Udupi
ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ವಿರುದ್ದ ಸುಳ್ಳು ಸುದ್ದಿ – ದೂರು ದಾಖಲು
ಉಡುಪಿ : ನೈಜ ವಿಷಯ ಮರೆಮಾಚಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವ ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಉಡುಪಿ ನಗರಸಭೆಯ ವಿಪಕ್ಷ ನಾಯಕ ರಮೇಶ್ ಕಾಂಚನ್ ಅವರು ಉಡುಪಿ ಸೆನ್ ಠಾಣೆಗೆ ದೂರು ನೀಡಿದ್ದಾರೆ.

2024ರ ಡಿಸೆಂಬರ್ 24ರಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಉಡುಪಿಯ ಶಾಸಕರು ಮಸೀದಿ, ದೇವಸ್ಥಾನ ಹಾಗು ಚರ್ಚುಗಳ ವಿಷಯದ ಬಗ್ಗೆ ಚರ್ಚೆಗೆ ತೆಗೆದುಕೊಂಡಾಗ ನಾನು ಯಾವುದೇ ಧರ್ಮಕ್ಕೆ ಅಥವಾ ಯಾವುದೇ ಸಮುದಾಯದ ವಿರುದ್ಧ ಅಪಮಾನ ಮಾಡುವ ರೀತಿ ಮಾತನಾಡಿರುವುದಿಲ್ಲ. ಧಾರ್ಮಿಕ ಸಂಸ್ಥೆಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವ ಮೊದಲು ಸರಿಯಾಗಿ ಯೋಚಿಸಿ ಮುಂದುವರಿಯಬೇಕು ಎಂದು ಹೇಳಿರುವುದಾಗಿ ತಿಳಿಸಿದ್ದು, ಆದರೆ ಒಬ್ಬ ವ್ಯಕ್ತಿ ನಾನು ಹಿಂದೂ ಧರ್ಮಕ್ಕೆ ಅವಹೇಳನ ಮಾಡಿರುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುತ್ತಾನೆ ಎಂದು ಉಡುಪಿ ನಗರಸಭೆಯ ವಿರೋಧ ಪಕ್ಷದ ನಾಯಕರಾದ ರಮೇಶ್ ಕಾಂಚನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಾನು ಹಿಂದೂ ಧರ್ಮದ ವಿರೋಧಿ ಎಂದು ಬಿಂಬಿಸಿ ನನ್ನ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ಮಾಡಿರುತ್ತಾನೆ. ಹಾಗೆಯೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಆ ಮೂಲಕ ಪ್ರಯತ್ನಿಸಿರುತ್ತಾನೆ. ಆದ್ದರಿಂದ ಈ ಸುಳ್ಳು ಸುದ್ದಿ ಹಬ್ಬಿಸುವ ಆ ವ್ಯಕ್ತಿಗೆ ಎಚ್ಚರಿಕೆ ನೀಡಿ ಸರಿಯಾದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಉಡುಪಿ : ಇನ್ಸ್ಟಾಗ್ರಾಂ ಖಾತೆಗೆ ಬಂದ ವರ್ಕ್ ಫ್ರಮ್ ಹೋಮ್ ಲಿಂಕ್ ಒತ್ತಿ ಯುವತಿಯೋರ್ವಳು ಲಕ್ಷಾಂತರ ರೂ. ಹಣ ಕಳೆದುಕೊಂಡ ಘಟನೆ ನಡೆದಿದೆ.
ಶಿವಳ್ಳಿ ಗ್ರಾಮದ ಸಪ್ನಾ (28) ಅವರ ಇನ್ಸ್ಟಾಗ್ರಾಂ ಖಾತೆಗೆ ವರ್ಕ್ ಫ್ರಮ್ ಹೋಮ್ ಎಂದು ಲಿಂಕ್ ಬಂದಿದ್ದು, ಅದನ್ನವರು ಓಪನ್ ಮಾಡಿದ್ದಾರೆ. ಅದರ ಪ್ಲಾಟ್ ಫಾರ್ಮ್ನಲ್ಲಿ ಆರಂಭದಲ್ಲಿ 200 ರೂ. ಹೂಡಿಕೆ ಮಾಡಲು ಹೇಳಿದ್ದರು. ಅದಕ್ಕೆ 50 ರೂ. ಕಮಿಷನ್ ದೊರಕಿದೆ. ಇದನ್ನು ನಂಬಿದ ಯುವತಿ ಹೆಚ್ಚಿನ ಕಮಿಷನ್ ಬರುವುದಾಗಿ ನಂಬಿ ಡಿಸೆಂಬರ್ 9ರಿಂದ ಡಿಸೆಂಬರ್ 28ರ ನಡುವಿನ ಅವಧಿಯಲ್ಲಿ ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಫೋನ್ ಪೇ, ಪೇಟಿಎಂ ಹಾಗೂ ಕ್ಯಾಶ್ ಡೆವಾಸಿಟ್ ಮೂಲಕ ಒಟ್ಟು 12.46 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದು, ಹಣ ವಾಪಸ್ ಸಿಗದೆ ಮೋಸ ಹೋಗಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2025ನೇ ಸಾಲಿನ ಉಡುಪ-ಹಂದೆ ಪ್ರಶಸ್ತಿಗೆ ಹೆರೆಂಜಾಲು ಗೋಪಾಲ ಗಾಣಿಗ, ಶ್ರೀಪಾದ ಭಟ್ ಆಯ್ಕೆ
ಬ್ರಹ್ಮಾವರ : ಐವತ್ತರ ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ಯಕ್ಷಗಾನದಲ್ಲಿ ವಿಶ್ವ ಖ್ಯಾತಿ ಪಡೆದಿರುವ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರೂ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರೂ ಆಗಿರುವ ದಿ.ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಎಚ್. ಶ್ರೀಧರ ಹಂದೆ ಹೆಸರಿನ 2025ರ ಸಾಲಿನ ‘ಉಡುಪ-ಹಂದೆ ಪ್ರಶಸ್ತಿ’ಗೆ ಯಕ್ಷಗಾನದ ಪ್ರಸಿದ್ಧ ಭಾಗವತರಾದ ಹೆರೆಂಜಾಲು ಗೋಪಾಲ ಗಾಣಿಗ ಮತ್ತು ರಾಷ್ಟ್ರೀಯ ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್ ಭಾಜನರಾಗಿದ್ದಾರೆ.
ಕುಂದಾಪುರ ತಾಲೂಕಿನ ನಾಗೂರಿನ ಯಕ್ಷಗಾನ ಭಾಗವತ ಹೆರಂಜಾಲು ಗೋಪಾಲ ಗಾಣಿಗರು, ತಂದೆ ವೆಂಕಟರಮಣ ಗಾಣಿಗರಿಂದ ಬಳುವಳಿಯಾಗಿ ಬಂದ ಯಕ್ಷ ಸಂಪತ್ತನ್ನು ವಿಸ್ತರಿಸಿಕೊಳ್ಳುವಲ್ಲಿ ಡಾ.ಶಿವರಾಮ ಕಾರಂತರ ನಿರ್ದೇಶನದ ಉಡುಪಿಯ ಯಕ್ಷಗಾನ ಕೇಂದ್ರವನ್ನು ಸೇರಿ, ಗುರು ನೀಲಾವರ ರಾಮಕೃಷ್ಣಯ್ಯ ಮಹಾಬಲ ಕಾರಂತರ ಗರಡಿಯಲ್ಲಿ ಪಳಗಿ ಹಿಮ್ಮೇಳ ಮತ್ತು ಮುಮ್ಮೇಳಗಳಲ್ಲಿ ಸಾಧನೆ ಮಾಡಿದವರು.
ಡಾ.ಶಿವರಾಮ ಕಾರಂತರ ಯಕ್ಷ ಬ್ಯಾಲೆ ತಂಡದ ಮೂಲಕ ರಷ್ಯ, ಲಂಡನ್, ಪ್ರಾನ್ಸ್, ಕುವೈತ್ ಮೊದಲಾದೆಡೆ ಯಕ್ಷ ಕಂಪನ್ನು ಪಸರಿಸಿದವರು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗ ನಿರ್ದೇಶಕ ಬಿ.ವಿ. ಕಾರಂತರ ಶಾಕುಂತಲ ನೃತ್ಯ ನಾಟಕಕ್ಕೆ ಯಕ್ಷ ನೃತ್ಯವನ್ನು ನಿರ್ದೇಶಿಸಿದವರು. ಅಮೃತೇಶ್ವರಿ, ಮಾರಣಕಟ್ಟೆ, ಕಮಲಶಿಲೆ, ಮಂದರ್ತಿ, ಸಾಲಿಗ್ರಾಮ, ಶಿರಸಿ, ಸೌಕೂರು ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಪೌರಾಣಿಕ ಮತ್ತು ಆಧುನಿಕ ಪ್ರಸಂಗಗಳಲ್ಲಿ ಸೈ ಎನಿಸಿಕೊಂಡವರು.
ಶ್ರೀಪಾದ ಭಟ್ ಅವರು ಪ್ರೌಢ ಶಾಲಾ ಅಧ್ಯಾಪನದೊಂದಿಗೆ ಸುಮಾರು ನಲ್ವತ್ತು ವರ್ಷಗಳ ಕಾಲ ರಂಗಭೂಮಿಯಲ್ಲಿ ಕೃಷಿ ಮಾಡಿದವರು. ಜನಪದ ರಂಗ ಭೂಮಿ, ಯಕ್ಷಗಾನ ಹಾಗೂ ಆಧುನಿಕ ರಂಗಭೂಮಿ ಕುರಿತ ಸಂಶೋಧನೆಗಾಗಿ ಪಿಎಚ್ಡಿ ಪದವಿ ಪಡೆದವರು.
ಸಂತೆಕಟ್ಟೆ ರಾ.ಹೆ. ಕಾಮಗಾರಿ; ಉಡುಪಿ-ಕುಂದಾಪುರ ಹೋಗುವ ಮೇಲ್ಸೇತುವೆ ಲಘು ವಾಹನ ಸಂಚಾರಕ್ಕೆ ಮುಕ್ತ : ಸಂಸದ ಕೋಟ ಭರವಸೆ
ಉಡುಪಿ : ಉಡುಪಿಯಲ್ಲಿ ಬಹಳ ವಿವಾದ ಎಬ್ಬಿಸಿದ್ದ ಕಲ್ಯಾಣಪುರ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಮಹತ್ವದ ಪ್ರಗತಿಯಾಗಿದೆ. ಪ್ರತಿನಿತ್ಯ ಎಂಬಂತೆ ಈ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಆಮೆ ಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗೆ ರೋಸಿ ಹೋಗಿ ಜನ ಆಕ್ರೋಶ ವ್ಯಕ್ತಪಡಿಸಿದ್ದರು.

ಅಂಡರ್ ಪಾಸ್ ಕಾಮಗಾರಿ ನಡೆಯುವ ಸ್ಥಳದಲ್ಲಿ ಭಾರಿ ಪ್ರಮಾಣದ ಬಂಡೆಕಲ್ಲು ಪತ್ತೆಯಾಗಿ, ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇದೀಗ ಕಾಮಗಾರಿಯನ್ನು ತೀವ್ರಗೊಳಿಸಿದ್ದು ಉಡುಪಿಯಿಂದ ಕುಂದಾಪುರಕ್ಕೆ ಹೋಗುವ ಮೇಲ್ ಸೇತುವೆ ಮಾರ್ಗದಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಇದರಿಂದಾಗಿ ವಾಹನಗಳ ದಟ್ಟಣೆ ಕಡಿಮೆಯಾಗಲಿದ್ದು ಮುಂದಿನ ದಿನಗಳಲ್ಲಿ, ಅಂಡರ್ ಪಾಸ್ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ. ಅಂಡರ್ ಪಾಸ್ ಕಾಮಗಾರಿ ನಡೆಯುವ ರಸ್ತೆಗೆ ಶೀಘ್ರವೇ ಕಾಂಕ್ರೀಟೀಕರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಿಷೇದಿತ ಮಾದಕ ವಸ್ತು ಎಂಡಿಎಂಎ ಪೌಡರ್ ಹಾಗೂ ಚರಸ್ ಸಾಗಾಟ; ಆರೋಪಿ ಸೆರೆ : 3.25 ಲಕ್ಷ ಮೌಲ್ಯದ ಎಂ.ಡಿ.ಎಂ.ಎ, ಚರಸ್, ಇತರ ಸೊತ್ತು ವಶ
ಉಡುಪಿ : ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎ. ಪೌಡರ್ ಹಾಗೂ ಚರಸ್ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, 3.25 ಲಕ್ಷ ಮೌಲ್ಯದ ಎಂ.ಡಿ.ಎಂ.ಎ, ಚರಸ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಜ.4ರ ಶನಿವಾರ ನಡೆದಿದೆ.
ಬಂಧಿತ ಆರೋಪಿಯನ್ನು ಬ್ರಹ್ಮಾವರದ ಉಪ್ಪೂರು ನಿವಾಸಿ, ನಾಗರಾಜ್ (25) ಎಂದು ಗುರುತಿಸಲಾಗಿದೆ.
ಆರೋಪಿ ನಾಗರಾಜ್ನಿಂದ 3.25 ಲಕ್ಷ ರೂ. ಮೊತ್ತದ ಎಂ.ಡಿ.ಎಂ.ಎ, ಚರಸ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈತ ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಬೀಡಿನಗುಡ್ಡೆಯ ಮಹಾತ್ಮಾ ಗಾಂಧಿ ಬಯಲು ರಂಗಮಂದಿರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೋಟಾರು ಬೈಕ್ನಲ್ಲಿ ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎ ಪೌಡರ್ ಹಾಗೂ ಚರಸ್ ಮಾರಾಟ ಮಾಡುವ ಉದ್ದೇಶ ಹೊಂದಿದ್ದ ಎಂದು ತಿಳಿದು ಬಂದಿದೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ ಹಾಗೂ ಉಡುಪಿ ನಗರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ನೇತೃತ್ವದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪುನೀತ್ ಕುಮಾರ್, ಸಿಬ್ಬಂದಿಯವರಾದ ಸುರೇಶ್, ಬಶೀರ್, ಹೇಮಂತ್, ರಾಜೇಶ್, ವಿನಯ್, ಆನಂದ, ಶಿವಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಉಡುಪಿ : ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸಾರಿಗೆ ದರಗಳು ಶೇಕಡ 15ರಷ್ಟು ಹೆಚ್ಚಿಸಿರುವ ರಾಜ್ಯ ಸರಕಾರ ಕ್ರಮವನ್ನು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ.
ಡೀಸೆಲ್ ದರಗಳ ಹೆಚ್ಚಳ ಮತ್ತು ಸಿಬ್ಬಂದಿ ವೆಚ್ಚ ಹೆಚ್ಚಳದ ನೆಪದಲ್ಲಿ ದರ ಏರಿಕೆ ಮಾಡಿರುವುದು ಅಪ್ರಜಾಸತ್ತಾತ್ಮಕ ಮತ್ತು ಅವೈಜ್ಞಾನಿಕವಾಗಿದೆ. ಅಲ್ಲದೆ ಇದು ಸಾಮಾನ್ಯ ಜನರ ವಿರೋಧಿಯಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ನರಳುತ್ತಿರುವ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ರಾಜ್ಯ ಸರಕಾರ ದರ ಹೆಚ್ಚಳದ ತೀರ್ಮಾನವನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡೀಸೆಲ್ ಹೆಚ್ಚಳವಾಗಿದೆ ಎನ್ನುವ ಸರ್ಕಾರ, ಡೀಸೆಲ್ ದರ ಇಳಿದಾಗ ದರಗಳನ್ನು ಎಂದಾದರೂ ಕಡಿಮೆ ಮಾಡಿದೆಯೇ? ಅದಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಸಾರಿಗೆಯ ಡೀಸೆಲ್ ದರಗಳನ್ನು ಕಡಿಮೆ ಇಡಬೇಕಾದ್ದು ಸರಕಾರದ ಜವಾಬ್ದಾರಿಯಾಗಿದೆ. ವಿಪರ್ಯಾಸವೆಂದರೆ ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರವು ಮುಕ್ತ ಮಾರುಕಟ್ಟೆ ದರಗಳಿಗಿಂತ ದುಬಾರಿಯಾಗಿದೆ. ಸರಕಾರಕ್ಕೆ ನಿಜಕ್ಕೂ ವೆಚ್ಚವನ್ನು ಕಡಿಮೆ ಮಾಡಬೇಕೆಂದಿದ್ದರೆ ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರವನ್ನು ಸಬ್ಸಿಡಿ ದರದಲ್ಲಿ ಪೂರೈಸಬೇಕು ಅಥವಾ ಮುಕ್ತ ಮಾರುಕಟ್ಟೆ ದರಗಳಲ್ಲಾದರೂ ಪೂರೈಸಬೇಕು. ಆದ್ದರಿಂದ ಶೇಕಡ 15ರ ದರ ಹೆಚ್ಚಳಕ್ಕೆ ಡೀಸೆಲ್ ದರ ಹೆಚ್ಚಳ ಕಾರಣ ಎನ್ನುವುದು ಸುಳ್ಳು ನೆಪವಾಗಿದೆ.
ಸಿಬ್ಬಂದಿ ವೆಚ್ಚ ಹೆಚ್ಚಳವಾಗಿರುವುದು ಮತ್ತೊಂದು ಕಾರಣವೆನ್ನಲಾಗಿದೆ. ಈಗಾಗಲೇ ನಾಲ್ಕು ನಿಗಮಗಳಲ್ಲಿ ಸಿಬ್ಬಂದಿಗಳಿಗೆ ಸುಮಾರು 3 ವರ್ಷಗಳ ವೇತನ ಬಾಕಿ ನೀಡಬೇಕಿದೆ ಮತ್ತು ಹೊಸ ವೇತನ ಒಪ್ಪಂದ ಮಾಡಬೇಕಿದೆ. 1950ರ ಕಾಯ್ದೆ ಪ್ರಕಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸರ್ಕಾರ ಬಜೆಟ್ ಬೆಂಬಲ ನೀಡುವುದು ಅಗತ್ಯ. ಏಕೆಂದರೆ ಸಾರ್ವಜನಿಕ ಹಿತ ದೃಷ್ಟಿಯಿಂದ ಒದಗಿಸುವ ಸಾರಿಗೆಯನ್ನು ಲಾಭ ನಷ್ಟದ ಲೆಕ್ಕದಲ್ಲಿ ನೋಡಬಾರದು. ನಷ್ಟ ಉಂಟಾದಲ್ಲಿ ಸರಕಾರ ಅದನ್ನು ಭರಿಸಬೇಕಾಗುತ್ತದೆ. ಸಾರ್ವಜನಿಕ ಸಾರಿಗೆಗಳು ಎಲ್ಲಾ ಸಂದರ್ಭಗಳಲ್ಲೂ ಲಾಭವನ್ನು ತರಲು ಆಗುವುದಿಲ್ಲ. ಸಾರಿಗೆ ನಿಗಮಗಳ ಅರ್ಧದಷ್ಟು ಮಾರ್ಗ ಕಾರ್ಯಾಚರಣೆಗಳು ಗ್ರಾಮಾಂತರದಲ್ಲಿ ಇರುವುದರಿಂದ ಸಹಜವಾಗಿಯೇ ನಷ್ಟ ಹೊಂದುತ್ತದೆ. ಜನರ ಹಿತದೃಷ್ಟಿಯಿಂದ ಸರಕಾರ ಅದನ್ನು ಭರಿಸಬೇಕು. ಅದರ ಬದಲಿಗೆ ಬೆಲೆ ಹೆಚ್ಚಳ ಮಾಡುವುದು ಜನವಿರೋಧಿ ಕ್ರಮವಾಗಿದೆ
ಸಾರಿಗೆ ನಿಗಮಗಳ ನಷ್ಟ ಕಡಿಮೆ ಮಾಡಲು ಸಾರ್ವಜನಿಕರ, ರಾಜಕೀಯ ಪಕ್ಷಗಳ ಸಲಹೆಗಳನ್ನು ಆಡಳಿತ ವರ್ಗ ಪಡೆಯಬಹುದು. ಆಡಳಿತಾತ್ಮಕ ವಿಧಾನಗಳಲ್ಲಿ ಸಾಕಷ್ಟು ನಷ್ಟ ಕಡಿಮೆ ಮಾಡಬಹುದು. ಪ್ರಯಾಣಿಕರ ಸಾರಿಗೆ ದರ ಹೆಚ್ಚಳ ಉತ್ತಮ ಮಾರ್ಗವಲ್ಲ. ಎಲೆಕ್ಟ್ರಿಕ್ ಬಸ್ಸುಗಳನ್ನು ನಿಗಮಗಳೇ ಕಾರ್ಯಾಚರಣೆಯನ್ನು ಮಾಡಿದರೆ ಸಾಕಷ್ಟು ಆದಾಯ ಹೆಚ್ಚುತ್ತದೆ. ಖಾಸಗಿ ಕಂಪನಿಗಳ ಜೊತೆ ದುಬಾರಿ ಒಪ್ಪಂದಗಳನ್ನು ಮಾಡಿಕೊಂಡು ನಿಗಮಗಳೇ ನಷ್ಟ ಉಂಟು ಮಾಡಿಕೊಳ್ಳುತ್ತಿವೆ. ನಿಗಮಗಳ ಬಸ್ಸುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುವ ಮೂಲಕ ನಷ್ಟ ಕಡಿಮೆ ಮಾಡಬಹುದು. ಸರ್ಕಾರ ಈ ವಿಧಾನಗಳನ್ನು ಕೈ ಬಿಟ್ಟು ದರ ಹೆಚ್ಚಿಸುತ್ತಿರುವುದು ಜನವಿರೋಧಿಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಗರಣಗಳ ತನಿಖೆಯ ಹಾದಿ ತಪ್ಪಿಸಲು ಭ್ರಷ್ಟರ, ಸಿಬ್ಬಂದಿಗಳ ಪ್ರಯತ್ನ : ಗ್ರಾಪಂ ಸದಸ್ಯರ ಆರೋಪ
ಉಡುಪಿ : ಹೊಸ ವರ್ಷದ ಮೊದಲ ದಿನ ಸಿಬ್ಬಂದಿಗಳಿಂದಾಗಿ ಶಾಸನಬದ್ದ ಸ್ಥಳೀಯ ಆಡಳಿತ ಕಚೇರಿಗೆ ರಾಜಕೀಯ ಪ್ರೇರಿತವಾಗಿ ಬೀಗ ಜಡಿದು ಸಾರ್ವಜನಿಕ ಸೇವೆಗಳಿಗೆ ತೊಂದರೆಯನ್ನುಂಟು ಮಾಡಿರುವುದು ಬೈರಂಪಳ್ಳಿ ಗ್ರಾಪಂನಲ್ಲಿ ನಡೆದಿರುವ ಹಗರಣಗಳ ತನಿಖೆಯ ಹಾದಿ ತಪ್ಪಿಸುವ ಭ್ರಷ್ಟಾಚಾರಿಗಳು, ಕಳ್ಳರು ಹಾಗೂ ಭ್ರಷ್ಟ ಸಿಬ್ಬಂದಿಗಳ ಪ್ರಯತ್ನವಾಗಿದೆ ಎಂದು ಬೈರಂಪಳ್ಳಿ ಗ್ರಾಪಂನ ಸದಸ್ಯ ಡಾ.ಸಂತೋಷ ಕುಮಾರ್ ಹಾಗೂ ಉಪಾಧ್ಯಕ್ಷೆ ಅಮ್ಮಣ್ಣಿ ಶೆಟ್ಟಿ ಆರೋಪಿಸಿದ್ದಾರೆ.

ಜ.1ರಂದು ಅಪರಾಹ್ನ 12ಗಂಟೆಯವರೆಗೆ ಕಚೇರಿಗೆ ಬೀಗ ಜಡಿದ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ ಸಂತೋಷ್, ಪಂಚಾಯತ್ನ ಮೂವರು ಸಿಬ್ಬಂದಿಗಳು ಡಿ.19ರಂದೇ ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜಿನಾಮೆ ನೀಡಿದ್ದು ಡಿ.31 ಅವರ ಕೊನೆಯ ಕರ್ತವ್ಯದ ದಿನವಾಗಿತ್ತು. ಅದರಂತೆ ಅವರು ಅಂದು ಕಚೇರಿಯ ಬೀಗದಕೈಯನ್ನು ಗ್ರಾಪಂನ ಶಿಸ್ತು ಪ್ರಾಧಿಕಾರಿ ಅಧಿಕಾರಿಯಾದ ಪಿಡಿಓಗೆ ನೀಡದೇ ಅಧ್ಯಕ್ಷರ ಕೈಗೆ, ಅಧ್ಯಕ್ಷರ ಆದೇಶದಂತೆ ನೀಡಿದ್ದರು ಎಂದು ದೂರಿದರು.
ಅಧ್ಯಕ್ಷರು ಪಂಚಾಯತ್ನ ಬೀಗದ ಕೈಯನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ಪಂಚಾಯತ್ ಸಿಬ್ಬಂದಿಯೊಬ್ಬರು ಹೋದಾಗ ಅವರಿಗೆ ನೀಡದೇ ಬೆದರಿಕೆ ಹಾಕಿ ಪಂಚಾಯತ್ ಬೀಗ ತೆರೆಯಲು ಬಿಡುವುದಿಲ್ಲ ಎಂದು ತಿಳಿಸಿದ್ದರು. ಇಂದು ಸಂವಿಧಾನದ ಪ್ರಕಾರ ಅಕ್ಷಮ ಅಪರಾಧವಾಗಿದೆ ಎಂದು ಡಾ.ಸಂತೋಷ್ಕುಮಾರ್ ವಿವರಿಸಿದರು.
ಜ.1ರಂದು ಬೆಳಗ್ಗೆ 10ಗಂಟೆಗೆ ತೆರೆಯಬೇಕಿದ್ದ ಕಚೇರಿಯ ಬಾಗಿಲನ್ನು ಅಧ್ಯಕ್ಷರು 12ಗಂಟೆಯವರೆಗೆ ತನ್ನ ನಾಟಕೀಯ ವರ್ತನೆಯಿಂದ ಹಾಗೂ ದೂರಾಲೋಚನೆಯಿಂದ ತೆರೆಯದೇ ಉದ್ದೇಶಪೂರ್ವಕವಾಗಿ ತಡಮಾಡಿದ್ದಾರೆ. ಬಳಿಕ ಈ ವಿಷಯವನ್ನು ತಾಪಂನ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದು ಅವರನ್ನು ಸ್ಥಳಕ್ಕೆ ಕರೆಯಿಸಿ ಪಂಚಾಯತ್ ಬೀಗ ತೆರೆಯಲಾಗಿತ್ತು ಎಂದು ಹೇಳಿದರು.
ಇದು ಗ್ರಾಪಂನ ಕೆಲವು ಸದಸ್ಯರು, ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು ಹಾಗೂ ಭ್ರಷ್ಟ ಗುತ್ತಿಗೆದಾರರು ಸೇರಿ ಆಡಿರುವ ಕೃಪಾಪೋಷಿತ ನಾಟಕವಾಗಿದೆ. ಪಂಚಾಯತ್ನ ಸಿಬ್ಬಂದಿಗಳೂ ಇದರಲ್ಲಿ ಶಾಮೀಲಾಗಿರುವುದು ದುರದೃಷ್ಟಕರ. ಸಾರ್ವಜನಿಕರ ಹಣದ ಲೂಟಿಗೆ ಇವರೆಲ್ಲರೂ ಸೇರಿ ಮಾಡುತ್ತಿರುವ ಭ್ರಷ್ಟಾಚಾರದಿಂದ ಗ್ರಾಮಸ್ಥರಿಗೆ ತೊಂದರೆ ಉಂಟಾಗಿದೆ. ಇವರೊಂದಿಗೆ ಶಾಮೀಲಾಗಿ ಕರ್ತವ್ಯಚ್ಯುತಿ ಮಾಡಿರುವ ಸಿಬ್ಬಂದಿಗಳನ್ನು ಯಾವುದೇ ಕಾರಣಕ್ಕೂ ಮರುನೇಮಕ ಮಾಡಿಕೊಳ್ಳಬಾರದು ಎಂದು ಉಪಾಧ್ಯಕ್ಷರು ಸೇರಿದಂತೆ ಉಪಸ್ಥಿತರಿದ್ದ ಗ್ರಾಪಂ ಸದಸ್ಯರು ಆಗ್ರಹಿಸಿದರು.
ಬೈರಂಪಳ್ಳಿ ಗ್ರಾಪಂನಲ್ಲಿ ಕಳೆದ ಕೆಲವು ವರ್ಷಗಳಿಂದ ಹಗರಣಗಳು ನಡೆಯುತ್ತಿವೆ. 2021ರ ಜ.1ರಂದು ಪ್ರಾರಂಭ ಗೊಂಡ ಭ್ರಷ್ಟಾಚಾರದ ವಿರುದ್ಧದ ಹೋರಾಟ ಇದೀಗ ನಿರ್ಣಾಯಕ ಹಂತ ತಲುಪಿದೆ. 2024ರ ಮಾ.15ರಂದು ಜಿಪಂ ಸಿಇಓ ಅವರಿಗೆ ತಾನು ಮೂರನೇ ಬಾರಿ ಸಲ್ಲಿಸಿದ ದೂರಿಗೆ ಸ್ಪಂಧಿಸಿ ಸಿಇಓ ಪ್ರತೀಕ್ ಬಾಯಲ್ ಅವರು ತನಿಖಾ ತಂಡವನ್ನು ರಚಿಸಿದ್ದು, ಸಮಿತಿ ಇದೀಗ ವರದಿಯನ್ನು ಸಲ್ಲಿಸಿದೆ. ಗ್ರಾಪಂನಲ್ಲಿ ನಡೆದಿರುವ ಭ್ರಷ್ಟಾಚಾರ ಸಾಬೀತಾಗಿದ್ದು, ಲೂಟಿ ಹೊಡೆದ ಹಣವನ್ನು ಮರು ಪಾವತಿ ಮಾಡುವಂತೆ ಆದೇಶ ನೀಡಿದ್ದಾರೆ ಎಂದರು.
ವಿವಿಧ ಕಾಮಗಾರಿಗಳ ಗುತ್ತಿಗೆದಾರರು, ಪಂಚಾಯತ್ನ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು, ಹಿಂದಿನ ಪಿಡಿಓಗಳು, ಸಿಬ್ಬಂದಿಗಳು ಹಾಗೂ ಇಲಾಖಾ ಇಂಜಿನಿಯರ್ಗಳು ನೇರವಾಗಿ ಶಾಮೀಲಾಗಿ ಕೋಟ್ಯಾಂತರ ರೂ. ಹಂಚಿಕೆ ಮಾಡಿ ಕೊಂಡಿರುವುದು ಸಾಬೀತಾಗಿದೆ. ಇದರಿಂದ ಹತಾಶರಾಗಿ ತನಿಖೆಯ ಹಾದಿ ತಪ್ಪಿಸಿ, ತನಿಖೆಗೆ ಸಹಕರಿಸುತ್ತಿರುವ ಪಿಡಿಓ ಸುಮನಾರನ್ನು ಅಲ್ಲಿಂದ ವರ್ಗಾಯಿಸಲು ಎಲ್ಲರೂ ಸೇರಿಕೊಂಡು ಪ್ರಯತ್ನ ನಡೆಸುತಿದ್ದಾರೆ ಎಂದು ಡಾ.ಸಂತೋಷ್ ಆರೋಪಿಸಿದರು.
ಬೈರಂಪಳ್ಳಿ ಗ್ರಾಪಂ ಕಳೆದ 2 ದಶಕಗಳಿಗೂ ಅಧಿಕ ಸಮಯದಿಂದ ಬಿಜೆಪಿ ಬೆಂಬಲಿತ ಸದಸ್ಯರ ಆಡಳಿತದಲ್ಲಿದ್ದು, ಪ್ರಸಕ್ತ 3 ಮಂದಿ ಬಿಜೆಪಿ ಬೆಂಬಲಿತ ಹಾಗೂ 3 ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಅಮ್ಮಣ್ಣಿ ಶೆಟ್ಟಿ ಅಲ್ಲದೇ, ಸದಸ್ಯರಾದ ವಿಜಯಕುಮಾರ್, ವಿಜಯಶ್ರೀ ಭಟ್, ಗ್ರಾಮಸ್ಥರಾದ ಅನಿತ ಪೂಜಾರಿ ಹಾಗೂ ಕವಿತಾ ಉದಯ ಪೂಜಾರಿ ಉಪಸ್ಥಿತರಿದ್ದರು.
ಉಡುಪಿ : ಸವಿತಾ ಸಮಾಜ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಅಮ್ಮಂಜೆಯಲ್ಲಿ ನಿರ್ಮಾಣಗೊಂಡಿರುವ ನೂತನ ಟಿಶ್ಯೂ ಪೇಪರ್ ಕೈಗಾರಿಕಾ ಘಟಕದ ಉದ್ಘಾಟನಾ ಸಮಾರಂಭವು ಇದೇ ಜ.7ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ನೂತನ ಘಟಕವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸವಿತಾ ಟಿಶ್ಯೂ ಪೇಪರ್ ಉತ್ಪನ್ನಗಳ ಬಿಡುಗಡೆಗೊಳಿಸಲಿದ್ದಾರೆ. ಜಿಲ್ಲಾ ಸವಿತಾ ಸಮಾಜದ ಗೌರವ ಅಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಪ್ರಸ್ತಾವನೆ ಮಾಡಲಿದ್ದಾರೆ ಎಂದರು.
ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಅವಕಾಶಗಳನ್ನು ವೃದ್ಧಿಸುವ ಹಾಗೂ ಸ್ಥಳೀಯ ಆರ್ಥಿಕತೆಗೆ ವೇಗ ನೀಡುವ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಈ ಘಟಕದಲ್ಲಿ ಉನ್ನತ ಗುಣ ಮಟ್ಟದ ಟಿಶ್ಯೂ ಪೇಪರ್ ಉತ್ಪನ್ನಗಳನ್ನು ಉತ್ಪಾದಿಸಿ ಕ್ಷೌರಿಕ ಸಮುದಾಯದ ಅಗತ್ಯತೆಗಳನ್ನು ಪೂರೈಸುವ ಜೊತೆಗೆ ಹೊಟೇಲ್, ಬಾರ್ ಮತ್ತು ಕ್ಯಾಟರಿಂಗ್ ಉದ್ಯಮಗಳಿಗೂ ಒದಗಿಸಲಾಗುವುದು ಎಂದು ತಿಳಿಸಿದರು.
ಸಂಘದ ವತಿಯಿಂದ ಸವಿತಾ ಸಮುದಾಯದ ಆರೋಗ್ಯದ ದೃಷ್ಟಿಕೋನದಿಂದ ಆರಂಭಿಸಿರುವ ಸವಿತಾ ಡಯಾಗೋಸ್ಟಿಕ್ ಸೆಂಟರ್ನ ಉದ್ಘಾಟನೆ ಸಮಾರಂಭ ಜ.7ರಂದು ಮಧ್ಯಾಹ್ನ 3ಗಂಟೆಗೆ ಅಂಬಲಪಾಡಿ ಸವಿತಾ ಸಮಾಜ ಸಮುದಾಯ ಭವನದಲ್ಲಿ ನಡೆಯಲಿದೆ ಎಂದರು.
ಝೀರೋ ಟ್ರಾಫಿಕ್ನಲ್ಲಿ ಮಗು ಬೆಂಗಳೂರು ಆಸ್ಪತ್ರೆಗೆ ರವಾನೆ : ಈಶ್ವರ ಮಲ್ಪೆ ನೆರವು
ಉಡುಪಿ : ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ 6 ತಿಂಗಳ ಮಗುವನ್ನು ಸಮಾಜಸೇವಕ ಈಶ್ವರ ಮಲ್ಪೆ ಅವರು ತನ್ನ ಆ್ಯಂಬುಲೆನ್ಸ್ನಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಝೀರೋ ಟ್ರಾಫಿಕ್ನಲ್ಲಿ ಕರೆದುಕೊಂಡು ಹೋದರು.

ಮಣಿಪಾಲ, ಹಿರಿಯಡಕ, ಕಾರ್ಕಳ, ಬಜಗೋಳಿ, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಚಾರ್ಮಾಡಿ, ಮೂಡಿಗೆರೆ, ಬೇಳೂರು, ಹಾಸನ, ಚನ್ನರಾಯಪಟ್ಟಣ, ಬೇಳೂರು ಕ್ರಾಸ್, ನೆಲಮಂಗಲದ ಮೂಲಕ ಜಯದೇವ ಆಸ್ಪತ್ರೆಗೆ ತಲುಪಿಸಲಾಯಿತು.