ಉಡುಪಿ : ಆಯುಧ ಪೂಜೆಯ ಪ್ರಯುಕ್ತ ಅಕ್ಟೋಬರ್ 11 ರಂದು ನಗರ ಸಭೆಯ ಕಸ ಸಂಗ್ರಹಣೆ ಹಾಗೂ ಸಾಗಾಣಿಕೆ ವಾಹನಗಳ ಪೂಜೆ ಇರುವುದರಿಂದ ಸದರಿ ದಿನದಂದು ನಗರಸಭಾ ವ್ಯಾಪ್ತಿಯ ಮನೆ ಮನೆ ಕಸ ಸಂಗ್ರಹಣೆ ಇರುವುದಿಲ್ಲ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
Udupi City
ಉಡುಪಿ : ಗಾಂಧಿ ಜಯಂತಿ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಉಡುಪಿ ನಗರಸಭೆ, ವಿವಿಧ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಹಳೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಬಸ್ ನಿಲ್ದಾಣದಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವ ಮೂಲಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೇರಿದ ಅತಿಥಿಗಳು, ಗಣ್ಯರು ಹಾಗೂ ವಿದ್ಯಾರ್ಥಿಗಳು ಪರಿಸರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಬಳಿಕ ಅಜ್ಜರಕಾಡಿನ ಭುಜಂಗ ಪಾರ್ಕ್ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆದವು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಪೌರಾಯುಕ್ತ ರಾಯಪ್ಪ, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಉಡುಪಿ : ಉಡುಪಿಗೆ ಕೂಲಿಕೆಲಸಕ್ಕಾಗಿ ಹೊರರಾಜ್ಯದಿಂದ ಬಂದ ಕಾರ್ಮಿಕರ ತಂಡವು ಪರಸ್ಪರ ಬಡಿದಾಡಿಕೊಂಡ ಘಟನೆ ನಡೆದಿದೆ. ನಗರದ ಪುತ್ತೂರು ನಯಂಪಳ್ಳಿ ಸ್ವರ್ಣ ನದಿ ಸೇತುವೆ ಸಮೀಪದ ಎಪಿಜಿ ಲೇಬರ್ ಕಾಲನಿಯಲ್ಲಿ ಗಲಾಟೆ ಮಾಡಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿದ್ದ ತಂಡದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೈಪ್ಲೈನ್ ಕಾಮಗಾರಿಗಾಗಿ ಚತ್ತೀಸಘಡದಿಂದ ಉಡುಪಿಗೆ ಬಂದಿದ್ದ ಈ ಯುವಕರು ಯಾವುದೋ ಕಾರಣಕ್ಕೆ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ್ದ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದು, ಪೊಲೀಸರು ಬರುವಷ್ಟರಲ್ಲಿ ಗಲಾಟೆ ನಿಲ್ಲಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆೆ ತಂಡದೊಳಗೆ ಗಲಾಟೆ ಸಂಭವಿಸಿದ್ದು, ಉಡುಪಿ ನಗರ ಠಾಣೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳಾದ ಮೂಖ್ರಾಮ್, ಸುಭಾಷ್ ಕುಮಾರ್, ಅಶೀಮ್, ವಿಕಾಸ್, ಸ್ಯಾಂಟ್ ಲಾಲ್, ವಿಶಾಲ್, ಮಗೇಶ್, ಅಖಿಲೇಶ್ ಎಂಬವರನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ ನಗರಸಭೆಯ ನೂತನ ಅಧ್ಯಕ್ಷರಾಗಿ ಪ್ರಭಾಕರ ಪೂಜಾರಿ, ಉಪಾಧ್ಯಕ್ಷರಾಗಿ ರಜನಿ ಹೆಬ್ಬಾರ್ ಆಯ್ಕೆ
ಉಡುಪಿ : ಉಡುಪಿ ನಗರಸಭೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ಪ್ರಭಾಕರ ಪೂಜಾರಿ ಹಾಗೂ ಉಪಾಧ್ಯಕ್ಷೆಯಾಗಿ ರಜನಿ ಹೆಬ್ಬಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಭವನದಲ್ಲಿ ಚುನಾವಣಾಧಿಕಾರಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಮಹೇಶ್ ಚಂದ್ರ ಅವರು ಈ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ನಿಗದಿಪಡಿಸಲಾಗಿತ್ತು. ಈ ಎರಡು ಸ್ಥಾನಗಳಿಗೆ ಕ್ರಮವಾಗಿ ಗುಂಡಿಬೈಲು ವಾರ್ಡ್ನ ಪ್ರಭಾಕರ ಪೂಜಾರಿ ಹಾಗೂ ಒಳಕಾಡು ವಾರ್ಡ್ನ ರಜನಿ ಹೆಬ್ಬಾರ್ ನಾಮಪತ್ರ ಸಲ್ಲಿಸಿದ್ದರು.
ಯಾವುದೇ ಪ್ರತಿಸ್ಪರ್ಧಿ ಇಲ್ಲದ ಕಾರಣ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಚುನಾವಣಾಧಿಕಾರಿ ಘೋಷಿಸಿದರು.
ಪ್ರಭಾಕರ ಪೂಜಾರಿ ಗುಂಡಿಬೈಲು ವಾರ್ಡ್ನಿಂದ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದು, ರಜಿನಿ ಹೆಬ್ಬಾರ್ ಒಳಕಾಡು ವಾರ್ಡ್ನಿಂದ ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 35 ಸಂಖ್ಯಾಬಲ ಇರುವ ನಗರಸಭೆಯಲ್ಲಿ ಬಿಜೆಪಿ 32 ಹಾಗೂ ಕಾಂಗ್ರೆಸ್ 3 ಸದಸ್ಯರನ್ನು ಹೊಂದಿದೆ.
ಉಡುಪಿ ನಗರದ ಹರ್ಷ ಶೋರೂಂನಲ್ಲಿ ನಡೆದ ಚೂರಿಯಿಂದ ಹಲ್ಲೆ ಪ್ರಕರಣ ಸಿಸಿಟಿವಿಯಲ್ಲಿ ಸೆರೆ
ಶೋರೂಂನಲ್ಲಿ ಕ್ಲಸ್ಟರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರೋನ್ಸನ್ ಎವರೆಸ್ಟ್ (36) ಮೇಲೆ ಶೋರೂಂನ ಸೆಕ್ಯೂರಿಟಿ ಗಾರ್ಡ್ ಪ್ರಸಾದ್ ಕೊಲೆಗೆ ಯತ್ನ ನಡೆಸಿದ್ದರು.
ಹರ್ಷ ಶೋರೂಂನಲ್ಲಿ ಕ್ಲಸ್ಟರ್ ಮ್ಯಾನೇಜರ್ ಆಗಿದ್ದ ರೋನ್ಸನ್, ಅಲ್ಲೇ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರಸಾದ್ಗೆ ಕೆಲಸದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ವಾರ್ನಿಂಗ್ ನೀಡಿದ್ದರು. ಕೆಲಸದಿಂದ ತೆಗೆಯದಂತೆ ರೋನ್ಸನ್ ಬಳಿ ಕೇಳಿಕೊಂಡಿದ್ದ ಪ್ರಸಾದ್ಗೆ
ಮರುದಿನ ಮೀಟಿಂಗ್ನಲ್ಲಿ ಚರ್ಚಿಸುವುದಾಗಿ ರೋನ್ಸನ್ ಹೇಳಿದ್ದರು. ಮಾತುಕತೆ ಬಳಿಕ ಗ್ರೌಂಡ್ ಫ್ಲೋರ್ನಲ್ಲಿ ಕಾದು ಕುಳಿತಿದ್ದ ಆರೋಪಿ ಪ್ರಸಾದ್, ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಬರುತ್ತಿದ್ದಂತೆ ಚೂರಿಯಲ್ಲಿ ಇರಿದಿದ್ದಾನೆ. ಪ್ರಾಣಾಪಯ ಅರಿತು ರೋನ್ಸನ್ ಓಡಿದಾಗ, ಅಟ್ಟಾಡಿಸಿಕೊಂಡು ಹೋಗಿ ಆರೋಪಿಯಿಂದ ಕೊಲೆಗೆ ಯತ್ನ ನಡೆದಿದೆ.
ಆಗಸ್ಟ್ 10 ರ ಸಂಜೆ 7.30 ವೇಳೆಗೆ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಕರಾವಳಿ ಬೈಪಾಸ್ ಬಳಿಯ ಇಸೀ ಲೈಫ್ ಕೃಷಿ ಯಂತ್ರೋಪಕರಣಗಳ ಮಾರಾಟ ಸಂಸ್ಥೆಯ ಗೂಡ್ಸ್ ರಿಕ್ಷಾದಲ್ಲಿ ಇರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಯಂತ್ರವನ್ನು ಕಳ್ಳರು ಆ.4ರಂದು ರಾತ್ರಿ ವೇಳೆ ಕಳವು ಮಾಡಿರುವ ಘಟನೆ ನಡೆದಿದೆ.
ತೀರ್ಥಹಳ್ಳಿಯಲ್ಲಿರುವ ಇನ್ನೊಂದು ಶಾಖೆಯಿಂದ ನಾಲ್ಕು ಬಗೆಯ ಸಾಮಾಗ್ರಿಗಳನ್ನು ರಿಕ್ಷಾದಲ್ಲಿ ತುಂಬಿಕೊಂಡು ಉಡುಪಿಯಲ್ಲಿರುವ ಸಂಸ್ಥೆಯ ಶಾಖೆಗೆ ತಂದು ರಿಕ್ಷಾದಲ್ಲೇ ಇರಿಸಿದ್ದು, ಇದರಲ್ಲಿದ್ದ ಒಂದು ಸಾಮಾಗ್ರಿಯನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಕಳವಾದ ಸೊತ್ತುಗಳ ಒಟ್ಟು ಮೌಲ್ಯ 6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಕ್ಷಾ ಬಾಡಿಗೆ ವಿಚಾರದಲ್ಲಿ ಗಲಾಟೆ; ಆಟೋ ಚಾಲಕರ ತಂಡದಿಂದ ಆಟೋ ಚಾಲಕನ ಮೇಲೆಯೇ ಹಲ್ಲೆ
ಉಡುಪಿ : ಉಡುಪಿ ನಗರದಲ್ಲಿ ಬಾಡಿಗೆ ಮಾಡುವ ವಿಚಾರವಾಗಿ ಆಟೋ ಚಾಲಕರ ತಂಡವು ಆಟೋ ಚಾಲಕನ ಮೇಲೆಯೇ ಹಲ್ಲೆ ನಡೆಸಿದ ಘಟನೆ ಇಂದು ನಡೆದಿದೆ. ಪ್ರತಾಪ್ ಚಂದ್ರ, ಹಲ್ಲೆಗೊಳಗಾದ ರಿಕ್ಷಾ ಚಾಲಕ.
ಉಡುಪಿ ನಗರದ ಸಿಟಿ ಬಸ್ಸ್ಟ್ಯಾಂಡ್ ವ್ಯಾಪ್ತಿಯಲ್ಲಿ ಇವರು ರಿಕ್ಷಾ ಬಾಡಿಗೆ ಮಾಡುತ್ತಿರುವಾಗ ತಂಡವು ಇವರ ಮೇಲೆ ಹಲ್ಲೆ ನಡೆಸಿದೆ. ಹಲ್ಲೆ ನಡೆಸಿದ ತಂಡ, ನಗರ ವ್ಯಾಪ್ತಿಯಲ್ಲಿ ಎಲ್ಲಿಯೂ ಬಾಡಿಗೆ ಮಾಡಬಾರದು ಎಂದು ಪ್ರತಾಪ್ ಚಂದ್ರ ಅವರಿಗೆ ವಾರ್ನಿಂಗ್ ಮಾಡಿದೆ. ನಗರದಲ್ಲಿ ಬಾಡಿಗೆ ಮಾಡಲು ನನಗೆ ಅನುಮತಿ ಇದೆ ಎಂದು ಪ್ರತಾಪ್ ಚಂದ್ರ ಹೇಳಿದ್ದಾರೆ. ಇದರಿಂದ ಕೋಪಗೊಂಡ ಆಟೋ ಚಾಲಕರು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಚಾಲಕ ಪ್ರತಾಪ್ ಚಂದ್ರ ಸದ್ಯ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಆ.3ರಂದು ‘ಕೃತಕ ನೆರೆ ಹಾವಳಿ-ಬೆಂಕಿ ದುರಂತ-ಭೂಕುಸಿತ : ಒಂದು ಚರ್ಚೆ’ ಕಾರ್ಯಕ್ರಮ: ರಾಜೇಶ್ ಶೆಟ್ಟಿ ಅಲೆವೂರು
ಉಡುಪಿ : ಪ್ರಸ್ತುತ ಎಲ್ಲಾ ಕಡೆ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪ ದುರಂತಗಳಿಗೆ ಕಾರಣ ಹಾಗೂ ಎಚ್ಚರದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ‘ಕೃತಕ ನೆರೆ ಹಾವಳಿ- ಬೆಂಕಿ ದುರಂತ- ಭೂಕುಸಿತ: ಒಂದು ಚರ್ಚೆ’ ಕಾರ್ಯಕ್ರಮವನ್ನು ಆ.3ರಂದು ಶನಿವಾರ ಬೆಳಗ್ಗೆ 10.30ಕ್ಕೆ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ.
ಉಡುಪಿ ಪತ್ರಿಕಾ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕೇವಲ ಪತ್ರಕರ್ತರಿಗೆ ಕಾರ್ಯಕ್ರಮ ನಡೆಸುವುದಕ್ಕೆ ಸೀಮಿತವಾಗಿರದೆ ಸಾಮಾಜಿಕ ಬದ್ಧತೆ ಹಾಗೂ ಕಳಕಳಿಯೊಂದಿಗೆ ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ಪ್ರಸ್ತುತ ಸಂದರ್ಭಕ್ಕೆ ಅಗತ್ಯವಾಗಿರುವ ಪ್ರಾಕೃತಿಕ ವಿಕೋಪಗಳ ಕುರಿತು ಸಾರ್ವಜನಿಕವಾಗಿ ಚರ್ಚಿಸಲು ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.
ಉಡುಪಿ ನಗರದಲ್ಲಿ ಪ್ರತಿವರ್ಷ ಬಾಧಿಸುತ್ತಿರುವ ಕೃತಕ ನೆರೆ, ಇತ್ತೀಚೆಗೆ ಹೆಚ್ಚು ಹೆಚ್ಚು ವರದಿಯಾಗುತ್ತಿರುವ ಬೆಂಕಿ ದುರಂತಗಳು ಹಾಗೂ ಜಿಲ್ಲೆ ಸೇರಿದಂತೆ ವಿವಿಧ ಕಡೆ ಸಂಭವಿಸುತ್ತಿರುವ ಭೂಕುಸಿತದ ಕುರಿತು ಚರ್ಚೆ ನಡೆಸ ಬೇಕಾಗಿರುವುದು ಇಂದಿನ ಅಗತ್ಯವಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ, ಉಡುಪಿ ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ ವಿನಾಯಕ ಉ.ಕಲ್ಗುಟಕರ ಹಾಗೂ ಹಿರಿಯ ಭೂಗರ್ಭ ಶಾಸ್ತ್ರಜ್ಞ ಮಣಿಪಾಲದ ಡಾ.ಉದಯ ಶಂಕರ್ ಈ ಮೂರು ವಿಷಯಗಳ ಕುರಿತು ಚರ್ಚಿಸಲಿರುವರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಲಿರುವರು. ಈ ಕಾರ್ಯಕ್ರಮದಲ್ಲಿ ಪತ್ರಕರ್ತರು ಮಾತ್ರವಲ್ಲದೆ ಆಸಕ್ತ ಸಾರ್ವಜನಿಕರು ಕೂಡ ಭಾಗವಹಿಸಬಹುದಾಗಿದೆ ಎಂದವರು ಮಾಹಿತಿ ನೀಡಿದರು
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಕಾರ್ಯದರ್ಶಿ ರಹೀಂ ಉಜಿರೆ ಉಪಸ್ಥಿತರಿದ್ದರು.
ಉಡುಪಿ ನಗರಸಭೆ ವ್ಯಾಪ್ತಿಯ ಚಕ್ರತೀರ್ಥ ಮಾರ್ಗದ ಕಿರು ಸೇತುವೆ ಹಾನಿ : ಶಾಸಕ ಯಶ್ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ
ಉಡುಪಿ ನಗರಸಭೆ ವ್ಯಾಪ್ತಿಯ ಮೂಡುಸಗ್ರಿ ವಾರ್ಡಿನಲ್ಲಿ ಮಳೆಯಿಂದಾಗಿ ಹಾನಿಗೀಡಾದ ಚಕ್ರತೀರ್ಥ ಮಾರ್ಗದ ಕಿರುಸೇತುವೆ ವಾಹನ ಸಂಚಾರಕ್ಕೆ ಅಪಾಯ ಸ್ಥಿತಿಯಲ್ಲಿರುವ ಹಿನ್ನಲೆಯಲ್ಲಿ ಉಡುಪಿ ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದು, ಈಗಾಗಲೇ ಸುಮಾರು ರೂ. 13 ಲಕ್ಷ ಅನುದಾನವನ್ನು ಕಿರು ಸೇತುವೆಯ ಮರು ನಿರ್ಮಾಣಕ್ಕೆ ಮಂಜೂರು ಮಾಡಿದ್ದು ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭಿಸಲು ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಶ್ರೀಮತಿ ಭಾರತಿ ಪ್ರಶಾಂತ್, ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಅಮೀನ್, ನಗರ ಸಭಾ ಸದಸ್ಯರಾದ ಗಿರೀಶ್ ಅಂಚನ್, ಸ್ಥಳೀಯ ಮುಖಂಡರಾದ ಶ್ರೀ ಈಶ್ವರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ : ನಗರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಆಸ್ಪತ್ರೆಯ ಬೃಹತ್ ತಳಪಾಯ ಹೊಂಡದಲ್ಲಿ ನೀರು ತುಂಬಿದ್ದು ಈ ಹೊಂಡ ಮುಚ್ಚುವಂತೆ ಆಗ್ರಹಿಸಿ ಇಂದು ವಿಶಿಷ್ಟ ಮತ್ತು ಅಪಾಯಕಾರಿ ಪ್ರತಿಭಟನೆ ನಡೆಯಿತು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಕ್ರೇನ್ ಮೂಲಕ ಬೃಹತ್ ಹೊಂಡಕ್ಕೆ ತೆರಳಿ ನೀರಿನಲ್ಲಿ ನಗರಸಭೆಗೆ ಎಚ್ಚರಿಕೆ ಸಂದೇಶವುಳ್ಳ ಜಾಗೃತಿ ಫಲಕವನ್ನು ತೇಲಿಬಿಟ್ಟರು.
ಈ ಆಸ್ಪತ್ರೆ ತಳಪಾಯದ ಹೊಂಡವನ್ನು ಏಳೆಂಟು ವರ್ಷಗಳ ಹಿಂದೆ ಅಗೆಯಲಾಗಿದ್ದು ಪ್ರತಿ ಮಳೆಗಾಲಕ್ಕೆ ಇದರಲ್ಲಿ ನೀರು ತುಂಬುತ್ತದೆ. ನಗರಕ್ಕೆ ಇದು ಅಪಾಯದ ಜೊತೆಗೆ ಸಾಂಕ್ರಾಮಿಕ ರೋಗಗಳ ತಾಣವೂ ಆಗಿದೆ. ಈ ಹಿನ್ನೆಲೆಯಲ್ಲಿ ಈ ಹೊಂಡವನ್ನು ಮುಚ್ಚಬೇಕು ಎಂದು ಆಗ್ರಹಿಸಿ ಕ್ರೇನ್ ಮೂಲಕ ನೀರಿಗೆ ಇಳಿದು ಎಚ್ಚರಿಕೆ ಫಲಕವನ್ನು ನೀರಲ್ಲಿ ತೇಲಿ ಬಿಡಲಾಯಿತು.
ಬಳಿಕ ಮಾತನಾಡಿದ ಪ್ರತಿಭಟನಕಾರ ನಿತ್ಯಾನಂದ ಅವರು, 10 ದಿನಗಳ ಒಳಗೆ ಈ ಬೃಹತ್ ಹೊಂಡವನ್ನು ಮುಚ್ಚಿಸಬೇಕು. ಇದೊಂದು ನಗರದ ಸಾಂಕ್ರಾಮಿಕ ರೋಗಗಳ ತಾಣ. ತ್ಯಾಜ್ಯಗಳ ಜೊತೆಗೆ ಈ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಡೆಂಗ್ಯೂ, ಮಲೇರಿಯಾ ಸಹಿತ ಮಾರಕ ರೋಗಗಳು ಇಲ್ಲಿಂದಲೇ ಹರಡುತ್ತವೆ. ನಗರಸಭೆ ಎದುರೇ ಇರುವ ಈ ಬೃಹತ್ ಹೊಂಡವನ್ನು ಮುಚ್ಚಬೇಕು ಎಂದು ಆಗ್ರಹಿಸಿದರು. ಇವರಿಗೆ ಸಾಮಾಜಿಕ ಹೋರಾಟಗಾರ ವೈದ್ಯ ಡಾ. ಪಿವಿ ಭಂಡಾರಿ ಕೂಡ ಸಾಥ್ ನೀಡಿದರು.