ಮಂಗಳೂರು : ಸಕಲೇಶಪುರದ ಬಳಿ ನಡೆದ ಭೂಕುಸಿತದಿಂದ ಹಾನಿಗೊಂಡಿದ್ದ ರೈಲು ಮಾರ್ಗವನ್ನು ದುರಸ್ತಿ ಮಾಡಿದ ನಂತರ, ಮಂಗಳೂರು-ಬೆಂಗಳೂರು ರೈಲು ಸಂಚಾರ ಇಂದಿನಿಂದ ಪುನರಾರಂಭಗೊಂಡಿದೆ.
ಟ್ರ್ಯಾಕ್ ಪುನಸ್ಥಾಪನೆಯ ನಂತರ, ರೈಲು ಸಂಖ್ಯೆ 16575, ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್, ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ಸುರಕ್ಷಿತವಾಗಿ ಸಂಚರಿಸುವ ಮೂಲಕ ರೈಲು ಸಂಚಾರವನ್ನು ಪುನರಾರಂಭಿಸಿದೆ.
ಬೆಂಗಳೂರು ಮತ್ತು ವಿಜಯಪುರದಿಂದ ರೈಲು ಸಂಚಾರ ಬುಧವಾರ ರಾತ್ರಿ ಆರಂಭವಾಗಿದ್ದು, ಕಾರವಾರ ಮತ್ತು ಮಂಗಳೂರು ಜಂಕ್ಷನ್ನಿಂದ ರೈಲು ಸೇವೆಗಳು ಆಗಸ್ಟ್ 9ರಿಂದ ಪ್ರಾರಂಭವಾಗಲಿವೆ ಎಂದು ದಕ್ಷಿಣ ಪಶ್ಚಿಮ ರೈಲ್ವೆ (SWR) ಪ್ರಕಟಿಸಿದೆ. ಯಡಕುಮಾರಿ ಮತ್ತು ಕಡಗರವಳ್ಳಿ ನಡುವಿನ ಎಲ್ಲಾ ರೈಲುಗಳು ಮುಂದಿನ ಆದೇಶದವರೆಗೆ 15 ಕಿಮೀ ವೇಗದಲ್ಲಿ ಮಾತ್ರ ಸಂಚರಿಸಲಿವೆ ಎಂದು ತಿಳಿಸಲಾಗಿದೆ.
ಜುಲೈ 26ರಂದು ಸಂಜೆಯ ಧಾರಾಕಾರ ಮಳೆಯಿಂದಾಗಿ ಸೇತುವೆಯ ಬಳಿ ಭೂಕುಸಿತ ಸಂಭವಿಸಿದ್ದರಿಂದ, ದಕ್ಷಿಣ ಪಶ್ಚಿಮ ರೈಲ್ವೆಯ ಮೈಸೂರು ವಿಭಾಗವು ತಕ್ಷಣವೇ ಬೆಂಗಳೂರು-ಮಂಗಳೂರು ರೈಲು ಮಾರ್ಗದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು ಮತ್ತು ತಕ್ಷಣವೇ ಟ್ರ್ಯಾಕ್ ಮರುಸ್ಥಾಪನೆ ಕಾರ್ಯವನ್ನು ಪ್ರಾರಂಭಿಸಿತು.
ಈ ದುರಸ್ಥಿ ಕಾರ್ಯವನ್ನು ಪೂರ್ಣಗೊಳಿಸಲು ಸುಮಾರು 10 ದಿನಗಳು ಅಗತ್ಯವಾಯಿತು. ಆಗಸ್ಟ್ 4ರಂದು ಬೆಳಿಗ್ಗೆ 8:58ಕ್ಕೆ ರೈಲು ಹಳಿ ‘ಫಿಟ್’ ಎಂದು ಪ್ರಮಾಣೀಕರಿಸಲಾಯಿತು ಮತ್ತು ಗೂಡ್ಸ್ ಟ್ರೈನ್ ಅನ್ನು ಚಾಲನೆ ಮಾಡುತ್ತಾ ಮೊದಲ ಬಾರಿ ಸುರಕ್ಷತೆಯನ್ನು ಪರಿಶೀಲಿಸಲಾಯಿತು.
ಆಗಸ್ಟ್ 8ರಂದು, ಮೊದಲ ಪ್ಯಾಸೆಂಜರ್ ರೈಲು ಗೋಮಟೇಶ್ವರ ಎಕ್ಸ್ಪ್ರೆಸ್ ಮಧ್ಯಾಹ್ನ 12:37 ಕ್ಕೆ ಯಶಸ್ವಿಯಾಗಿ ಹಾದುಹೋಯಿತು. ದಕ್ಷಿಣ ಪಶ್ಚಿಮ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ಹೆಚ್ಚುವರಿ ಜಿಎಮ್ ಕೆ.ಎಸ್. ಜೈನ್ ಮತ್ತು ಇತರ ಹಿರಿಯ ಅಧಿಕಾರಿಗಳು, ಮೈಸೂರು ವಿಭಾಗದ ತಂಡ ಹಾಗೂ ವಲಯ ಪ್ರಧಾನ ಕಚೇರಿಯ ಇತರ ಅಧಿಕಾರಿಗಳನ್ನು ಈ ಕಾರ್ಯದಲ್ಲಿ ಮಾಡಿದ ಶ್ರಮಕ್ಕಾಗಿ ಶ್ಲಾಘಿಸಿದರು.