ಉಡುಪಿ : ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳುವ ಕಲೆ ಕರಾಟೆ. ಈ ಕಲೆಯನ್ನು ನಿರಂತರ ಅಭ್ಯಾಸ ಮಾಡುವುದು ಇಂದಿನ ಅಗತ್ಯತೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಅವರು ಪರ್ಯಾಯ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ ಉಡುಪಿ ಇದರ ಆಶ್ರಯದಲ್ಲಿ ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಕರ್ನಾಟಕ (ಬುಡೋಕಾನ್ ಕರಾಟೆ ಇಂಟರ್ ನ್ಯಾಶನಲ್ ಆಸ್ಟ್ರೇಲಿಯ) ಇದರ ನೇತೃತ್ವದಲ್ಲಿ ಶ್ರೀಕೃಷ್ಣ ಮಠದ ಮಧ್ವಾಂಗಣದಲ್ಲಿ ನಡೆದ 4ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾ ಕೂಟವನ್ನು ಪಟ್ಟದ ಕಿರಿಯ ಶ್ರೀಗಳಾದ ಸುಶ್ರೀoದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಪ್ರಶಸ್ತಿ ಫಲಕಗಳನ್ನು ಅನಾವರಣಗೊಳಿಸಿ ಆಶೀರ್ವಚನದ ನುಡಿಗಳನ್ನಾಡಿದರು.
ಶ್ರೀಕೃಷ್ಣ ಮಲ್ಲ ಯುದ್ಧದಲ್ಲಿ ನಿಪುಣ. ಮಲ್ಲನ ಅಧಿಪತಿ ಕೃಷ್ಣನ ನಾಡಿನಲ್ಲಿ ಅಭೂತಪೂರ್ವ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ನಡೆಯುತ್ತಿರುವುದು ಕೃಷ್ಣನಿಗೂ ಅತ್ಯಂತ ಸಂತೋಷದಾಯಕ ವಿಷಯವಾಗಿದೆ. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದಂತೆ ಎಲ್ಲರೂ ಸ್ವಯಂ ರಕ್ಷಣೆಗಾಗಿ ಇಂತಹ ಕಲೆಯ ಅಭ್ಯಾಸ ಮಾಡುವುದು ಅವಶ್ಯಕ. ಈ ಸ್ಪರ್ಧೆ ಯಶಸ್ವಿಯಾಗಿ ನಡೆಯಲಿ. ಆಯೋಜಿಸಿದ ಸಂಸ್ಥೆಗೂ ಭಾಗವಹಿಸಿದ ಎಲ್ಲರಿಗೂ ಶ್ರೀ ಕೃಷ್ಣ ಶ್ರೇಯಸ್ಸನ್ನುoಟುಮಾಡಲಿ ಎಂದು ಹರಸಿದರು.
ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಾಮಾಜಿಕ, ಧಾರ್ಮಿಕ, ಕ್ರೀಡಾ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಹಿರಿಯ ಕರಾಟೆ ಶಿಕ್ಷಕ ಪ್ರಭಾಕರ ಕುಂದರ್ ಮಲ್ಪೆ, ಬಿಲ್ಲವರ ಸೇವಾ ಸಂಘ(ರಿ.) ಮಲ್ಪೆ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ಮತ್ತು ಶ್ರೀ ನಾರಾಯಣ ಗುರು ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಲಿ. ಉಪಾಧ್ಯಕ್ಷೆ ವಿಜಯಾ ಜಿ. ಬಂಗೇರ, ಮುಳುಗು ತಜ್ಞ ಈಶ್ವರ್ ಮಲ್ಪೆ, ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಸಮಾಜ ಸೇವಕ ಹರಿಶ್ಚಂದ್ರ ಅಂಬಲಪಾಡಿ ಇವರನ್ನು ಸನ್ಮಾನಿಸಲಾಯಿತು.