ಮಂಗಳೂರು : ಮಂಗಳೂರಿನ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯ ಬಹುವಿಭಾಗ ತಜ್ಞರ ತಂಡವು ಪಯ್ಯನೂರಿನ 38 ವರ್ಷದ ಮಹಿಳೆಯೊಬ್ಬರ ಅತ್ಯಂತ ಸಂಕೀರ್ಣ ಪ್ರಕರಣವನ್ನು ಫಲಪ್ರದವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ಮೂರು ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಗಿಯು, ʻಪ್ಲೆಸೆಂಟಾ ಪೆರ್ಕ್ರೆಟಾʼ ಎಂಬ ಸಮಸ್ಯೆಯಿಂದಾಗಿ ತನ್ನ ನಾಲ್ಕನೇ ಗರ್ಭಾವಸ್ಥೆಯಲ್ಲಿ ಮಾರಣಾಂತಿಕ ಅಡಚಣೆಯನ್ನು ಎದುರಿಸುತ್ತಿದ್ದರು. ʻಪ್ಲೆಸೆಂಟಾ ಪೆರ್ಕ್ರೆಟಾ; ಎಂದರೆ, ದೇಹದಲ್ಲಿರುವ ʻಪ್ಲೆಸೆಂಟಾʼ ಅಥವಾ ಜರಾಯು ಅಂಗವು, ಗರ್ಭಾಶಯದ ಸ್ನಾಯು ಪದರಗಳಿಗೆ ಮತ್ತು ಮೂತ್ರಕೋಶ ಮುಂತಾದ ಸುತ್ತಮುತ್ತಲಿನ ಅಂಗಗಳಿಗೂ ಹಬ್ಬುವ ಗಂಭೀರ ಪರಿಸ್ಥಿತಿ.
ಗರ್ಭಧಾರಣೆಯ ಎರಡನೇ ತ್ರೈಮಾಸಿಕದಲ್ಲಿ ಆಕೆಗೆ ಈ ಸ್ಥಿತಿ ಇರುವುದನ್ನು ಗುರುತಿಸಲಾಯಿತು. 8ನೇ ತಿಂಗಳಲ್ಲಿ ನೋವು ಮತ್ತು ರಕ್ತಸ್ರಾವ ಕಾಣಿಸಿಕೊಂಡಿದ್ದರಿಂದ ಆಕೆಯ ಸ್ಥಿತಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ರೋಗಿಯನ್ನು ಪಯ್ಯನೂರಿನ ಖಾಸಗಿ ಆಸ್ಪತ್ರೆಯಿಂದ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಯಿತು. ಒಬಿಜಿ ತಜ್ಞರಾದ ಡಾ. ವಿದ್ಯಾಶ್ರೀ ಕಾಮತ್, ಮೂತ್ರಶಾಸ್ತ್ರ ತಜ್ಞರಾದ ಡಾ. ಸನ್ಮಾನ್ ಗೌಡ, ನವಜಾತ ಶಿಶುವಿಜ್ಞಾನ ತಜ್ಞರಾದ ಡಾ.ಮಾರಿಯೋ ಬುಕೆಲೊ ಹಾಗೂ ಅರಿವಳಿಕೆ ತಜ್ಞರಾದ ಡಾ.ಮಧುಸೂದನ್ ಉಪಾಧ್ಯ ನೇತೃತ್ವದ ಬಹುವಿಭಾಗದ ತಂಡವು ಒಟ್ಟಾಗಿ ಕೆಲಸ ಮಾಡುವ ಮೂಲಕ ಸುರಕ್ಷಿತ ಹೆರಿಗೆ ಹಾಗೂ ತಾಯಿ ಮತ್ತು ಮಗು ಇಬ್ಬರ ಚೇತರಿಕೆಯನ್ನು ಖಚಿತಪಡಿಸಿತು.
ಪ್ರಸೂತಿ ತಂಡದ ನೇತೃತ್ವ ವಹಿಸಿದ್ದ ಡಾ. ವಿದ್ಯಾಶ್ರೀ ಕಾಮತ್, ಅವರು ಮಾತನಾಡಿ, “ಈ ಸವಾಲಿನ ಪ್ರಕರಣದಲ್ಲಿ, ರೋಗಿಯು ʻಪ್ಲಸೆಂಟಾ ಪೆರ್ಕ್ರೆಟಾʼದಿಂದ ಬಳಲುತ್ತಿದ್ದರು. ಇದೊಂದು ಗಂಭೀರ ಗರ್ಭಧಾರಣೆಯ ಸಮಸ್ಯೆಯಾಗಿದ್ದು, ಅಲ್ಲಿ ʻಪ್ಲಸೆಂಟಾʼ, ಗರ್ಭಾಶಯದ ಗೋಡೆಗಳಿಗೆ ಮತ್ತು ಕೆಲವೊಮ್ಮೆ ಹೆರಿಗೆಯ ನಂತರ, ಮೂತ್ರಕೋಶದಂತಹ ಹತ್ತಿರದ ಅವಯವಗಳಿಗೂ ವ್ಯಾಪಿಸುತ್ತದೆ. ಸಿಸೇರಿಯನ್ ಹೆರಿಗೆಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಕಳೆದ ದಶಕದಲ್ಲಿ ʻಪ್ಲಸೆಂಟಾ ಪೆರ್ಕ್ರೆಟಾʼ ಪ್ರಕರಣಗಳು 10 ಪಟ್ಟು ಹೆಚ್ಚಾಗಿವೆ. ಇದು ತಾಯಿಯ ಅಸ್ವಸ್ಥತೆ ಮತ್ತು ಮರಣಕ್ಕೆ ಪ್ರಮುಖ ಕಾರಣವಾಗಿದೆ ಮತ್ತು ಹೆರಿಗೆಯ ನಂತರದ ʻಹಿಸ್ಟೆರೆಕ್ಟಮಿʼ ಗೆ (ಗರ್ಭಾಶಯ ನಿರ್ಮೂಲನೆ) ಪ್ರಮುಖ ಕಾರಣವಾಗಿದೆ. ಇದು ಸಾಮಾನ್ಯವಾಗಿ ಭಾರಿ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಜೊತೆಗೆ ಇದು ಮಾರಣಾಂತಿಕವೂ ಆಗಬಹುದು. ದೊಡ್ಡ ಪ್ರಮಾಣದಲ್ಲಿ ರಕ್ತದ ವರ್ಗಾವಣೆ, ಐಸಿಯುಗೆ ದಾಖಲಾಗುವುದು, ದೀರ್ಘಕಾಲದವರೆಗೆ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಮತ್ತು ʻಹಿಸ್ಟೆರೆಕ್ಟಮಿʼಯಿಂದಾಗಿ ಸಂತಾನೋಪತ್ಪತ್ತಿ ಅವಕಾಶ ನಷ್ಟ ಹಾಗೂ ಮೂತ್ರಕೋಶ ಮತ್ತು ಮೂತ್ರನಾಳದಂತಹ ಇತರ ಅಂಗಗಳ ಹಾನಿಗೂ ಇದು ಕಾರಣವಾಗಬಹುದು. ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಹಚ್ಚುವುದು, ಹೆರಿಗೆಯ ಸಮಯ ಮತ್ತು ಸ್ಥಳದ ಬಗ್ಗೆ ನಿಖರವಾದ ಯೋಜನೆ, ಬ್ಲಡ್ ಬ್ಯಾಂಕ್ ಸೌಲಭ್ಯಗಳೊಂದಿಗೆ ಬಹುವಿಭಾಗದ ತಜ್ಞರ ತಂಡದ ಉಪಸ್ಥಿತಿಯು ತಾಯಿಯ ಅಸ್ವಸ್ಥತೆ ಮತ್ತು ಮರಣವನ್ನು ಕಡಿಮೆ ಮಾಡಲು ಅನುಕೂಲಕಾರಿ” ಎಂದು ಹೇಳಿದರು.
“ಹಿಂದೆ 3 ಸಿಸೇರಿಯನ್ ಹೆರಿಗೆಗಳಿಗೆ ಒಳಗಾಗಿದ್ದ ಈ ರೋಗಿಯು ತನ್ನ 4ನೇ ಗರ್ಭಾವಸ್ಥೆಯಲ್ಲಿ, ಗರ್ಭಧಾರಣೆಯ 32 ವಾರಗಳಲ್ಲಿ ಈ ಸಮಸ್ಯೆಯೊಂದಿಗೆ ನಮ್ಮ ಬಳಿಗೆ ಬಂದರು. ಅವರ ಮೂತ್ರಕೋಶದ ಭಾಗಶಃ ಭಾಗಕ್ಕೆ ʻಪ್ಲೆಸೆಂಟಾʼ ಆಕ್ರಮಣವಾಗಿರುವುದು ಪತ್ತೆಯಾಯಿತು. ಅವರಿಗೆ ತೀವ್ರ ಹೊಟ್ಟೆ ನೋವು ಹಾಗೂ ರಕ್ತಸ್ರಾವ ಆಗುತ್ತಿತ್ತು. ಈ ಸ್ಥಿತಿಯಿಂದ ಉದ್ಭವಿಸುವ ಸಂಭಾವ್ಯ ಅಪಾಯಗಳಿಂದ ಆಕೆಯನ್ನು ಮತ್ತು ಆಕೆಯ ಮಗುವಿನ ಜೀವವನ್ನು ಉಳಿಸಲು ತಕ್ಷಣ ಹೆರಿಗೆ ಮಾಡಿಸುವುದು ಅಗತ್ಯವಿತ್ತು. ಮೂತ್ರಕೋಶಕ್ಕೆ ಮೊದಲು ಚಿಕಿತ್ಸೆ ನೆರವೇರಿಸಿ, ರಕ್ತ ಸ್ರಾವವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಂಡ ನಂತರ ಆಕೆಯನ್ನು ಸಿಸೇರಿಯನ್ ಮತ್ತು ಹಿಸ್ಟ್ರೆಕ್ಟಮಿಗೆ ಒಳಪಡಿಸಲಾಯಿತು. ಅಲ್ಲಿ ಮಗುವಿನ ಹೆರಿಗೆಯ ನಂತರ ಇಡೀ ಗರ್ಭಾಶಯವನ್ನು ತೆಗೆದುಹಾಕಲಾಯಿತು. ಇಂತಹ ಸಂದರ್ಭಗಳಲ್ಲಿ ರಕ್ತಸ್ರಾವವು ಪ್ರಮುಖ ಅಡಚಣೆಯಾಗಿರುವುದರಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮತ್ತು ನಂತರ ಆಕೆಗೆ ಸಾಕಷ್ಟು ರಕ್ತ ಮತ್ತು ರಕ್ತ ಉತ್ಪನ್ನಗಳನ್ನು ಪೂರೈಸಲಾಯಿತು.
ಸಣ್ಣ ಶಸ್ತ್ರಚಿಕಿತ್ಸೆಯ ನಂತರದ ಸಮಸ್ಯೆಗಳನ್ನು ನಿಭಾಯಿಸಲು ಆಕೆಯನ್ನು ಐಸಿಯುನಲ್ಲಿ ಇರಿಸಿ ನಿಗಾ ಮಾಡಲಾಯಿತು ಮತ್ತು ಆಸ್ಪತ್ರೆಗೆ ದಾಖಲಾದ 1 ವಾರದ ನಂತರ ಬಿಡುಗಡೆ ಮಾಡಲಾಯಿತು” ಎಂದು ಡಾ.ವಿದ್ಯಾಶ್ರೀ ವಿವರಿಸಿದರು.
ಶಸ್ತ್ರಚಿಕಿತ್ಸೆಯಲ್ಲಿ ಮೂತ್ರಶಾಸ್ತ್ರಕ್ಕೆ ಸಂಬಂಧಿಸಿದ ಚಿಕಿತ್ಸೆ ನಿರ್ವಹಿಸಿದ ಡಾ.ಸನ್ಮಾನ್ ಗೌಡ, ಅವರು, “ಶಸ್ತ್ರಚಿಕಿತ್ಸೆಗೆ ಮುಂಚೆ ಮಾಡಲಾದ ಪರೀಕ್ಷೆ ವೇಳೆ ಮೂತ್ರಕೋಶವು ಪ್ಲೆಸೆಂಟಾದ ಆಕ್ರಮಣಕ್ಕೆ ಒಳಗಾಗಿರುವುದು ಬೆಳಕಿಗೆ ಬಂದಿತು. ಮಗುವಿನ ಯಶಸ್ವಿ ಹೆರಿಗೆಯ ನಂತರ, ಗರ್ಭಾಶಯದ ಮೂಲಕ ಮೂತ್ರಕೋಶದ ಛೇದನ ಮಾಡಿ, ಮೂತ್ರಕೋಶದ ದುರಸ್ತಿ ಮಾಡಲಾಯಿತು. ಅತ್ಯಂತ ಸವಾಲಿನ, ಕಠಿಣ ಮತ್ತು ನಿರ್ಣಾಯಕ ಭಾಗವೆಂದರೆ ಮೂತ್ರಕೋಶವನ್ನು ಗರ್ಭಾಶಯ ಮತ್ತು ʻಪ್ಲೆಸೆಂಟಾʼದಿಂದ ಬೇರ್ಪಡಿಸುವುದಾಗಿತ್ತು. ಹೆಚ್ಚಿನ ರಕ್ತಸ್ರಾವದ ಅಪಾಯವನ್ನು ಹೊಂದಿದ್ದರಿಂದ, ಮೊದಲು ರಕ್ತಸ್ರಾವ ನಿಲ್ಲಿಸಬೇಕಾಗಿತ್ತು. ಇದನ್ನು ಚೆನ್ನಾಗಿ ನಿರ್ವಹಿಸಲಾಗಿದೆ. ಇಂತಹ ಸಂಕೀರ್ಣ ಸಂದರ್ಭಗಳಲ್ಲಿ ನಿಖರವಾದ ಶಸ್ತ್ರಚಿಕಿತ್ಸಾ ಪೂರ್ವ ಮೌಲ್ಯಮಾಪನ ಹಾಗೂ ಬಹುವಿಭಾಗದ ತಜ್ಞರೊಂದಿಗೆ ಸಮಾಲೋಚನೆ ಮೂಲಕ ಯೋಜನೆ ರೂಪಿಸುವುದು ಮುಖ್ಯವಾಗಿದೆ. ಮೂತ್ರಕೋಶದ ದುರಸ್ತಿಯ ನಂತರ, ಮೂತ್ರಕೋಶದ ಒಳಗಿನ ಭಾಗವನ್ನು ಮೌಲ್ಯಮಾಪನ ಮಾಡಲು ʻಸಿಸ್ಟೊಸ್ಕೋಪಿʼ ನಡೆಸಲಾಯಿತು. ಈ ವೇಳೆ, ಮೂತ್ರಕೋಶಕ್ಕೆ ಮೂತ್ರನಾಳದ ತೆರೆಯುವಿಕೆಯ ಸಾಮಾನ್ಯಗಿರುವುದು ಬಹಿರಂಗವಾಯಿತು. ಈ ಒಟ್ಟಾರೆ, ಫಲಿತಾಂಶವು ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳನ್ನು ನಿರ್ವಹಿಸುವಲ್ಲಿ ಸಹಯೋಗದ ವಿಧಾನದ ಮಹತ್ವವೇನು ಎಂಬುದನ್ನು ಸೂಚಿಸುತ್ತದೆ,” ಎಂದು ಹೇಳಿದರು.
ಸಿಸೇರಿಯನ್ ನಂತರ, 31 ವಾರಗಳಲ್ಲಿ 1.76 ಕೆಜಿ ಕಡಿಮೆ ಜನನ ತೂಕದೊಂದಿಗೆ ಅಕಾಲಿಕವಾಗಿ ಜನಿಸಿದ ಮಗುವನ್ನು ತಕ್ಷಣ ಡಾ. ಮಾರಿಯೋ ಬುಕೆಲೊ ಅವರ ಆರೈಕೆಯಲ್ಲಿ ನವಜಾತ ತೀವ್ರ ನಿಗಾ ಘಟಕಕ್ಕೆ (ಎನ್ಐಸಿಯು) ಸ್ಥಳಾಂತರಿಸಲಾಯಿತು. “ಮಗು ಸಂಪೂರ್ಣ ಚೇತರಿಸಿಕೊಂಡಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆಯ ʻಎನ್ಐಸಿಯುʼನಲ್ಲಿ ಚೇತರಿಕೆ ಬಳಿಕ 15ನೇ ದಿನದಂದು ಬಿಡುಗಡೆ ಮಾಡಲಾಯಿತು. ನಮ್ಮ ನುರಿತ ಸಹಾಯಕ ಸಿಬ್ಬಂದಿ, ಸುಧಾರಿತ ಸೌಲಭ್ಯಗಳು ಮತ್ತು ವಿಶೇಷ ʻಎನ್ಐಸಿಯುʼ ತಂಡದ ಸಂಯೋಜಿತ ಪ್ರಯತ್ನಗಳಿಗೆ ಧನ್ಯವಾದಗಳು” ಎಂದು ಡಾ. ಮಾರಿಯೋ ಬುಕೆಲೊ ಹೇಳಿದರು.
ಈ ಪ್ರಕರಣದಲ್ಲಿ ರೋಗಿಯ ಯಶಸ್ವಿ ಫಲಿತಾಂಶವು, ಸಂಕೀರ್ಣ ವೈದ್ಯಕೀಯ ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ʻಮಲ್ಟಿಸ್ಪೆಷಾಲಿಟಿ ಆರೈಕೆʼಯ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುತ್ತದೆ. ಅರಿವಳಿಕೆ ತಜ್ಞ ಡಾ.ಮಧುಸೂದನ್ ಉಪಾಧ್ಯಾಯ ಅವರು ಕಾರ್ಯವಿಧಾನದ ಉದ್ದಕ್ಕೂ ರೋಗಿಯ ಸ್ಥಿತಿಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ ಅವರು ಈ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿ, “ಈ ಪ್ರಕರಣವು ಕೆಎಂಸಿ ಆಸ್ಪತ್ರೆಯಲ್ಲಿ ನಾವು ಒದಗಿಸಲು ಪ್ರಯತ್ನಿಸುವ ಉನ್ನತ ಗುಣಮಟ್ಟದ ಆರೈಕೆಗೆ ಉದಾಹರಣೆಯಾಗಿದೆ. ನಮ್ಮ ಬಹುವಿಭಾಗದ ತಜ್ಞ ವೈದ್ಯರ ತಂಡ ಮತ್ತು ಅನುಭವಿ ಸಹಾಯಕ ಸಿಬ್ಬಂದಿಯು ಅತ್ಯಂತ ಸಂಕೀರ್ಣ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ರೋಗಿಗಳು ಸಹ ಅತ್ಯುತ್ತಮ ಚಿಕಿತ್ಸೆ ಮತ್ತು ಫಲಿತಾಂಶಗಳನ್ನು ಪಡೆಯುವುದನ್ನು ಖಚಿತಪಡಿಸುತ್ತಾರೆ. ನಮ್ಮ ತಂಡದ ಸಮರ್ಪಣೆ ಮತ್ತು ಪರಿಣತಿಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ, ಇದು ನಮ್ಮ ರೋಗಿಗಳ ಜೀವನದಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡುತ್ತಲೇ ಇರುತ್ತದೆ” ಎಂದು ಹೇಳಿದರು.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತಂಡದಿಂದ ಈ ಪ್ರಕರಣದ ಯಶಸ್ವಿ ನಿರ್ವಹಣೆಯು ಸುಧಾರಿತ ವೈದ್ಯಕೀಯ ಆರೈಕೆಯನ್ನು ಒದಗಿಸುವ ಸಂಸ್ಥೆಯ ಬದ್ಧತೆಯನ್ನು ಎತ್ತಿ ತೋರುತ್ತದೆ, ಅತ್ಯಂತ ಸವಾಲಿನ ಸಂದರ್ಭಗಳಲ್ಲಿಯೂ ತಾಯಿ ಮತ್ತು ಮಗುವಿನ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತರಿಪಡಿಸಿದೆ.