ಉಡುಪಿ : ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜು ಕಲ್ಯಾಣಪುರದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ “ಕ್ರಿಯೇಟಿವ್ ಗುರುದೇವೋಭವ” ಕಾರ್ಯಕ್ರಮ ನೆರವೇರಿತು.
ಉಡುಪಿ ಪರಿಸರದಲ್ಲಿ ಹಲವಾರು ವರ್ಷಗಳಿಂದ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಡಾನಿಡಿಯೂರಿನ ಶ್ರೀ ದಿನಕರ್ ಶೆಟ್ಟಿಯವರು ಶಿಕ್ಷಕರ ದಿನದಂದು ಗುರುವಂದನೆ ಸ್ವೀಕರಿಸಿ ಮಾತನಾಡಿ ವ್ಯಕ್ತಿಗೆ ವ್ಯಕ್ತಿತ್ವವೇ ಭೂಷಣ ಗುರುಗಳ ಮಾರ್ಗದರ್ಶನದಿಂದ ರೂಪಿತವಾದ ವ್ಯಕ್ತಿತ್ವ ದೇಶಕ್ಕೆ ಕೀರ್ತಿ ತರಬಲ್ಲದು ಆದ್ದರಿಂದ ವಿದ್ಯಾರ್ಥಿಗಳು ಗುರುಹಿರಿಯರು ತಂದೆ-ತಾಯಿಯನ್ನು ಗೌರವಿಸುವುದನ್ನು ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸನ್ಮಾನಗೊಂಡ ಕುಂಬ್ರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ವೀಣಾ ಅವರು ಮಾತನಾಡುತ್ತಾ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂಸ್ಕಾರಯುತ ಶಿಕ್ಷಣ ಪ್ರಮುಖವಾದದ್ದು, ವಿದ್ಯಾರ್ಥಿಗಳು ಎಲ್ಲಾ ರೀತಿಯ ಕಲೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲೆಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಮೃತ ರೈ ಯವರು ಮಾತನಾಡಿ ಶಿಕ್ಷಕರಿಗೆ ಗೌರವ ಸಲ್ಲಿಸುವುದು ಸನ್ಮಾನವಲ್ಲ ಬದಲಾಗಿ ಅದು ದೇವರ ಪೂಜೆ ಎಲ್ಲರ ಭವಿಷ್ಯ ರೂಪಿಸುವ ಗುರುಗಳಿಗೆ ಶಿರಬಾಗಿ ನಮಿಸಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ರಿಯೇಟಿವ್ನ ಸಹ ಸಂಸ್ಥಾಪಕರಾದ ಡಾ. ಬಿ ಗಣನಾಥ್ ಶೆಟ್ಟಿ ಅವರು ತಪ್ಪು ತಿದ್ದಿ ಜೀವನಪೂರ್ತಿ ವಿದ್ಯಾರ್ಥಿಗಳ ಏಳಿಗೆಗಾಗಿ ಬದುಕುವವರು ಶಿಕ್ಷಕರು. ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ನೈತಿಕತೆ ಉಳಿಸಿಕೊಂಡು ಅದರ ಘನತೆ ಹೆಚ್ಚಿಸುವುದು ಕರ್ತವ್ಯವಾಗಬೇಕು, ಅಧ್ಯಯನಶೀಲರಾಗಬೇಕಾದದ್ದು ಇಂದಿನ ಅಗತ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತ್ರಿಶಾ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಜೋಯೆಲ್ ಮನೋಜ್ ಫರ್ನಾಂಡಿಸ್ ರವರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ರಾಮಕೃಷ್ಣ ಹೆಗಡೆ ಸರ್ವರನ್ನು ಸ್ವಾಗತಿಸಿದರು. ಆಡಳಿತ ಅಧಿಕಾರಿ ಜಯಪ್ರಕಾಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರ ದಿನಾಚರಣೆಯಲ್ಲಿ ಉಪನ್ಯಾಸಕ ಉಪನ್ಯಾಸಕೇತರ ವೃಂದದವರು ಪಾಲ್ಗೊಂಡು ಸರ್ವಪಲ್ಲಿ ರಾಧಾಕೃಷ್ಣನ್ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಉಪನ್ಯಾಸಕ ಯೋಗೀಶ್ ಮೊಗವೀರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.