ಉಡುಪಿ : ಉಡುಪಿ ಶ್ರೀಕೃಷ್ಣ ಮಠಕ್ಕೆ ಡಿಸೆಂಬರ್ 29ರಂದು ರಾತ್ರಿ ದೇವರ ದರ್ಶನಕ್ಕೆ ಬಂದು ದಾಂಧಲೆ ನಡೆಸಿ, ಮಠದ ಸಿಬ್ಬಂದಿ, ದಿವಾನರಿಗೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿರುವ 8 ಮಂದಿ ಅಯ್ಯಪ್ಪ ಮಾಲಾಧಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೈದರಬಾದಿನ ಶಿವಕುಮಾರ, ವಿಶಾಲ್, ರಾಜು, ನವೀನ್ ರಾಜ್, ರವಿಕಿರಣ್, ಭಾನು, ಉಮೆಂದರ್, ರವಿಕಾಂತ್ ಬಂಧಿತ ಆರೋಪಿಗಳು.
ಶ್ರೀಕೃಷ್ಣಮಠದ ಒಳಗೆ ಹಾಗೂ ಹೊರಗೆ ತೀವ್ರ ಜನಸಂದಣಿಯಿಂದ ನೂಕು ನುಗ್ಗಲು ಉಂಟಾಗಿದ್ದು, ಈ ವೇಳೆ ದೇವರ ದರ್ಶನಕ್ಕೆ ಬಂದಿದ್ದ ಸುಮಾರು 7-8 ಜನ ಅಯ್ಯಪ್ಪ ಮಾಲಾಧಾರಿಗಳು ದಾಂಧಲೆ ನಡೆಸಿದ್ದಾರೆ. ಅಲ್ಲದೆ ರಥಬೀದಿಯಲ್ಲಿ ನಡೆಯುವ ರಥೋತ್ಸವದ ದೇವರ ಉತ್ಸವ ಮೂರ್ತಿ ಪಲ್ಲಕ್ಕಿಯೊಂದಿಗೆ ಕೃಷ್ಣಮಠದ ಮುಂಭಾಗದಿಂದ ಒಳಭಾಗಕ್ಕೆ ಬರುವ ವೇಳೆ ದಾಂಧಲೆ ನಡೆಸಿದ ಅಯ್ಯಪ್ಪ ಮಾಲಾಧಾರಿಗಳು ಕೃಷ್ಣಮಠದ ಸಿಬ್ಬಂದಿ ಜಗದೀಶ ಎಂಬವರಿಗೆ ಕೈಯಿಂದ ಹಲ್ಲೆ ಮಾಡಿದ್ದಾರೆ.
ಆತನನ್ನು ಅವರೆಲ್ಲರೂ ಸೇರಿ ಮೇಲೆತ್ತಿಕೊಂಡು ಶ್ರೀಕೃಷ್ಣ ಮಠದ ಗರ್ಭ ಗುಡಿಯ ಒಳಗಡೆ ಬಂದಿದ್ದು, ಆಗ ಮಠದ ದಿವಾನ ನಾಗರಾಜ ಆಚಾರ್ಯ, ಅಯ್ಯಪ್ಪಮಾಲಾಧಾರಿಗಳನ್ನು ತಡೆಯಲು ಪ್ರಯತ್ನಿಸಿದರು. ಆಗ ಅವರೆಲ್ಲ ನಾಗರಾಜ ಆಚಾರ್ಯರ ಮೇಲೂ ಹಲ್ಲೆಗೆ ಮುಂದಾದರೆನ್ನಲಾಗಿದೆ. ಈ ಸಂದರ್ಭದಲ್ಲಿ ಕೃಷ್ಣಮಠದಲ್ಲಿ ಭದ್ರತಾ ಕರ್ತವ್ಯ ಹಾಗೂ ಪಿಆರ್ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಡುಪಿ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್ಸ್ಟೇಬಲ್ ರವೀಂದ್ರ ಗಲಾಟೆ ಮಾಡದಂತೆ ಅಯ್ಯಪ್ಪ ಮಾಲಾಧಾರಿಗಳನ್ನು ಸಮಾಧಾನ ಮಾಡಿ ತಡೆಯಲು ಹೋದರು.
ಈ ವೇಳೆ ಅಯ್ಯಪ್ಪ ಮಾಲಾಧಾರಿಗಳು ಪೊಲೀಸ್ ಸಿಬ್ಬಂದಿಗೆ ಕೈಯಿಂದ ಮುಖಕ್ಕೆ, ಮೈ-ಕೈಗೆ ಕೆನ್ನೆಗೆ ಹಲ್ಲೆ ಮಾಡಿದರು. ಇದರಿಂದ ಅವರಿಗೆ ರಕ್ತ ಗಾಯ ಉಂಟಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾನ್ಸ್ಟೇಬಲ್ ರವೀಂದ್ರ ನೀಡಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.