ಕಾರ್ಕಳ : ಬೈಕಿಗೆ ಕಲ್ಲು ಸಾಗಾಟದ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಸಹಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಮುಂಜಾನೆ ಬೈಲೂರು ಸಮೀಪದ ಉಮ್ಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್ ಬಳಿ ನಡೆದಿದೆ.
ಗಾಯಗೊಂಡ ಬೈಕ್ ಸವಾರನನ್ನು ಜಾರ್ಕಳ ಸಮೀಪದ ಸೂರ್ಯ(19ವ) ಹಾಗೂ ಪ್ರಜ್ವಲ್ (19) ಎಂದು ಗುರುತಿಸಲಾಗಿದೆ. ಇವರು ಜಾರ್ಕಳದಿಂದ ಬೈಲೂರು ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಹೋಗುತ್ತಿದ್ದ ಮಿನಿ ಲಾರಿ ಚಾಲಕ ಕಲ್ಲುಕೋರೆಗೆ ಹೋಗಲು ಯಾವುದೇ ಸೂಚನೆ ನೀಡದೇ ಏಕಾಏಕಿ ಬಲಕ್ಕೆ ತಿರುಗಿದ ಪರಿಣಾಮ ಹಿಂಬದಿಯಿoದ ಬರುತ್ತಿದ್ದ ಬೈಕ್ ನಿಯಂತ್ರಣ ಕಳೆದುಕೊಂಡು ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸವಾರ ಹಾಗೂ ಸಹಸವಾರ ಗಂಭಿರವಾಗಿ ಗಾಯಗೊಂಡಿದ್ದು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತವೆಸಗಿದ ಲಾರಿ ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರದ ನಿವಾಸಿ ಬಿಜೆಪಿ ಮುಖಂಡ ರವೀಂದ್ರ ಮಡಿವಾಳ ಎಂಬವರಿಗೆ ಸೇರಿದ್ದು, ಕಲ್ಲು ಸಾಗಾಟ ಮಾಡುವ ಲಾರಿಯಾಗಿದೆ. ಕಲ್ಲು ತುಂಬಿಸಲು ಕೋರೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಲಾರಿ ಚಾಲಕನ ಅಜಾಗರೂಕತೆ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣಾ ಪೊಲೀಸರು ಧಾವಿಸಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚಿನ ಹಲವು ವರ್ಷಗಳಿಂದ ಕಾರ್ಕಳ ತಾಲೂಕಿನಲ್ಲಿ ಪರವಾನಿಗೆ ಇಲ್ಲದೇ ಕಲ್ಲು ಗಣಿಗಾರಿಕೆ ಹಾಗೂ ಕಲ್ಲು ಸಾಗಾಟ ಲಾರಿಗಳಿಗೆ ಸಾಕಷ್ಟು ಅಮಾಯಕ ಜೀವಗಳು ಬಲಿಯಾಗುತ್ತಿವೆ. ಕಳೆದ 3 ತಿಂಗಳ ಹಿಂದಷ್ಟೇ ಪಳ್ಳಿಯಲ್ಲಿ ಕಲ್ಲು ಗಣಿಗಾರಿಕೆಯ ಟಿಪ್ಪರ್ ಲಾರಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ನಿಟ್ಟೆಯ ಬಳಿ ಕಲ್ಲು ಸಾಗಾಟದ ಲಾರಿ ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಇದಲ್ಲದೇ ಈ ಹಿಂದೆ ಹಲವಾರು ದುರ್ಘಟನೆಗಳು ನಡೆದಿದ್ದು ಈ ಕುರಿತು ಪೊಲೀಸ್ ಇಲಾಖೆ ಹಾಗೂ ಗಣಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.