ಉಡುಪಿ : ಕಾಶ್ಮೀರದ ಪೆಹಲ್ಗಾಮ್ನಲ್ಲಿ ನಡೆದ ಹಿಂದೂಗಳ ನರಮೇಧದಲ್ಲಿ ಮೃತಪಟ್ಟವರ ಆತ್ಮದ ಸದ್ಗತಿಗಾಗಿ ಉಡುಪಿಯ ಕಡಲತೀರದಲ್ಲಿ ವಿಶೇಷ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು. ಅಭಿನವ ಭಾರತ ಸೊಸೈಟಿ ಸಂಘಟನೆಯ ಆಶ್ರಯದಲ್ಲಿ ನಡೆದ ಈ ಅಪರಕ್ರಿಯೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ತರ್ಪಣ ಹೋಮವನ್ನು ಆಯೋಜಿಸಲಾಗಿತ್ತು.
26 ಮೃತ ಕುಟುಂಬಗಳ ಪರವಾಗಿ 26 ಯುವಕರು ಈ ತರ್ಪಣ ಕಾರ್ಯದಲ್ಲಿ ಪಾಲ್ಗೊಂಡರು. ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ಸೂರಲು ತಂತ್ರಿಗಳ ನೇತೃತ್ವದಲ್ಲಿ ಹನೂಮಾನ್ ವಿಠೋಭ ರುಕುಮಾಯಿ ಮಂದಿರದ ಬಳಿಯ ಕಡಲತೀರದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಗೀತಾ ತ್ರಿಷ್ಟುಪ್ ಹೋಮವನ್ನು ನೆರವೇರಿಸಿ ಪೂರ್ಣಾಹುತಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪವಿತ್ರ ಮಂತ್ರಗಳ ಸಹಸ್ರ ಪಠಣ ನಡೆಯಿತು. ನರಮೇಧದಲ್ಲಿ ಬಲಿಯಾದ ಹಿಂದೂ ಕುಟುಂಬಗಳ ಜೊತೆ ಹಿಂದೂ ಸಮಾಜ ಸದಾ ನಿಂತಿದೆ ಎಂಬುದನ್ನು ಸಾರುವ ಈ ಕಾರ್ಯಕ್ರಮದಲ್ಲಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಯಿತು. ಅಲ್ಲದೆ, ದುಃಖದಲ್ಲಿರುವ ಕುಟುಂಬಗಳಿಗೆ ನೋವನ್ನು ಸಹಿಸುವ ಶಕ್ತಿಯನ್ನು ನೀಡುವಂತೆ ಭಗವಂತನಲ್ಲಿ ಮೊರೆಯಿಡಲಾಯಿತು.
ಈ ಕುರಿತು ಮಾತನಾಡಿದ ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ಸೂರಲು ತಂತ್ರಿಗಳು, “ಪವಿತ್ರ ನದಿಗಳ ಸಂಗಮವಾದ ಈ ಸಮುದ್ರ ತೀರದಲ್ಲಿ ಹೋಮಗಳನ್ನು ನೆರವೇರಿಸಲಾಗಿದೆ. ಮೃತಪಟ್ಟ ಆತ್ಮಗಳಿಗೆ ಸದ್ಗತಿ ದೊರೆಯಲಿ ಮತ್ತು ಅವರ ಕುಟುಂಬಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ನಾವು ಪ್ರಾರ್ಥಿಸುತ್ತೇವೆ” ಎಂದು ತಿಳಿಸಿದರು.
ಅಭಿನವ ಭಾರತ ಸೊಸೈಟಿಯ ಈ ಕಾರ್ಯಕ್ರಮವು ಪೆಹಲ್ಗಾಮ್ ನರಮೇಧದ ಸಂತ್ರಸ್ತರಿಗೆ ಹಿಂದೂ ಸಮಾಜದ ಬೆಂಬಲ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸುವ ಮಹತ್ವದ ಕಾರ್ಯಕ್ರಮವಾಗಿತ್ತು.