ಮಂಗಳೂರು : ಅತ್ಯಾಚಾರ ಆರೋಪ ಪ್ರಕರಣದ ಆರೋಪಿ ಉಮೇಶ್ ಸಾಲ್ಯಾನ್ನನ್ನು ಖುಲಾಸೆಗೊಳಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಬಸ್ಸಿನಲ್ಲಿ ಚಾಲಕ ಕೆಲಸ ಮಾಡಿಕೊಂಡಿದ್ದ ಆರೋಪಿ ಉಮೇಶ್ ಸಾಲ್ಯಾನ್ ಎಂಬಾತ 2019ರಲ್ಲಿ ಯುವತಿಯನ್ನು ಪರಿಚಯಿಸಿಕೊಂಡು ಆತ್ಮೀಯತೆಯಿಂದ ಇದ್ದು, ತನ್ನ ತಂದೆಯ ಶಸ್ತ್ರಚಿಕಿತ್ಸೆಗೆ ಹಣಬೇಕು ಎಂದು ಒಂದು ಲಕ್ಷ ಹಣವನ್ನು ಯುವತಿಯಿಂದ ಪಡೆದುಕೊಂಡಿದ್ದನು. ಈ ಹಣವನ್ನು ಎರಡು ತಿಂಗಳಲ್ಲಿ ಮರುಪಾವತಿಸುವುದಾಗಿ ಹೇಳಿದ್ದನು. ಬಳಿಕ ಯುವತಿಯು ಹಣ ವಾಪಾಸು ಕೇಳಿದಾಗ ಆರೋಪಿಯು ಹಣ ಕೊಡದೇ ಸತಾಯಿಸುತ್ತಿದ್ದು, 2019 ನವೆಂಬರ್ 20ರಂದು ಹಣ ಕೊಡುವುದಾಗಿ ಹೇಳಿ ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾನೆ. ನಂತರ ಮದುವೆಯಾಗುತ್ತೇನೆಂದು ನಂಬಿಸಿ ಯುವತಿಯನ್ನು ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ಇದರಿಂದ ಯುವತಿ ಗರ್ಭಿಣಿ ಆಗಿದ್ದು, ನಂತರದ ದಿನಗಳಲ್ಲಿ ಆರೋಪಿಯು ಯುವತಿಯನ್ನು ವಿವಾಹವಾಗಲು ಒಪ್ಪಿರಲಿಲ್ಲ. ಬಳಿಕ 2020ರ ಆಗಷ್ಟ್ 4ರಂದು ಯುವತಿ ಮಗುವಿಗೆ ಜನ್ಮ ನೀಡಿದ್ದಳು. ಇದರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಬಜಪೆ ಪೊಲೀಸರು ಆರೋಪಿ ಉಮೇಶ್ ಸಾಲ್ಯಾನ್ ವಿರುದ್ಧ ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಾಂತರಾಜು ಎಸ್.ವಿ.ರವರು ಆರೋಪಿ ಉಮೇಶ್ ಸಾಲ್ಯಾನ್ರವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.
ಆರೋಪಿಯ ಪರವಾಗಿ ಮಂಗಳೂರಿನ ವಕೀಲರಾದ ಬಿ. ಅರುಣ ಬಂಗೇರ ಮತ್ತು ರಿಹಾನ ಪರ್ವೀನ್ರವರು ವಾದಿಸಿದ್ದರು.