ಪುತ್ತೂರು : ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ತೆಂಕಿಲದಲ್ಲಿ ಶುಕ್ರವಾರ ನಸುಕಿನ ಜಾವದ ವೇಳೆ ಗುಡ್ಡ ಕುಸಿದಿದೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಬದಲಿ ರಸ್ತೆಯಾಗಿ ಪುತ್ತೂರು ಪೇಟೆ ಬಳಸಿ ವಾಹನ ಸಂಚರಿಸಬೇಕಾಗಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲದಲ್ಲಿ ಆಗಾಗ ಗುಡ್ಡಕುಸಿಯುತ್ತಲೇ ಇದ್ದು ಇದೀಗ ಭಾರಿ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದೆ. ಈಗಾಗಲೇ ನಗರಸಭೆ ಅಧಿಕಾರಿಗಳು, ಪೊಲೀಸರು ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
Weather
ಆಗುಂಬೆ ಘಾಟಿಯ 5ನೇ ತಿರುವಿನಲ್ಲಿ ಗುಡ್ಡಜರಿತ; ರಸ್ತೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತ
ಹೆಮ್ಮಾಡಿ ಬಳಿ ಗಾಳಿ ಮಳೆಗೆ ಬೃಹತ್ ಮರ ಬಿದ್ದು ವಿದ್ಯುತ್ ಕಂಬಗಳು ಜಖಂ; ಶಾಲಾ ಬಸ್ ಹಾದುಹೋದ ತಕ್ಷಣ ಘಟನೆ, ತಪ್ಪಿದ ಭಾರೀ ಅನಾಹುತ
ಕುಂದಾಪುರ : ಇಲ್ಲಿಗೆ ಸಮೀಪದ ಹೆಮ್ಮಾಡಿ ಸಂತೋಷ್ ನಗರ ರಸ್ತೆಯಲ್ಲಿ ಬೃಹತ್ ಮರ ಬಿದ್ದು ವಿದ್ಯುತ್ ಕಂಬಗಳು ಜಖಂಗೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಭಾರಿ ಗಾಳಿ ಮಳೆಗೆ ಬೃಹತ್ ಮರವೊಂದು ನೆಲಕ್ಕುರುಳಿ ಹಲವು ವಿದ್ಯುತ್ ಕಂಬಗಳು ತುಂಡಾಗಿ ರಸ್ತೆಯಲ್ಲಿ ಬಿದಿದ್ದು ಸಂಚಾರ ಅಸ್ತವ್ಯಸ್ತಗೊಂಡಿತು. ಅಲ್ಲದೆ ಅದೃಷ್ಟವಶಾತ್ ಶಾಲೆ ಬಸ್ಸೊಂದು ರಸ್ತೆಯಲ್ಲಿ ಹಾದುಹೋದ ಒಂದೇ ನಿಮಿಷದಲ್ಲಿ ಮರಬಿದ್ದಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮೆಸ್ಕಾಂ ಲೈನ್ ಮ್ಯಾನ್ಗಳು ಬಂದಿದ್ದು ತೆರವು ಕಾರ್ಯಾಚರಣೆಯಲ್ಲಿ ಪಂಚಾಯತ್ ಸದಸ್ಯರು ಕೈಜೋಡಿಸಿದ್ದಾರೆ.
ಉಡುಪಿ : ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ, ಧಾರಾಕಾರ ಮಳೆ ಸುರಿಯುತ್ತಿರುವುದು ಉಡುಪಿ ಜಿಲ್ಲೆಯಲ್ಲಿ ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರಿದೆ. ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜನತೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಮನವಿ ಮಾಡಲಾಗಿದೆ.
ಹವಾಮಾನ ಇಲಾಖೆ ಪ್ರಕಾರ ಇಂದು ಮತ್ತು ನಾಳೆ ಭಾರೀ ಮಳೆಯ ಸಾಧ್ಯತೆ ಇದೆ.
ಮಳೆಗಾಲದಲ್ಲಿ ಅವಘಡಗಳ ಬಗ್ಗೆ ಎಚ್ಚರಿಕೆ ವಹಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ
ಉಡುಪಿ : ಮುಂಗಾರು ಮಳೆಯಲ್ಲಿ ನೆರೆ ಸೇರಿದಂತೆ ಮತ್ತಿತರ ಅವಘಡಗಳಿಂದ ಜನ ಜಾನುವಾರುಗಳಿಗೆ ಸಾವು ನೋವುಗಳು ಆಗದಂತೆ ಹಾಗೂ ಆಸ್ತಿ ಹಾನಿ ಆಗದಂತೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದರು.
ಉಡುಪಿ ಜಿಲ್ಲಾ ಪಂಚಾಯತ್ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಈ ಬಾರಿ ಹವಾಮಾನ ಇಲಾಖೆ, ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದ್ದು, ಸಿಡಿಲು ಬಡಿತದಿಂದ ಈಗಾಗಲೇ ಮೂರು ಜನರು ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಮಳೆಯಿಂದ ಹಾನಿಗೊಳಗಾದವರಿಗೆ ಬೇಗ ಪರಿಹಾರ ಒದಗಿಸಬೇಕು ಎಂದು ಆದೇಶಿಸಿದರು.
ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆಗೆ ಸಿಇಒಗೆ ಸೂಚನೆ ನೀಡಿದ ಸಚಿವರು, ಉಡುಪಿ ನಗರ ಪ್ರದೇಶದಲ್ಲಿ ಮಳೆ ನೀರು ಸರಾಗವಾಗಿ ಹರಿಯದ ಸಮಸ್ಯೆ ಕಳೆದಬಾರಿ ಉಂಟಾಗಿದ್ದು, ಈ ಬಾರಿ ಅಂತಹ ಅನಾಹುತ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವರು ಹೇಳಿದರು.
ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಆದಷ್ಟು ಶೀಘ್ರ ಆದ್ಯತೆ ಮೇಲೆ ಕೈಗೊಳ್ಳಬೇಕು. ಕುಡಿಯುವ ನೀರಿನೊಂದಿಗೆ ಮಳೆ ನೀರು ಸೇರಿದಂತೆ ಕಲುಷಿತ ನೀರು ಮಿಶ್ರಣಗೊಳ್ಳದಂತೆ ಕ್ರಮವಹಿಸಬೇಕು. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಗಿಂದಾಗ್ಗೆ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಗ್ರಾಮೀಣ ಭಾಗದ ಜನರು ಹಳ್ಳಕೊಳ್ಳ ದಾಟಲು ಕಾಲುಸಂಕಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಈ ಬಾರಿ ಆದ್ಯತೆ ಮೇರೆಗೆ ಕಾಲು ಸಂಕಗಳನ್ನು ನಿರ್ಮಿಸಬೇಕು. ಈ ಬಾರಿ ಜಿಲ್ಲೆಯಲ್ಲಿ 35,509 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ಗುರಿ ಹೊಂದಲಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಅಗತ್ಯ ಇರುವ ಬಿತ್ತನೆ ಬೀಜಗಳನ್ನು ರಸಗೊಬ್ಬರ, ದಾಸ್ತಾನುಗಳನ್ನು ಇಟ್ಟುಕೊಂಡು, ರೈತರಿಗೆ ಸಮರ್ಪಕವಾಗಿ ವಿತರಿಸಲು ಸಚಿವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.