು ತಯಾರಿಸಿದ ಗೃಹ ಉಪಯೋಗಿ ವಸ್ತುಗಳು, ಕರಕುಶಲ ವಸ್ತುಗಳು, ಟೆರೇಕೋಟಾ ವಸ್ತುಗಳು, ಕೃತಕ ಆಭರಣ, ಬಟ್ಟೆಬ್ಯಾಗ್, ಆಯುರ್ವೇದಿಕ್ ಉತ್ಪನ್ನಗಳು, ಹೆಬ್ರಿ ಹನಿ ಇತ್ಯಾದಿ ಉತ್ಪನ್ನಗಳು ಲಭ್ಯವಿರುತ್ತದೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೀವಿನಿ ಮಹಿಳೆಯರು, ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳನ್ನು ಹಮ್ಮಿಕೊಂಡಿದ್ದು, ಈ ಎಲ್ಲಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಜೀವಿನಿ ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹ ನೀಡುವಂತೆ ಹೆಬ್ರಿ ತಾಲೂಕು ಪಂಚಾಯತ್ ಕಚೇರಿ ಪ್ರಕಟಣೆ ತಿಳಿಸಿದೆ.
Women Entrepreneurs
ಉಡುಪಿ : ಉಡುಪಿಯ ಮಹಿಳಾ ಉದ್ದಿಮೆದಾರರ ಸಂಘಟನೆ ‘ಪವರ್’ ವತಿಯಿಂದ ಮಹಿಳಾ ಉದ್ಯಮಿಗಳ ಉತ್ಪನ್ನಗಳು ಹಾಗೂ ಕೌಶಲ್ಯಗಳಿಗೆ ವೇದಿಕೆಯಾದ ‘ಪವರ್ ಪರ್ಬ’ ಇದೇ ಫೆ. 7, 8 ಮತ್ತು 9ರಂದು ಉಡುಪಿಯ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ತನುಜಾ ಮಾಬೆನ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳು, ಅವರ ಸಂಸ್ಥೆಯ ಸೇವೆ, ಕೌಶಲ್ಯ, ಪಾಂಡಿತ್ಯವನ್ನು ಗ್ರಾಹಕರೆದುರು ಪ್ರದರ್ಶಿಸಿ ಅವರನ್ನು ಒಗ್ಗೂಡಿಸುವುದು ಪವರ್ ಪರ್ಬದ ಕಲ್ಪನೆಯಾಗಿದೆ ಎಂದರು.
ಫೆ. 7ರಂದು ಸಂಜೆ 4.30ಕ್ಕೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಪವರ್ ಪರ್ಬಕ್ಕೆ ಚಾಲನೆ ನೀಡಲಿದ್ದಾರೆ. ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎಮ್ಎಸ್ಎಮ್ಇ ಜಂಟಿ ನಿರ್ದೇಶಕ ಕೆ. ಸಾಕ್ರೊಟೀಸ್ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಕೌಶಲಾಭಿವೃದ್ದಿ ಮಳಿಗೆಯನ್ನು ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಪವರ್ ಪರ್ಬದ ಸಂಯೋಜಕಿ ಸುಗುಣಾ ಸುವರ್ಣ ಮಾತನಾಡಿ, ಕೇಂದ್ರ ಸರಕಾರದ ಪಿಎಂಎಸ್ ಸ್ಕೀಮ್ ಆಫ್ ಎಂಎಸ್ಎಂಇ ಸಹಯೋಗದೊಂದಿಗೆ ಈ ಪವರ್ ಪರ್ಬವನ್ನು ಆಯೋಜಿಸಲಾಗುತ್ತಿದ್ದು, ಒಟ್ಟು 150ಕ್ಕೂ ಅಧಿಕ ಮಳಿಗೆಗಳನ್ನು ಮಹಿಳಾ ಉದ್ಯಮಿಗಳಿಗಾಗಿ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ 60 ಮಳಿಗೆಗಳು ಪಿಎಂಎಸ್ ಸ್ಕೀಮ್ ಆಫ್ ಎಂಎಸ್ಎಂಇ ಮಳಿಗೆಗಳಾಗಿರುತ್ತವೆ ಎಂದರು.
ಆಭರಣ, ಆಹಾರ, ಚಿತ್ರಕಲೆ, ಕರಕೌಶಲ್ಯ, ವಸ್ತ್ರ ವಿನ್ಯಾಸ, ಗೃಹಾಲಂಕಾರ, ಸೌಂದರ್ಯ ವರ್ಧಕಗಳು, ಕ್ರಿಯಾತ್ಮಕ ವಸ್ತುಗಳು ಮೊದಲಾದ ವಸ್ತುಗಳ ಮಳಿಗೆ ಇರಲಿದೆ. ಈ ಪವರ್ ಪರ್ಬದ ಪ್ರಚಾರದ ಭಾಗವಾಗಿ ಫೆ.5ರಂದು ಸಂಜೆ 4.30ಕ್ಕೆ ರಜತಾದ್ರಿ ಮಣಿಪಾಲದಿಂದ ಉಡುಪಿಯವರೆಗೆ ಕಾರು ಮತ್ತು ಬೈಕ್ ರ್ಯಾಲಿ ಆಯೋಜಿಸಲಾಗಿದೆ. ಪವರ್ನ ಸದಸ್ಯರು ಮತ್ತು ಪ್ರದರ್ಶಕರು ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಪ್ರಿಯಾ ಕಾಮತ್, ಕೋಶಾಧಿಕಾರಿ ಪುಷ್ಪಾ ಜಿ.ರಾವ್, ನೋಂದಣಿ ಸಂಯೋಜಕಿ ಸುಪ್ರಿಯಾ ಕಾಮತ್, ಸ್ಥಾಪಕ ಅಧ್ಯಕ್ಷ ರೇಣು ಜಯರಾಮ್, ನಿಕಟ ಪೂರ್ವ ಅಧ್ಯಕ್ಷರಾದ ತಾರಾ ತಿಮ್ಮಯ್ಯ, ಸುವರ್ಷಾ ಮಿಂಚ್, ಶೃತಿ ಶೆಣೈ ಉಪಸ್ಥಿತರಿದ್ದರು.
ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು : ಶಾಸಕ ಉಮಾನಾಥ್ ಕೋಟ್ಯಾನ್
ಮೂಡುಬಿದಿರೆ : ಟೈಲರಿಂಗ್ ಉದ್ಯಮಕ್ಕೆ ಸಾಕಷ್ಟು ಬೇಡಿಕೆಯಿದ್ದು ಮಹಿಳೆಯರು ತರಬೇತಿಯನ್ನು ಪಡೆದು ಸ್ವ-ಉದ್ಯೋಗದತ್ತ ಗಮನ ಹರಿಸುವ ಮೂಲಕ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಸಲಹೆ ನೀಡಿದ್ದಾರೆ.
![](https://maaxmedia.in/wp-content/uploads/2025/01/Umanath-Kotyan-02.jpeg)
ಮಂಗಳವಾರ ತಾಲೂಕು ಆಡಳಿತ ಸೌಧದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಮಹಿಳೆಯರಿಗೆ ನೀಡಲಾಗುವ ಉಚಿತ ಹೊಲಿಗೆ ಯಂತ್ರವನ್ನು ತಾಲೂಕಿನ 36 ಅರ್ಹ ಮಹಿಳಾ ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು. ಟೈಲರಿಂಗ್ ಒಳ್ಳೆಯ ಉದ್ಯಮವಾಗಿದೆ. ಹಾಗಾಗಿ ಟೈಲರಿಂಗ್ನಲ್ಲಿ ತರಬೇತಿಯನ್ನು ಪಡೆದು ಸ್ವ ಉದ್ಯಮ ಆರಂಭಿಸಿ ಎಂದರು.
ಈ ಸಂದರ್ಭದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮಂಜುನಾಥ್ ಹಾಗೂ ಅರ್ಹ ಫಲಾನುಭವಿಗಳು ಉಪಸ್ಥಿತರಿದ್ದರು.