ಉಡುಪಿ : ತೆಂಕನಿಡಿಯೂರು ಸರಕಾರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ರೋಶನ್ ಶೆಟ್ಟಿ ಅವರನ್ನು ಜಿಲ್ಲೆಯ ಗೃಹ ರಕ್ಷಕ ದಳ ಗೌರವ ಸಮಾದೇಷ್ಟರನ್ನಾಗಿ ರಾಜ್ಯ ಸರಕಾರ ನೇಮಿಸಿದೆ.
ಇವರು ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಉಡುಪಿ : ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಆದಿಶಕ್ತಿ ಹೂವಿನ ಅಂಗಡಿಯ ಮಾಲೀಕ, ಬೀಡಿನಗುಡ್ಡೆ ನಿವಾಸಿ ಸುಧಾಕರ ಶೇರಿಗಾರ್(75) ಅವರು ಸೋಮವಾರ ರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಉಡುಪಿ ನಗರದ ಬಸ್ ನಿಲ್ದಾಣದ ಬಳಿಯ ಆದಿಶಕ್ತಿ ಪ್ಲವರ್ ಸ್ಟಾಲ್ ಮೂರು ದಶಕಗಳಿಂದ ಹೆಚ್ಚುಕಾಲ ಮುನ್ನಡೆಸಿದ್ದರು. ಅವರು ಪತ್ನಿ, ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಉಡುಪಿ : ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನೆ ಕತ್ತು ಸೀಳಿ ಕೊಲೆಗೈದ ಭೀಕರ ಘಟನೆಯೊಂದು ಉಡುಪಿ ಹಳೆ ಕೆಎಸ್ಆರ್ಟಿಸಿ ಬಳಿಯ ಕೃಷ್ಣ ಕೃಪಾ ಬಿಲ್ಡಿಂಗ್ನ ನೆಲ ಅಂತಸ್ತಿನ ಕೊಠಡಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಕೊರಂಗ್ರಪಾಡಿಯ ಪ್ರಶಾಂತ್ ಶೆಟ್ಟಿ (32)ಕೊಲೆಯಾದ ವ್ಯಕ್ತಿ. ಈತನ ಸ್ನೇಹಿತ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ನಿವಾಸಿ ಈರಣ್ಣ ಯಾನೆ ದಿನೇಶ್ ಎಂಬಾತ ಕೊಲೆ ಮಾಡಿದ ಆರೋಪಿ. ಕಂಠಪೂರ್ತಿ ಕುಡಿದು ಇಬ್ಬರು ಜಗಳ ಮಾಡಿಕೊಂಡಿದ್ದು, ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಆರೋಪಿ ಈರಣ್ಣ ಹರಿತವಾದ ಚೂರಿಯಿಂದ ಪ್ರಶಾಂತ್ನ ಕತ್ತು ಸೀಳಿದ್ದಾನೆ.
ಗಂಭೀರವಾಗಿ ಗಾಯಗೊಂಡ ಪ್ರಶಾಂತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಕತ್ತು ಸೀಳಿದ ಬಳಿಕ ಆರೋಪಿಯು ಖುದ್ದು ಪೊಲೀಸರಿಗೆ ಕರೆ ಮಾಡಿ, ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಡಾ. ಅರುಣ್ ಕೆ., ಎಎಸ್ಪಿ ಸಿದ್ದಲಿಂಗಪ್ಪ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿದ್ದಾರೆ. ಮೇಲ್ನೋಟಕ್ಕೆ ಕ್ಷುಲ್ಲಕ ಕಾರಣಕ್ಕಾಗಿ ಕೊಲೆ ನಡೆದಿದೆ ಅಂತಾ ಕಂಡುಬಂದರೂ ಕೂಡ ಕೊಲೆಗೆ ಬೇರೆ ಏನಾದರೂ ಕಾರಣ ಇದೆಯೇ ಎಂಬುವುದನ್ನ ತನಿಖೆಯಿಂದ ತಿಳಿದುಬರಬೇಕಿದೆ.
ಉಡುಪಿ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟ ‘ರಜತ ಕ್ರೀಡಾ ಸಂಭ್ರಮ’ ಇದರ ಒಂಭತ್ತು ಬಣ್ಣಗಳ ಜೆರ್ಸಿ ಅನಾವರಣ ಕಾರ್ಯಕ್ರಮವನ್ನು ಶನಿವಾರ ಉಡುಪಿ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅಂತಾರಾಷ್ಟ್ರೀಯ ಕಿವುಡರ ವಿಶ್ವ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಹಾಗೂ ಪ್ರಸ್ತುತ ಕರ್ನಾಟಕ ತಂಡದ ನಾಯಕ ಕುಂದಾಪುರದ ಪೃಥ್ವಿರಾಜ್ ಶೆಟ್ಟಿ ಅನಾವರಣಗೊಳಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು.
ಉಡುಪಿ ಜಿಲ್ಲಾ ಸ್ಕೌಟ್ಸ್ ಆಯುಕ್ತ ಜನಾರ್ದನ ಕೊಡವೂರು, ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ರಜತ ಮಹೋತ್ಸವ ಸಮಿತಿಯ ಜತೆ ಕಾರ್ಯದರ್ಶಿ ದೀಪಕ್ ಜೈನ್, ಕ್ರೀಡಾ ಸಂಚಾಲಕ ರಾಜು ಖಾರ್ವಿ, ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ವಂದಿಸಿದರು. ಕಾರ್ಯದರ್ಶಿ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟದ ಪಥ ಸಂಚಲನದಲ್ಲಿ ಭಾಗವಹಿಸುವ ಉಡುಪಿ, ಬ್ರಹ್ಮಾವರ, ಕಾರ್ಕಳ, ಕುಂದಾಪುರ, ಬೈಂದೂರು, ಹೆಬ್ರಿ, ಕಾಪು ಹಾಗೂ ಮಣಿಪಾಲ ತಂಡಗಳಿಗೆ ಪ್ರತ್ಯೇಕ ಬಣ್ಣಗಳ ಜೆರ್ಸಿಯನ್ನು ವಿತರಿಸಲಾಗುತ್ತದೆ.
ಉಡುಪಿ : ಮಲ್ಪೆಯಲ್ಲಿ 7 ಮಂದಿ ಬಾಂಗ್ಲಾ ಅಕ್ರಮ ವಲಸಿಗರನ್ನು ಪೊಲೀಸರು ಬಂಧಿಸಿದ ಬಳಿಕ ಜಿಲ್ಲಾ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.
ಜಿಲ್ಲೆಯ ವಿವಿಧ ಬಂದರು, ಕಟ್ಟಡ ನಿರ್ಮಾಣ ವಲಯ, ಫಿಶ್ಮೀಲ್ ಸಹಿತ ಹೊರ ರಾಜ್ಯದ ಕಾರ್ಮಿಕರು ಹೆಚ್ಚೆಚ್ಚು ಕಾರ್ಯನಿರ್ವಹಿಸುವ ಕಡೆಗಳಲ್ಲಿ ತೀವ್ರ ವಿಚಾರಣೆ ಹಾಗೂ ಮಾಹಿತಿ ಸಂಗ್ರಹ ಆರಂಭಿಸಿದ್ದಾರೆ.
ತಮ್ಮ ವ್ಯಾಪ್ತಿಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ರಾಜ್ಯದ ಕಾರ್ಮಿಕರ ವಿವರಗಳನ್ನು ತತ್ಕ್ಷಣವೇ ಸಲ್ಲಿಸಬೇಕು. ಎಷ್ಟು ಸಮಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವ ರಾಜ್ಯದಿಂದ ಬಂದಿದ್ದಾರೆ. ಕರೆದುಕೊಂಡು ಬಂದಿರುವ ಏಜೆನ್ಸಿ ಹೀಗೆ ಹಲವು ಮಾಹಿತಿ ಸೇರಿದ ಗೂಗಲ್ ಫಾರ್ಮೆಟ್ ಭರ್ತಿ ಮಾಡಿ ಕಳುಹಿಸುವಂತೆ ಎಲ್ಲ ಸಂಸ್ಥೆಗಳಿಗೆ ಕರಾವಳಿ ಕಾವಲು ಪಡೆಯಿಂದ ಸಂದೇಶ ರವಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹೊರ ರಾಜ್ಯದ ಕಾರ್ಮಿಕರು ಎಷ್ಟಿದ್ದಾರೆ ಎಂಬ ನಿಖರ ಮಾಹಿತಿ ಕಾರ್ಮಿಕ ಇಲಾಖೆಯಲ್ಲಿ ಇಲ್ಲ. ಕಾರ್ಮಿಕ ಇಲಾಖೆ ಕೂಡ ಈ ಬಗ್ಗೆ ಹೆಚ್ಚು ಗಂಭೀರವಾದಂತಿಲ್ಲ. ಕರ್ನಾಟಕ ಹಾಗೂ ಜಿಲ್ಲೆಯ ಸಂಘಟಿತ, ಅಸಂಘಟಿತ ಕಾರ್ಮಿಕರ ಮಾತ್ರ ಮಾಹಿತಿ ಇಲಾಖೆ ಹೊಂದಿದೆ. ಆದರೆ ಹೊರ ರಾಜ್ಯದ ಎಷ್ಟು ಕಾರ್ಮಿಕರು ಜಿಲ್ಲೆಗೆ ಬರುತ್ತಿದ್ದಾರೆ. ಅದರಲ್ಲಿ ಎಷ್ಟು ಮಂದಿ ಮರಳಿದ್ದಾರೆ, ಬಂದವರು ಎಲ್ಲಿದ್ದಾರೆ ಎಂಬ ಬಗ್ಗೆ ಪೂರ್ಣ ಮಾಹಿತಿ ಇಲಾಖೆಯಲ್ಲಿಲ್ಲ. ಸೇವಾ ಸಿಂಧು ಮೂಲಕ ಅಪ್ಲೋಡ್ ಮಾಡಲು ಸೂಚಿಸಿ ಸುಮ್ಮನಾಗಿದ್ದಾರೆ. ಆದರೆ ಅಪ್ಲೋಡ್ ಮಾಡಿದವರ ಸಂಖ್ಯೆ ತೀರಾ ಕಡಿಮೆಯಿದೆ.
ಈತನಕ ಜಿಲ್ಲೆಯಲ್ಲಿ 10 ಮಂದಿ ವಲಸಿಗರ ಪತ್ತೆಯಾಗಿದ್ದು ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಜಿಲ್ಲೆಯಾದ್ಯಂತ ಬಾಂಗ್ಲಾ ಅಕ್ರಮ ವಲಸಿಗರು ಹರಡಿಕೊಂಡರುವ ಸಾಧ್ಯತೆ ಬಗ್ಗೆಯೂ ತನಿಖೆ ಚುರುಕುಗೊಂಡಿದೆ.
ಉಡುಪಿ : ಕುಂದಾಪುರ ತಾಲೂಕಿನ ವಕ್ವಾಡಿ ಮೂಲದ, ಅನಿವಾಸಿ ಭಾರತೀಯ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿಯವರು ಆಡಳಿತ ನಿರ್ದೇಶಕರಾಗಿರುವ ದುಬೈನ ಹೋಟೆಲೊಂದಕ್ಕೆ ಅಕೌಂಟೆಂಟ್ ಆಗಿ ಸೇರಿ 2.5 ಕೋಟಿಗೂ ಅಧಿಕ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಬಾರ್ಕೂರು ಮೂಲದ ನಾಗೇಶ್ ಪೂಜಾರಿ (31) ಎನ್ನುವಾತನಿಗೆ ಈ ಹಿಂದೆ ಬ್ರಹ್ಮಾವರ ಜೆ.ಎಂ.ಎಫ್.ಸಿ ನ್ಯಾಯಾಲಯ ನೀಡಿದ ಜಾಮೀನು ಆದೇಶವನ್ನು ರಾಜ್ಯ ಉಚ್ಚ ನ್ಯಾಯಾಲಯ ರದ್ಧುಗೊಳಿಸಿದ ಹಿನ್ನೆಲೆಯಲ್ಲಿ ಕಳೆದ ವಾರ ಉಡುಪಿ ಸೆನ್ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ 3 ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದಿದ್ದರು.
ನಂತರ ಅಕ್ಟೋಬರ್ 16 ಬುಧವಾರದಂದು ಆರೋಪಿಯ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿದ್ದು ಜಾಮೀನು ಅರ್ಜಿ ಮೇಲಿನ ಆದೇಶವನ್ನು ಅಕ್ಟೋಬರ್ 21 ಸೋಮವಾರಕ್ಕೆ ನಿಗದಿಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಪಡುಬಿದ್ರಿ : ಸಕಲೇಶಪುರದ ಗುಡ್ಡ ಕಾಡುಗಳಲ್ಲಿ ಚಿತ್ರೀಕರಣಗೊಂಡ ದೀಪ್ನಾ ಕರ್ಕೇರ ನಿರ್ದೇಶನದ ‘ದ ಟೈಗರ್ ಕೆಫೆ’ ಚಿತ್ರದ ಪೋಸ್ಟರನ್ನು ಮೊಗವೀರ ಮುಂದಾಳು ನಾಡೋಜ ಡಾ.ಜಿ. ಶಂಕರ್ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣರವರನ್ನು ಒಡಗೂಡಿ ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ.
ಈ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶನ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದ ದೀಪ್ನಾ ಕರ್ಕೇರ, ಪ್ರಮುಖವಾಗಿ ಕಾಡು ಪ್ರಾಣಿಗಳನ್ನು ಉಳಿಸಿ ಬೆಳೆಸುವ ಸಾರವನ್ನು ಪಸರಿಸುವ ಆಧಾರದ ಮೇಲೆ ಈ ಚಿತ್ರವನ್ನು ನಿರ್ಮಿಸಲಾಗಿದ್ದು, ಒಂದೇ ದಿನದಲ್ಲಿ ಚಿತ್ರೀಕರಣ ಮುಗಿಸುವ ಹಿನ್ನಲೆಯಲ್ಲಿ ನಮ್ಮ ಚಿತ್ರತಂಡ ಮುಂದಡಿ ಇಟ್ಟಿದ್ದೆವೆಯಾದರೂ, ಕೆಲವೊಂದು ತಾಂತ್ರಿಕ ಕಾರಣಗಳಿಂದ ಎರಡು ದಿನಗಳಲ್ಲಿ ಚಿತ್ರೀಕರಣ ಮುಗಿಸುವ ಮೂಲಕ ದಾಖಲೆಯೊಂದನ್ನು ಮಾಡಿದೆ. ಈ ಚಿತ್ರದಲ್ಲಿ ಖಳ ನಾಯಕನ ಪಾತ್ರವೇ ಪ್ರಮುಖವಾಗಿದೆ. ಇದರಲ್ಲಿ ಮೂರು ಹಾಡುಗಳಿದ್ದು, ಫೈಟಿಂಗ್ ಕೂಡಾ ಅಡಕವಾಗಿದೆ. ಸಕಲೇಶಪುರದ ಸುಂದರ ಗುಡ್ಡಕಾಡು ಪ್ರದೇಶದಲ್ಲಿ ಚಿತ್ರೀಕರಣಗೊಂಡ ಈ ಚಿತ್ರ ಕೆಲವೇ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.
ಚಿತ್ರಕ್ಕೆ ಸಾಹಸ ಬಂಡೆ ಚಂದ್ರ ಬೆಂಗಳೂರು, ಛಾಯಾಗ್ರಹಣ ಅಲನ್ ಭರತ್ ಬೆಂಗಳೂರು, ಸ್ಥಿರ ಚಿತ್ರ, ಸುರೇಶ್ ಎರ್ಮಾಳ್ ರೋಶ್ನಿ ಸ್ಟುಡಿಯೋ ಪಡುಬಿದ್ರಿ. ತಾರಾಗಣದಲ್ಲಿ ನಿಶಾನ್, ದುರ್ಗಾ ಪ್ರಸಾದ್, ಶಾಂಭವಿ ಆಚಾರ್ಯ, ಸಾಯಿನಾಥ್ ಎಂ. ಶೆಟ್ಟಿ, ನಿಹಾಲ್ ವಿ. ಕುಂದರ್, ವಿನೋದ್ ನೀರ್ಮಾರ್ಗ, ಸುರೇಶ್ ಎರ್ಮಾಳ್, ವಿಕಾಶ್ ಶೆಟ್ಟಿ, ಕಾರ್ತಿಕ್ ಎಸ್.ಸಾಲ್ಯಾನ್, ಹರೀಶ್ ಜೋಗಿ, ಚಂದ್ರಶೇಖರ ಕುಲಾಲ್, ವೈಶಾಲಿ ಎರ್ಮಾಳ್ ಮುಂತಾದವರಿದ್ದಾರೆ.
ಉಡುಪಿ : ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ನೇತೃತ್ವದಲ್ಲಿ 11 ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆದು ಬಳಿಕ ಅಪರ ಜಿಲ್ಲಾಧಿಕಾರಿ ಮಮತಾದೇವಿ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿಯವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಶಶಿಧರ ಗೋಲ್ಲ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮುಖಂಡರಾದ ದಯನಂದ ಕೋಟ್ಯಾನ್, ಸರೋಜ, ಗಣೇಶ ನಾಯಕ್, ಸುಭಾಷ್ ನಾಯಕ್, ರಾಮ ಕಾರ್ಕಡ, ವಾಮನಪೂಜಾರಿ, ಸೈಯದ್, ರಮೇಶ್, ಸಂಜೀವ ನಾಯಕ್, ಚಂದ್ರನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ : ಅಭಿಘ್ನ ನೃತ್ಯಾಲಯಂ ಸಂಸ್ಥೆ ವತಿಯಿಂದ ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪುತ್ತಿಗೆ ಮಠದ ಸಹಯೋಗದೊಂದಿಗೆ ಶ್ರೀಕೃಷ್ಣಮಠದ ಮಧ್ವಮಂಟದಲ್ಲಿ ಹಾಗೂ ರಾಜಾಂಗಣದಲ್ಲಿ ಬುಕ್ ಆಫ್ ರೆಕಾರ್ಡ್ ದಾಖಲೆಗಾಗಿ 100 ಮಂದಿ 14 ಗಂಟೆಗಳ ನಿರಂತರ ಭರತನಾಟ್ಯ ಕಾರ್ಯಕ್ರಮಕ್ಕೆ ಪರ್ಯಾಯ ಪುತ್ತಿಗೆ ಶ್ರೀಗಳು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಹೈದರಾಬಾದ್, ಚೆನ್ನೈ, ವಿಜಯವಾಡ, ಬೆಂಗಳೂರು ಸಹಿತ ವಿವಿಧ ಭಾಗಗಳ ಐದು ವರ್ಷದಿಂದ 60 ವರ್ಷದವರೆಗಿನ ಭರತನಾಟ್ಯ ಕಲಾವಿದರು ಭಾಗವಹಿಸಿದರು. ನಿರಂತರ 14 ಗಂಟೆಗಳ ಕಾಲ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ದಾಖಲೆಗಾಗಿ ಈ ನೃತ್ಯವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆೆಯಿಂದ ಸಂಜೆವರೆಗೆ ಮಧ್ವಮಂಟಪದಲ್ಲಿ ಹಾಗೂ ಸಂಜೆ ಬಳಿಕ ರಾಜಾಂಗಣದಲ್ಲಿ ನೃತ್ಯ ಪ್ರದರ್ಶನ ನಡೆಯಿತು.
ಉಡುಪಿ : ಮಲ್ಪೆ ಕೆಮ್ಮಣ್ಣು ಕುದ್ರು ನೆಕ್ಸ್ಟ್ ಪಡು ತೊನ್ಸೆಯಲ್ಲಿ ಕೊಳೆತ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆ ಆಗಿದೆ.
ಮೃತರನ್ನು ಆತ್ರಾಡಿ ನಿವಾಸಿ ಬಾಲು ನಾಯ್ಕ್ ಎಂದು ಗುರುತಿಸಲಾಗಿದೆ.
ಶವವನ್ನು ಮೇಲಕ್ಕೆತ್ತಲು ಅಲ್ವಿನ್, ಹರಿದಾಸ್, ಸತ್ಯ ನಿಖಿಲ್, ಸಹಕರಿಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಕೊಳೆತ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವಲ್ಲಿ ಇಲಾಖೆಗೆ ನೇರವಾದರು.
ಮಲ್ಪೆ ಪೊಲೀಸ್ ಠಾಣೆಯ ಎಸ್.ಐ. ವಿಶ್ವನಾಥ್, ನಾಗರಾಜ್ ಸ್ಥಳಕ್ಕೆ ಬಂದು ಮಹಜರು ಮಾಡಿದರು.
Maax News covers major news and events of Udupi district. This channel provides detailed reports on the political, social, economic, and cultural life of Udupi district.
Maax News, equipped with the most sophisticated studio in Udupi, assures people comprehensive news coverage.