ಉಡುಪಿ : ಮುಖ್ಯಮಂತ್ರಿ ಸಿದ್ಧರಾಮಯ್ಯ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿದ ಡೇ ಕೇರ್ ಕಿಮೋ ಥೆರಪಿ ಕೇಂದ್ರ ಸೇರಿದಂತೆ ರಾಜ್ಯದ 16 ಡೇ ಕೇರ್ ಕಿಮೋಥೆರಪಿ ಕೇಂದ್ರಗಳನ್ನು ಇಂದು ಮೈಸೂರಿನಿಂದ ವರ್ಚುವಲ್ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಮಾತನಾಡಿ, ಕ್ಯಾನ್ಸರ್ ಚಿಕಿತ್ಸೆಯ ಸರ್ಜರಿ ಮಾಡಿಸಿಕೊಂಡು ಬಂದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಕಿಮೊತೆರಪಿ ತುಂಬಾ ದುಬಾರಿಯಾಗಿರುವುದರಿಂದ ನಿರಂತರವಾಗಿ ಕ್ಯಾನ್ಸರ್ ರೋಗಿಗಳು ಕಿಮೊತೆರಫಿ ಮಾಡಿಸಿಕೊಡಲು ಮುಂದೆ ಬರುವುದಿಲ್ಲ. ಬಡ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಸರ್ಕಾರದ ವತಿಯಿಂದ ಡೇ ಕೇರ್ ಕಿಮೋ ಥೆರಪಿ ಕೇಂದ್ರವನ್ನು ಆರಂಭಿಸಲಾಗಿದ್ದು, ಕ್ಯಾನ್ಸರ್ ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಡೇ ಕೇರ್ ಕಿಮೋಥೆರಪಿ ಕೇಂದ್ರಗಳಲ್ಲಿ ನೋಂದಾಯಿತ ತೃತೀಯ ಹಂತದ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಪ್ರಾರಂಭಿಕ ಚಿಕಿತ್ಸೆ ಪಡೆದು ನಂತರ ಮುಂದುವರೆದ ಕಿಮೋಥೆರಪಿ ಚಿಕಿತ್ಸೆಗಳನ್ನು ಈ ಡೇ ಕೇರ್ ಕೇಂದ್ರಗಳಲ್ಲಿ ನೀಡಲಾಗುತ್ತದೆ. ಡೇ ಕೇರ್ ಕಿಮೋಥೆರಪಿ ಕೇಂದ್ರಗಳಲ್ಲಿ ಒಬ್ಬ ವೈದ್ಯಕೀಯ ಆಂಕೋಲಾಜಿಸ್ಟ್, ಕಿಮೋಥೆರಪಿ ಚಿಕಿತ್ಸೆಯಲ್ಲಿ ತರಬೇತಿ ಪಡೆದ ಇಬ್ಬರು ದಾದಿಯರು ಸೇರಿದಂತೆ ಮತ್ತಿತರರು ಇರಲಿದ್ದಾರೆ ಎಂದರು.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸರ್ಜಿಕಲ್ ಆಂಕೋಲಜಿ ಶಸ್ತ್ರಚಿಕಿತ್ಸಕರು ಇದ್ದು, ಅವರು ಈಗಾಗಲೇ ಹಲವು ಕ್ಯಾನ್ಸರ್ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆ ಬಳಿಕ ಕಿಮೋ ಥೆರಪಿಯನ್ನು ಮಾಡಲು ಈಗ ಈ ಕೇಂದ್ರದಿಂದ ಅನುಕೂಲವಾಗಲಿದೆ. ಅದಕ್ಕೆ ಬೇಕಾದ ಎಲ್ಲಾ ಉಪಕರಣಗಳನ್ನು ಸರ್ಕಾರ ಒದಗಿಸಿದೆ ಎಂದರು.