ಮಂಗಳೂರು : ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕಾಡಾನೆಯೊಂದು ನುಗ್ಗಿ ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ. ರವಿವಾರ ರಾತ್ರಿ ವೇಳೆ ಒಂಟಿ ಸಲಗ ದೇಗುಲದೊಳಗೆ, ದೇವಾಲಯದ ಪರಿಸರದ ಸುತ್ತಾಮುತ್ತಾ ಓಡಾಡಿದೆ. ತಕ್ಷಣ ಅರಣ್ಯ ಇಲಾಖೆ, ಪೊಲೀಸರು ಹಾಗೂ ಸ್ಥಳೀಯರು ಪರಿಶ್ರಮ ಪಟ್ಟು ಕಾಡನೆಯನ್ನು ಮರಳಿ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾತ್ರಿ ವೇಳೆ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇಗುಲದೊಳಗೆ ನುಗ್ಗಿದ ಒಂಟಿ ಸಲಗವನ್ನು ಕಂಡು ಭಕ್ತರು ದೇಗುಲದ ಆನೆ ಎಂದು ಕೈ ಮುಗಿಯಲು ಮುಂದಾಗಿದ್ದಾರೆ. ಆದರೆ ಇದು ದೇಗುಲದ ಆನೆಯಲ್ಲ ಎಂದು ಕ್ಷೇತ್ರದ ಸಿಬ್ಬಂದಿ ಭಕ್ತರಿಗೆ ಸೂಚಿಸಿದ್ದಾರೆ. ತಕ್ಷಣ ಎಲ್ಲಾ ಭಕ್ತರನ್ನು ದೂರ ಓಡುವಂತೆ ದೇವಾಲಯದ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಇದರಿಂದ ಕೆಲಕಾಲ ಕ್ಷೇತ್ರದಲ್ಲಿ ಬಾರೀ ಆತಂಕದ ಸನ್ನಿವೇಶ ಉಂಟಾಗಿದೆ.
ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಬಂದು ಕಾಡಾನೆಯನ್ನು ಮರಳಿ ಕಾಡಿಗೆ ಓಡಿಸಲು ಹರ ಸಾಹಸ ಪಟ್ಟಿದ್ದಾರೆ. ಈ ವೇಳೆ ಪೊಲೀಸರು, ಅರಣ್ಯ ಇಲಾಖೆಯೊಂದಿಗೆ ಸ್ಥಳೀಯರೂ ಕೈಜೋಡಿಸಿ ಸತತ ಕಾರ್ಯಚರಣೆ ನಡೆಸಿ ಕಾಡಾನೆಯನ್ನು ಕಾಡಿಗೆ ಓಡಿಸಿದ್ದಾರೆ. ಸದ್ಯ, ಕಾಡಾನೆ ಯಾರಿಗೂ ತೊಂದರೆ ಮಾಡದೆ ದೇಗುಲದ ಆವರಣ ಬಿಟ್ಟು ಕಾಡಿಗೆ ತೆರಳಿದೆ. ಮತ್ತೆ ಕಾಡಾನೆ ಮರಳಿ ಬರುವ ಸಾಧ್ಯತೆಯಿದೆ. ಆದ್ದರಿಂದ ಭಕ್ತರು ಹಾಗೂ ಸಿಬ್ಬಂದಿ ಎಚ್ಚರ ವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.