ಉಡುಪಿ : ಪುರಂದರದಾಸರು, ಕನಕದಾಸರು, ಜಗನ್ನಾಥ ದಾಸರು, ವಿಜಯದಾಸರು ಹೀಗೆ ಎಲ್ಲ ದಾಸರೂ ಉಡುಪಿಗೆ ಬಂದಿದ್ದಾರೆ. ಉಡುಪಿಯೆಂದರೆ ದಾಸರಿಗೆ ಪ್ರಿಯ, ಶ್ರೀಕೃಷನೂ ದಾಸರಿಗೆ ಪ್ರೀತಿಪಾತ್ರ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
“ದಾಸವರೇಣ್ಯ ಶ್ರೀ ವಿಜಯ ದಾಸರು” ಭಕ್ತಿಪ್ರಧಾನ ಚಲನಚಿತ್ರ ಪ್ರದರ್ಶನಕ್ಕೆ ರಾಜಾಂಗಣದಲ್ಲಿ ಚಾಲನೆ ನೀಡಿ ಶ್ರೀಪಾದರು ಅನುಗ್ರಹಿಸಿದರು.
ಉಡುಪಿ ಶ್ರೀಕೃಷ್ಣ ಬಹು ಬೇಗನೇ ಒಲಿಯುವವನು. ಹೀಗಾಗಿಯೇ ಪ್ರಸನ್ನ ಕೃಷ್ಣ ಎಂದೂ ಕರೆಯುವುದುಂಟು. ಕನಕದಾಸರ ಪ್ರಾರ್ಥನೆಗೆ ದರ್ಶನ ನೀಡಿದ್ದಾನೆ ಎಂದು ಹೇಳಿದರು. ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
ನಿರ್ಮಾಪಕ ತ್ರಿವಿಕ್ರಮ ಜೋಷಿ, ಸಿನೆಮಾದ ಪ್ರೋತ್ಸಾಹಕರಾದ ಫಣಿರಾಜ್ ಮತ್ತು ಉಮಾ ದಂಪತಿಗೆ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ನೀಡಿದರು. ಮಹಿತೋಷ್ ಆಚಾರ್ಯ ನಿರೂಪಿಸಿ, ವಂದಿಸಿದರು. ರಾಜಾಂಗಣದಲ್ಲಿ ದೊಡ್ಡ ಪರದೆಯ ಮೇಲೆ ದಾಸವರೇಣ್ಯ ಶ್ರೀ ವಿಜಯದಾಸರು ಚಲನಚಿತ್ರ ಪ್ರದರ್ಶನಗೊಂಡಿತು.