ಉಡುಪಿ : ಬ್ರಹ್ಮಾವರ ಮೇಲ್ಸೇತುವೆ, ಹೆಜಮಾಡಿ ಹಾಗೂ ಕುಂದಾಪುರದವರೆಗಿನ ಸರ್ವಿಸ್ ರಸ್ತೆಯ ಯೋಜನಾ ವರದಿಯನ್ನು ತಯಾರಿಸಿ ವಾರದೊಳಗೆ ಕೇಂದ್ರಕ್ಕೆ ಕಳುಹಿಸಿ ಕೊಡುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿ.ಪಿ. ಬ್ರಹ್ಮಣಕರ್ ತಿಳಿಸಿದ್ದಾರೆ.

ಬ್ರಹ್ಮಾವರವೂ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರ ಅಪಘಾತಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆಯ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ಮಾಡಿದ ಸಂದರ್ಭದಲ್ಲಿ ಈ ಸಂಗತಿ ತಿಳಿಸಲಾಗಿದೆ.
ಇತ್ತೀಚೆಗೆ ಬ್ರಹ್ಮಾವರದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದು, ಈ ಹಿನ್ನೆಲೆಯಲ್ಲಿ ತುರ್ತಾಗಿ ರಸ್ತೆ ಇಕ್ಕೆಲಗಳಲ್ಲಿ ಭದ್ರಗಿರಿ ಜಂಕ್ಷನ್ ನಿಂದ ಉಪ್ಪಿನಕೋಟೆಯವರೆಗೆ ಸರ್ವಿಸ್ ರೋಡ್ ಮಾಡುವುದಾಗಿ ಜಿಲ್ಲಾ ಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳ ಸಮಕ್ಷಮದಲ್ಲಿ ಸ್ಥಳೀಯ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಒಪ್ಪಿಕೊಂಡಿದ್ದರು. ಆದರೂ ಕಾಮಗಾರಿ ಪ್ರಾರಂಭ ಮಾಡದಿರುವ ಬಗ್ಗೆ ಪ್ರಾದೇಶಿಕ ಅಧಿಕಾರಿಯವರ ಗಮನಕ್ಕೆ ತಂದಿರುವ ಕೋಟ ಶ್ರೀನಿವಾಸ ಪೂಜಾರಿಯವರು, ಕೂಡಲೇ ಮೇಲ್ಸೇತುವೆ ಯೋಜನಾ ವರದಿ ಕಳಿಸುವಂತೆ ಸೂಚಿಸಿದರು.
ಹೆಜಮಾಡಿಯಿಂದ ಪ್ರಾರಂಭವಾಗಿ ಕುಂದಾಪುರದವರೆಗೆ ಈಗಾಗಲೇ ಆಗಿರುವ 15 ಕಿ.ಮೀ. ಸರ್ವಿಸ್ ರಸ್ತೆಯನ್ನು ಹೊರತುಪಡಿಸಿ ಮತ್ತೆ 42 ಕಿ.ಮೀ. ಹೊಸ ಸರ್ವಿಸ್ ರಸ್ತೆಗಳ ನಿರ್ಮಾಣದ ಅಗತ್ಯಗಳನ್ನು ವಿವರಿಸಿ, ವಿಸ್ತೃತವಾದ ಯೋಜನಾ ವರದಿಯನ್ನು ಕೂಡಲೇ ಕೇಂದ್ರ ಸರಕಾರಕ್ಕೆ ಕಳಿಸುವಂತೆ ಸೂಚಿಸಿದರು. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೂ ಪತ್ರದ ಮುಖೇನ ಮಾಹಿತಿ ನೀಡಿರುವುದಾಗಿ ತಿಳಿಸಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.