ಉಡುಪಿ : ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯವರಿಂದ ಚಿಕಿತ್ಸೆ ಕೊಡಲು ಸಾಧ್ಯವಾಗದೆ, ಕೊಠಡಿಯ ಒಳಗೆ ಅಸಹಾಯಕ ಸ್ಥಿತಿಯಲ್ಲಿದ್ದ ಮನೋರೋಗಿ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ ಕಾರ್ಕಳ ಬೈಲೂರು ಸಮೀಪದ ರಂಗನಪಲ್ಕೆಯ ಹೊಸ ಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.
ಮಹಿಳೆಯನ್ನು ಆಕೆಯ ಸಹೋದರ ತನ್ನ ವೃದ್ದ ಮಾವನ ಬಾಡಿಗೆ ಮನೆಯಲ್ಲಿ ಇರಿಸಿ ನಾಪತ್ತೆಯಾಗಿದ್ದರು. ಮಾವ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ವೃದ್ದಾಪ್ಯದಲ್ಲಿಯೂ ಹೋಟೆಲೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.
ಹೊರಗೆ ಬಿಟ್ಟರೆ ಕೈಗೆ ಸಿಗದ ಈ ಮಹಿಳೆಗೆ ಚಿಕಿತ್ಸೆ ಕೊಡಿಸಲು ಅವರಿಂದ ಸಾಧ್ಯವಾಗದೆ ಮಹಿಳೆಯ ಮನೋರೋಗ ಉಲ್ಭಣವಾಗಿತ್ತು.
ಈ ಬಗ್ಗೆ ವೃದ್ದರಿಂದ ಮಾಹಿತಿ ಪಡೆದ ವಿಶು ಶೆಟ್ಟಿ ಅವರು ಮಹಿಳೆಗೆ ಚಿಕಿತ್ಸೆ ಹಾಗೂ ಆಶ್ರಯ ನೀಡಲು ಹೊಸ ಬೆಳಕು ಆಶ್ರಮದ ಮುಖ್ಯಸ್ಥರಾದ ತನುಲಾ ಅವರನ್ನು ಸಂಪರ್ಕಿಸಿ ವಿನಂತಿಸಿದ್ದಾರೆ. ವಿಶು ಶೆಟ್ಟಿ ಅವರ ವಿನಂತಿಗೆ ಓಗೊಟ್ಟ ತನುಲಾ ಅವರು ಮಹಿಳೆಗೆ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಜಯಶ್ರೀ ಉದ್ಯಾವರ ಹಾಗೂ ಆಸ್ಟಿನ್ ಕಟಪಾಡಿ ನೆರವಾದರು. ಮಹಿಳೆಯ ಸಂಬಂಧಿಕರು ಹೊಸ ಬೆಳಕು ಆಶ್ರಮವನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.