ಉಡುಪಿ : ಕೈಮಗ್ಗದ ನೇಕಾರಿಕೆಯ ಅದ್ಭುತ ಕಲಾಕೌಶಲ್ಯವನ್ನು ಪೋಷಿಸಿ ಬೆಳೆಸಲು ನಿರಂತರವಾಗಿ ಶ್ರಮಿಸುತ್ತ, ಪುತ್ತಿಗೆ ಮಠದ ಪರ್ಯಾಯ ಮತ್ತು ಶ್ರೀ ಕೃಷ್ಣ ಮಾಸೋತ್ಸವದ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕೈಮಗ್ಗ ಸೀರೆಗಳ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಿ, ಕೈಮಗ್ಗದ ಉದ್ದಿಮೆಗೆ ಮತ್ತು ಶ್ರೀ ಕೃಷ್ಣ ಮಾಸೋತ್ಸವಕ್ಕೆ ವಿಶೇಷವಾದ ಮೆರುಗನ್ನು ನೀಡಿದ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷರಾದ ರತ್ನಾಕರ್ ಇಂದ್ರಾಳಿಯವರಿಗೆ ಪರ್ಯಾಯ ಪುತ್ತಿಗೆ ಶ್ರೀಗಳು ಶ್ರೀಕೃಷ್ಣ ಜಯಂತಿಯ ಅಂಗವಾಗಿ ಶ್ರೀ ಕೃಷ್ಣಗೀತಾನುಗ್ರಹ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
Traditional Crafts
ಇಬ್ಬರು ಹಿರಿಯ ಉಡುಪಿ ಸೀರೆ ನೇಕಾರರಿಗೆ ಕದಿಕೆ ಟ್ರಸ್ಟ್ನ ಅತ್ಯುನ್ನತ ‘ನೇಕಾರ ರತ್ನ’ ಪ್ರಶಸ್ತಿ
ಉಡುಪಿ : ಸಂಜೀವ ಶೆಟ್ಟಿಗಾರ್(86) ಅಧ್ಯಕ್ಷರು, ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಮತ್ತು ಸೋಮಪ್ಪ ಜತ್ತನ್ನ (89) ನಿರ್ದೇಶಕರು, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘ ಇವರು ತಮ್ಮ ಜೀವಮಾನದ ಸಾಧನೆಗಾಗಿ ಕದಿಕೆ ಟ್ರಸ್ಟ್, ಕೈಮಗ್ಗ ನೇಕಾರರಿಗೆ ಕೊಡ ಮಾಡುವ, ಪ್ರತಿಷ್ಟಿತ ‘ನೇಕಾರ ರತ್ನ’ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಇವರಿಬ್ಬರು ಅವಿಭಜಿತ ದ.ಕ. ಜಿಲ್ಲೆಯ ಅತ್ಯಂತ ಹಿರಿಯ ಸಕ್ರಿಯ ನೇಕಾರರು. ಸಂಜೀವ ಶೆಟ್ಟಿಗಾರ್ ಅವರು ಸುಮಾರು 74 ವರ್ಷಗಳಿಂದ ನಿರಂತರ ನೇಯ್ಗೆ ಮಾಡುತ್ತಿರುವುದು ಒಂದು ದಾಖಲೆ ಆಗಿದೆ. ಸೋಮಪ್ಪ ಜತ್ತನ್ನ ಅವರು ಕಳೆದ 66 ವರುಷಗಳಿಂದ ನೇಕಾರಿಕೆಯ ಕಾಯಕದಲ್ಲಿ ನಿರತರಾಗಿದ್ದಾರೆ.
ಸಂಜೀವ ಶೆಟ್ಟಿಗಾರ್ ಈಗ ಅಳಿದು ಹೋದ ಮುತ್ತು ಬಾರ್ಡರ್ ನೇಯ್ಗೆಯನ್ನು 2019ರವರೆಗೆ ನೇಯುತ್ತಿದ್ದರು. ಈಗಲೂ ತಮ್ಮದೇ ವಿನ್ಯಾಸದ ಸೆರಗಿನಲ್ಲಿ ಬುಟ್ಟಾ ಇರುವ 60 ಕೌಂಟ್ ಸೀರೆಗಳನ್ನು ನೇಯುವುದರ ಜೊತೆಗೆ ಅನೇಕ ನೇಕಾರರಿಗೆ ಹಾಸು ಮತ್ತು ವಿನ್ಯಾಸ ಮಾಡುವ ಕೆಲಸ ಮಾಡುತ್ತಾ ಸಕ್ರಿಯರಾಗಿದ್ದಾರೆ.
ಸೋಮಪ್ಪ ಜತ್ತನ್ನ ಅವರು 60 ಕೌಂಟ್ನ ಸಣ್ಣ ಚೌಕುಳಿ ವಿನ್ಯಾಸದ ಅಪೂರ್ವ ಕಟ್ ಬಾರ್ಡರ್ ಉಡುಪಿ ಸೀರೆಗಳನ್ನು ನೇಯುತ್ತಿದ್ದಾರೆ. ಈ ಹಿರಿಯ ಕಾಯಕ ಯೋಗಿಗಳು ಪರಿಸರ ಸ್ನೇಹಿ ಉಡುಪಿ ಸೀರೆ ನೇಕಾರಿಕೆಗೆ ನೀಡಿದ ಕೊಡುಗೆಗಾಗಿ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಅಳಿವಿನಂಚಿಗೆ ತಲುಪಿದ್ದ ಉಡುಪಿ ಸೀರೆ ನೇಕಾರಿಕೆ ಈಗ ಕದಿಕೆ ಟ್ರಸ್ಟ್ನ ಪ್ರಯತ್ನದಿಂದ ಪುನಃಶ್ಚೇತನಗೊಂಡಿದೆ.