ಉಡುಪಿ : ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾಗಾಂಧಿ ಅವರು ಕುಟುಂಬದೊಂದಿಗೆ ಭಾನುವಾರ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿ ದರ್ಶನ ಪಡೆದು ಭೋಜನ ಪ್ರಸಾದ ಸ್ವೀಕರಿಸಿ ಪರ್ಯಾಯ ಶ್ರೀಪಾದರಿಂದ ಕೋಟಿಗೀತಾ ಲೇಖನ ಯಜ್ಞದ ದೀಕ್ಷೆ ಪಡೆದು ಮಂತ್ರಾಕ್ಷತೆ ಸ್ವೀಕರಿಸಿದರು.
Spiritual Journey
ಹೊಸವರ್ಷಕ್ಕೆ ಪುಷ್ಪಾಲಂಕೃತಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ – ಮಂಜುನಾಥ ಸ್ವಾಮಿಯ ದರ್ಶನಕ್ಕೆ ಭಕ್ತರ ದಂಡು
ಬೆಳ್ತಂಗಡಿ : ಹೊಸವರ್ಷವನ್ನು ಸ್ವಾಗತಿಸುವ ಸುಸಂದರ್ಭ ಬುಧವಾರ ಬೆಳಗ್ಗೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಆಲಯವನ್ನು ಪ್ರತೀವರ್ಷದಂತೆ ಭಕ್ತರು ವಿಶೇಷವಾಗಿ ಹೂವಿನ ಅಲಂಕಾರ ಮಾಡಿದ್ದಾರೆ.
ಬೆಂಗಳೂರಿನ ಟಿವಿಎಸ್ ಕಂಪೆನಿಯ ಉದ್ಯಮಿ ಗೋಪಾಲ್ ರಾವ್ ಹಾಗೂ ಆನಂದ ಮೂರ್ತಿ ಅವರ ತಂಡ ಧರ್ಮಸ್ಥಳದ ದೇವಸ್ಥಾನ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಬೀಡು, ಅನ್ನಛತ್ರ ಸಹಿತ ಮುಂಭಾಗ, ಒಳಾಂಗಣ, ಹೊರಾಂಗಣ, ಗೋಪುರ, ಮುಖಮಂಟಪವನ್ನು ಸಂಪೂರ್ಣ ಹೂ-ಹಣ್ಣುಗಳಿಂದ ಸಿಂಗರಿಸಿದ್ದಾರೆ.
ಡಿ.25ರಿಂದ 80 ಮಂದಿಯ ತಂಡವು ಸತತವಾಗಿ ಅಲಂಕಾರ ಕಾರ್ಯದಲ್ಲಿ ತೊಡಗಿದೆ. ಈ ಬಾರಿ ದೇವಸ್ಥಾನದ ಮುಂಭಾಗ ಆದಿಯೋಗಿಯ ಪ್ರತಿಮೆಯೊಂದಿಗೆ ಸಿಂಗಾರಗೊಳಿಸಲಾಗಿದೆ. 16 ವರ್ಷಗಳಿಂದ ಈ ತಂಡ ಅಲಂಕಾರ ಮಾಡುತ್ತಿದ್ದು, ಪ್ರಸಕ್ತ ವರ್ಷ 20ಲಕ್ಷ ರೂ. ವೆಚ್ಚದಲ್ಲಿ ಅಲಂಕರಿಸಲಾಗಿದೆ. ಸ್ವದೇಶಿ, ವಿದೇಶಿ ಹೂವುಗಳು, ಅಡಿಕೆ, ಭತ್ತದ ತೆನೆ, ಹೊಂಬಾಳೆ, ದಾಳಿಂಬೆ, ತೆಂಗಿನಕಾಯಿ, ಬಾಳೆಹಣ್ಣು, ಮೂಸಂಬಿ, ಕಬ್ಬು ಸಹಿತ 1 ಟನ್ ಹಣ್ಣು ಬಳಸಲಾಗಿದೆ.
ದರ್ಶನ ಪಡೆಯುತ್ತಿರುವ ಭಕ್ತ ಸಾಗರ
ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳಿ ಸೇರಿ ಉತ್ತರ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಿಂದಲೂ ಭಕ್ತರ ದಂಡು ಆಗಮಿಸುತ್ತಿದೆ.
ನಟ ಉಪೇಂದ್ರ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ಪೂಜೆ, ಹುಟ್ಟೂರಲ್ಲಿ ಮೂಲ ನಾಗದರ್ಶನ
ಬ್ರಹ್ಮಾವರ : ಚಿತ್ರನಟ, ನಿರ್ದೇಶಕ ಉಪೇಂದ್ರ ತನ್ನ ಯು-ಐ ಚಿತ್ರದ ಯಶಸ್ಸಿನ ಬಳಿಕ ತನ್ನ ಹುಟ್ಟೂರು ಕುಂದಾಪುರದ ಪ್ರವಾಸ ಕೈಗೊಂಡಿದ್ದಾರೆ. ಕುಂದಾಪುರದಲ್ಲಿ ತನ್ನ ಮೂಲ ನಾಗನ ದರ್ಶನ ಕೈಗೊಂಡು ಬಳಿಕ ಆನೆಗುಡ್ಡೆಯ ಶ್ರೀ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾರೆ.
ಬಳಿಕ ಸಾಲಿಗ್ರಾಮ ದೇವಸ್ಥಾನಕ್ಕೆ ಭೇಟಿ ನೀಡಿ, ತಮ್ಮ ಕುಲದೇವರಾದ ಶ್ರೀ ಗುರು ನರಸಿಂಹ ದೇವರಿಗೆ ಪೂಜೆಯನ್ನು ಸಲ್ಲಿಸಿದರು.
ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ ಕೆ. ಎಸ್ ಕಾರಂತರು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು. ಜೊತೆಗೆ ದೇವಸ್ಥಾನದ ಇತಿಹಾಸವನ್ನು ಉಪೇಂದ್ರಗೆ ತಿಳಿಸಿದರು.
ಖ್ಯಾತ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್ ಕುಟುಂಬ ಸಮೇತ ಶ್ರೀ ಕೃಷ್ಣ ಮಠಕ್ಕೆ ಭೇಟಿ – ಶ್ರೀಗಳಿಂದ ಸನ್ಮಾನ
ಉಡುಪಿ : ಖ್ಯಾತ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು.
ಶ್ರೀ ಕೃಷ್ಣ ದರ್ಶನ ಕೈಗೊಂಡ ಅವರು, ಪರ್ಯಾಯ ಪುತ್ತಿಗೆ ಮಠದವರು ನಡೆಸುವ ಕೋಟಿಗೀತಾ ಲೇಖನ ಯಜ್ಞದ ಬಗ್ಗೆ ವಿಶೇಷ ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು. ತಮ್ಮ ಅಜ್ಜನವರು ತಮಗೆ ಕಲಿಸಿಕೊಟ್ಟ ಭಗವದ್ಗೀತೆಯ ವಿಚಾರಗಳನ್ನು ಶ್ಲೋಕಗಳನ್ನು ಸ್ವಾಮೀಜಿಯ ಮುಂದೆ ಹೇಳಿದರು.
ಪರ್ಯಾಯ ಮಠದ ವತಿಯಿಂದ ಈ ವೇಳೆ ವಿವಿಎಸ್ ಲಕ್ಷ್ಮಣ್ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು. ಉಡುಪಿ ಶ್ರೀ ಕೃಷ್ಣ ಮಠದಿಂದ ಕೊಲ್ಲೂರು ಕ್ಷೇತ್ರ ಹಾಗೂ ಗೋಕರ್ಣ ಕ್ಷೇತ್ರದ ಸಂದರ್ಶನಕ್ಕೆ ತೆರಳಿದರು.
ಮುಸ್ಸಂಜೆಯಲ್ಲಿ ಮುದಗೊಳಿಸಿದ ಸಾಂಸ್ಕೃತಿಕ ಮೆರವಣಿಗೆ, ಸಮಯ, ಸೌಂದರ್ಯ, ಸೃಜನಶೀಲತೆಯ ಸಿಂಚನ ಶ್ರದ್ಧಾ – ಭಕ್ತಿಯ ತೇರಿಗೆ ಸಾಂಸ್ಕೃತಿಕ ಮೆರುಗು
ವಿದ್ಯಾಗಿರಿ(ಮೂಡುಬಿದಿರೆ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿದ 30ನೇ ವರ್ಷದ ಆಳ್ವಾಸ್ ವಿರಾಸತ್ನ ಮೊದಲ ದಿನವಾದ ಮಂಗಳವಾರ ಉದ್ಘಾಟನೆಯ ಬಳಿಕ ಮೂಡಿಬಂದದ್ದು, ಶ್ರದ್ಧೆ-ಭಕ್ತಿಯ ನಾಡು-ನುಡಿಯ ಕಲಾ ವೈಶಿಷ್ಟ್ಯತೆಯ ಸಾಂಸ್ಕೃತಿಕ ವೈಭವ. ಭಾರತದ ಭವ್ಯ ಸಂಸ್ಕೃತಿಯ ಕಲಾರೂಪವೇ ಧರೆಗಿಳಿದು ಬಿದಿರೆಯ ನಾಡಿಗೆ ಬಂದಂತೆ ಭಾಸವಾಯಿತು. ಉತ್ತರ ಭಾರತದಿಂದ ಹಿಡಿದು ದಕ್ಷಿಣದ ತುತ್ತ ತುದಿವರೆಗಿನ ವೈವಿಧ್ಯ ಕಲಾಪ್ರಕಾರಗಳೂ ಮಾತ್ರವಲ್ಲ, ಶ್ರೀಲಂಕಾ ಸೇರಿದಂತೆ ನೆರೆಹೊರೆ ರಾಷ್ಟ್ರಗಳ ಸಂಸ್ಕೃತಿ ಶ್ರೀಮಂತಿಕೆಗೆ ಆಳ್ವಾಸ್ ಆವರಣ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಸಾನಿಧ್ಯವಿದ್ದ ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕೊಂಡೆವೂರು ಯೋಗಾನಂದ ಸ್ವಾಮೀಜಿ, ಕೊಂಡವೂರು, ಮಾಣಿಲ ಮೋಹನದಾಸ ಸ್ವಾಮೀಜಿ ಹಾಗೂ ಕಟೀಲು ದೇವಳದ ಆನುವಂಶಿಕ ಮೊಕ್ತೇಸರ ಲಕ್ಷ್ಮೀ ನಾರಾಯಣ ಅಸ್ರಣ್ಣ ಅವರು ವೇದಿಕೆಯ ಬಲಭಾಗದಲ್ಲಿದ್ದ ರಥದಲ್ಲಿ ದೇವರ ಪ್ರತಿಷ್ಠಾಪನೆ ಮಾಡಿ ಭವ್ಯ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.
ನಿಗದಿಯಂತೆ ಕ್ಲುಪ್ತ ಸಮಯಕ್ಕೆ ಆರಂಭಗೊಂಡ ಈ ಭವ್ಯ ಸಾಂಸ್ಕೃತಿಕ ಮೆರವಣಿಗೆಯು ಜಾತ್ರೆಯ ಮೆರುಗನ್ನು ಮೂಡಿಸಿತು. ಇಕ್ಕೆಲೆಗಳಲ್ಲಿ ರಥದ ಸ್ವರೂಪ, ಯಕ್ಷ ಕಿರೀಟ, ಮುಖವಾಡ, ನವಿಲು, ಗಣಪ, ಬೃಹತ್ ಕಾಲುದೀಪಗಳಿಂದ ಶೋಭಾಯಮಾನವಾದ ಸಭಾಂಗಣದಲ್ಲಿ ಸಂಜೆ 6.35ರಿಂದ ರಾತ್ರಿ 8.30ರ ವರೆಗೆ 150ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳಿಂದ 4000 ಸಾವಿರಕ್ಕೂ ಮಿಕ್ಕಿದ ಕಲಾವಿದರನ್ನು ಒಳಗೊಂಡ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.
ಶಂಖ, ದಾಸಯ್ಯ, ಕೊಂಬು, ರಣ ಕಹಳೆ, ಕಹಳೆ, ಕಾಲ ಭೈರವ, ಕೊರಗಡೋಲು, ಸ್ಯಾಕ್ಸೋಫೋನ್, ಬ್ಲಾಕ್ ಎನಿಮಲ್, ನಂದಿ ಧ್ವಜ, ಸುಗ್ಗಿ ಕುಣಿತ, ಶ್ರೀರಾಮ, ಪರಶುರಾಮ, ಘಟೋತ್ಕಜ, ಊರಿನ ಚೆಂಡೆ, ತಟ್ಟಿರಾಯ, ನಾದಸ್ವರ ತಂಡ, ಕೊಡೆಗಳು, ಪೂರ್ಣಕುಂಭ, ಲಂಗ ದಾವಣಿ ತರುಣಿಯರು, ಅಪ್ಸರೆಯರು, ಯಕ್ಷಗಾನ ವೇಷ, ಗೂಳಿ ಮತ್ತು ಕಟ್ಟಪ್ಪ, ಗೊರವರ ಕುಣಿತ, ಕಿಂದರಿ ಜೋಗಿ, ಸೋಮನ ಕುಣಿತ, ಆಂಜನೇಯ ಮತ್ತು ವಾನರ ಸೇನೆ, ಮಹಾಕಾಳೆಶ್ವರ, ಶಿವ, ಮರಗಾಲು, ತಮಟೆ ವಾದನ, ಆಂಜನೇಯ, ಮಹಿಳಾ ಪಟ ಕುಣಿತ, ಕಂಬಳ ಚಿತ್ರಣ, ಹುಲಿವೇಷ , ತೆಯ್ಯಮ್, ಚಿಟ್ಟೆ ಮೇಳ, ಶಿವ ಮತ್ತು ಅಘೋರಿಗಳು, ಕಿಂಗ್ ಕಾಂಗ್, ಶಿಲ್ಪಾ ಗೊಂಬೆ ಬಳಗ, ಆಳ್ವಾಸ್ ಗೊಂಬೆ ಬಳಗ, ಚೈನೀಸ್ ಡ್ರ್ಯಾಗನ್, ಚೈನಾ ಲಯನ್, ಬ್ಯಾಂಡ್ ಸೆಟ್, ಆಳ್ವಾಸ್ ಕಾರ್ಟೂನ್ಸ್, ಸ್ನೇಹ ಗೊಂಬೆ ಬಳಗ, ಚಿಲಿಪಿಲಿ ಬೊಂಬೆ, ವಂಶಿಕಾ ಗೊಂಬೆ ಬಳಗ, ಬಿದಿರೆ ಮೂಡುಬಿದಿರೆ ಗೊಂಬೆಗಳು, ಶೆಟ್ಟಿ ಬೊಂಬೆಗಳು, ಶಾರದಾ ಆರ್ಟ್ಸ್ ಗೊಂಬೆ, ಶಾರದಾ ಆರ್ಟ್ಸ್ ಚೆಂಡೆ, ಟಾಲ್ ಮ್ಯಾನ್, ಹಿಮ ಕರಡಿ ಗೊಂಬೆ, ಚಿರತೆ ಗೊಂಬೆ, ಏರ್ ಬಲೂನ್ ಬೊಂಬೆ, ಕರಡಿ ಗೊಂಬೆ, ಗಜಹುಲಿ, ಕಾಟಿ, ಗಣಪತಿ, ನರಸಿಂಹ, ಹುಲಿ, ಬೋಳಾರ್ ಮತ್ತು ಟೀಮ್ ನರ್ತನ, ವಾರ್ ಕ್ರಾಫ್ಟ್, ಚಿಟ್ಟೆ, ಸಿಂಗಳೀಕ, ಗಣಪತಿ, ಜೋಡಿ ಸಿಂಹ, ಜೋಡಿ ಜಿಂಕೆ, ಚಿತ್ರದುರ್ಗ ಬ್ಯಾಂಡ್, ಪೂಜಾಕುಣಿತ, ಬೇಡರ ಕುಣಿತ, ಮಹಿಳೆಯರ ಕೋಲಾಟ, ಹಗಲುವೇಷ, ಕೋಳಿಗಳು, ನಾಸಿಕ್ ಬ್ಯಾಂಡ್, ಮೀನುಗಳು, ಕಾರ್ಟೂನ್ಸ್, ಪುರವಂತಿಕೆ, ವೀರಭದ್ರನ ಕುಣಿತ, ಜಗ್ಗಳಿಕೆ ಮೇಳ, ಪಟದ ಕುಣಿತ, ಕೊಂಚಾಡಿ ಚೆಂಡೆ, ಶ್ರೀಲಂಕಾ ಕಲಾವಿದರು, ಶ್ರೀಲಂಕಾದ ಮುಖವಾಡ, ವೀರಗಾಸೆ, ಕರಡಿ ಮಜಲು, ಕಂಸಾಳೆ, ಪುರುಷರ ನಗಾರಿ, ಮಹಿಳೆಯರ ನಗಾರಿ, ದಪ್ಪು, ತಿರುವಾದಿರ, ಡೊಳ್ಳು ಕುಣಿತ, ಪಂಚವಾದ್ಯ, ಎಂಜೆಲ್ಸ್, ಎಲ್ವ್ಸ್, ಸಂತಾಕ್ಲಾಸ್, ನಾಸಿಕ್ ಬ್ಯಾಂಡ್, ಶಿಂಗಾರಿ ಮೇಳ, ಅರ್ಧ ನಾರೀಶ್ವರ, ಪೂಕಾವಡಿ, ಕೇರಳದ ಚಿಟ್ಟೆ, ಕಥಕ್ಕಳಿ ವೇಷ, ಕೇರಳದ ಅರೆನಾ ವೇಷ, ಕೇರಳದ ಕಮಲ ವೇಷ, ತಮಿಳುನಾಡಿನ ನೃತ್ಯ, ಶೃಂಗಾರಿ ಮೇಳ, ಕೇರಳದ ದೇವರ ವೇಷ, ಕೇರಳದ ದೇವರ ವೇಷ, ಕೇರಳದ ಡಿಜಿಟಲ್ ವೇಷ, ತೆಯ್ಯಮ್ ಉಡುಪಿ, ಬ್ಲೂ ಬ್ರಾಸ್ ಬ್ಯಾಂಡ್, ಕೋಳಿ ಉಡುಪಿ, ಮೀನುಗಳು ಉಡುಪಿ, ಕಾಮಿಡಿಯನ್ಸ್, ಗರುಡ , ದಪ್ಪು, ಕ್ಯಾರಲ್, ಡೊಳ್ಳು ಕುಣಿತವು ಸಾಗಿಬಂತು.
ಅದರೊಂದಿಗೆ ಎನ್.ಸಿ.ಸಿ-ನೇವಲ್, ಎನ್.ಸಿ.ಸಿ-ಆರ್ಮಿ, ಎನ್.ಸಿ.ಸಿ-ಏರ್ ಫೋರ್ಸ್, ಆಳ್ವಾಸ್ ಬ್ಯಾಂಡ್ ಸೆಟ್, ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್, ರೇಂಜರ್ಸ್ ಪಥಸಂಚಲನ ಸಾಥ್ ನೀಡಿತು.
ಇಂದ್ರಲೋಕವೇ ಧರೆಗಿಳಿದು ಬಂದಂತೆ, ಪುಟಾಣಿಗಳಿಂದ ಹಿಡಿದು ಹಿರಿಯರೆಲ್ಲ ಸೇರಿದ್ದ ಸಭಾಂಗಣವಿಡೀ ನಂದನವನದಂತೆ ಕಂಡು ಬಂತು.
ಆ ಬಳಿಕ ವೇದಘೋಷಗಳು, ಭಜನೆಗಳು, ಪುಷ್ಪಪಲ್ಲಕ್ಕಿಗಳು, ಮಂಗಳವಾದ್ಯಗಳೊಂದಿಗೆ ಹುಲಿ, ಸಣ್ಣ ರಥದಲ್ಲಿ ವಿಘ್ನನಿವಾರಕ ಗಣಪತಿ ಹಾಗೂ ಪಲ್ಲಕ್ಕಿಯಲ್ಲಿ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ಧ್ಯೋತಕವಾದ ಮಹಾಲಕ್ಷ್ಮಿ ಹಾಗೂ ವಿದ್ಯಾಮಾತೆ ಮಹಾ ಸರಸ್ವತಿ ಮೂರ್ತಿಗಳನ್ನು ಕರೆ ತರಲಾಯಿತು. ರಥದಲ್ಲಿ ಪೀಠಸ್ಥರಾದ ಮರ್ಯಾದಾ ಪುರುಷೋತ್ತಮ ಶ್ರೀರಾಮ ಹಾಗೂ ಜೀವನೋಲ್ಲಾಸದ ಪ್ರತೀಕ ಶ್ರೀ ಕೃಷ್ಣಾದಿ ಆರೂಢ ದೇವರ ಮೆರವಣಿಗೆಯೊಂದಿಗೆ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ರಥ ಸಂಚಲನ ಶ್ರದ್ಧೆ ಭಕ್ತಿಯಿಂದ ನಡೆಯಿತು.
ರಥಯಾತ್ರೆಯ ಮುಂಭಾಗದಲ್ಲಿ ಮೈಸೂರು, ಪಂಡರಾಪುರ ಹಾಗೂ ಮಂಗಳೂರು ಹರೇಕೃಷ್ಣ ಪಂಥದ ಭಜನಾ ತಂಡಗಳ ಭಜನೆ ಹಾಡಿನ ಮೂಲಕ ಭಕ್ತಿ ಪ್ರಭಾವಳಿ ಮೂಡಿಸಿದರು. ಅರ್ಚಕರು ಮಂತ್ರ ಘೋಷ ಮಾಡಿದರು. ಕೊಂಬು, ಕಹಳೆ ನಾದ ಮೊಳಗಿದವು. ಛತ್ರಿ, ಚಾಮರಗಳೊಂದಿಗೆ ದೊಂದಿಗಳು ಬೆಳಗಿದವು. ಮಂಗಳ ವಾದ್ಯ ನಿನಾದ ಮೂಡಿಸಿತು.
ಹರಿದ್ವಾರದಿಂದ ಬಂದ ವಿಪುಲ್ ಶರ್ಮಾ ನೇತೃತ್ವದ ಗಂಗಾರತಿ ತಂಡವು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಿದಾಗ ಶ್ರದ್ಧೆ -ಭಕ್ತಿಯ ಪ್ರಜ್ವಲನವಾಯಿತು. ಭಕ್ತರು ಜಯಕಾರ ಹಾಕಿದರು. ಭಕ್ತರು ಭಾವಪರವಶರಾದರು. ಆಗಸದಲಿ ಮೂಡಿದ ಪಟಾಕಿಯ ಸಿಂಚನ- ಸಿಡಿಮದ್ದು ಜಾತ್ರೆಯನ್ನು ನೆನಪಿಸಿತು.
ಉಡುಪಿ : ಕನ್ನಡ ಚಿತ್ರರಂಗದ ‘ಕನಸಿನ ಕನ್ಯೆ’ ಮಾಲಾಶ್ರೀ ಉಡುಪಿಯ ಶ್ರೀ ಕೃಷ್ಣಮಠಕ್ಕೆ ಆಗಮಿಸಿದ್ದಾರೆ. ದೇವರ ದರ್ಶನ ಮಾಡಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾದರು.
ಮಾಲಾಶ್ರೀ ಜೊತೆ ಪುತ್ರಿ ಆರಾಧನಾ ಕೂಡ ಮಠಕ್ಕೆ ಬಂದಿದ್ದರು. ಈ ಪರ್ಯಾಯದಲ್ಲಿ ಕೋಟಿ ಬಾರಿ ಭಗವದ್ಗೀತೆಯನ್ನು ಬರೆಯುವ ಕೋಟಿಗೀತಾ ಲೇಖನ ಯಜ್ಞದೀಕ್ಷೆಯನ್ನು ಇಬ್ಬರೂ ಸ್ವೀಕರಿಸಿದರು.
ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ನಟ ದುನಿಯಾ ವಿಜಯ್ ಭೇಟಿ; ಮಗಳಿಗಾಗಿ ಚಿತ್ರ ತೆಗೆಯುತ್ತಿದ್ದೇನೆ ಅಂದ ನಟ
ಉಳ್ಳಾಲ : ಕೊರಗಜ್ಜನ ಬಗ್ಗೆ ಕೇಳುತ್ತಾ ಬಂದಿದ್ದೇನೆ. ವಿಶೇಷ ಸ್ಥಳಕ್ಕೆ ಭೇಟಿ ನೀಡುವ ಉದ್ದೇಶದಿಂದ ಮಂಗಳೂರು ಶೂಟಿಂಗ್ ಇರುವ ಸಮಯದಲ್ಲಿ ಬಂದಿರುವೆನು. ಮುಂದಿನ ಪ್ರಾಜೆಕ್ಟ್ ಆಗಿ ಮಗಳಿಗಾಗಿಯೇ ಒಂದು ಚಿತ್ರ ತೆಗೀತಾ ಇದ್ದೇನೆ, ಸಿಟಿ ಲೈಫ್ಸ್ ಅನ್ನುವ ಶೀರ್ಷಿಕೆಯಡಿ ನಡೆಸುವ ಚಿತ್ರವನ್ನು ತಾನೇ ನಿರ್ದೇಶಿಸಲಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು.
ಅವರು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಶುಕ್ರವಾರ ರಾತ್ರಿ ಸಂದರ್ಶನಗೈದು ಮಾತನಾಡಿದರು.
ಕುತ್ತಾರು ಆದಿಸ್ಥಳ ಮತ್ತು ಕಲ್ಲಾಪುವಿನ ಎರಡೂ ಕ್ಷೇತ್ರಗಳಲ್ಲಿ ವೈಬ್ರೇಷನ್ ಪವರ್ ಇದೆ. ತಾನು ನಟಿಸುತ್ತಿರುವ 29ನೇ ಚಿತ್ರ, ಕಾಟೇರಾ ದ ಜಡೇಶ್ ಅವರು ನಿರ್ದೇಶಿಸುತ್ತಿದ್ದು, ಇನ್ನೂ ಚಿತ್ರದ ಹೆಸರನ್ನಿಟ್ಟಿಲ್ಲ. ಮೂರು ದಿನಗಳ ಕಾಲ ಮಂಗಳೂರಿನ ವಾಮಂಜೂರು ಸೇರಿದಂತೆ ವಿವಿದೆಡೆ ಶೂಟಿಂಗ್ ನಡೆಯುತ್ತಿದೆ. ಹಾಗಾಗಿ ಮಂಗಳೂರು ಭೇಟಿ ನೀಡಿದ್ದು, ಕೊರಗಜ್ಜನ ಬಗ್ಗೆ ದಿನಾ ಕೇಳುತ್ತಲೇ ಇದ್ದೇನೆ. ಹಾಗಾಗಿ ಭೇಟಿ ನೀಡಬೇಕೆಂಬ ಮನದಾಸೆಯಿತ್ತು. ಇಲ್ಲಿ ಬಂದು ಆಶೋತ್ತರಗಳನ್ನು ಈಡೇರಿಸುವಂತೆ ಬೇಡಿಕೊಂಡಿದ್ದೇನೆ. ತನ್ನ ಭೀಮ ಚಿತ್ರಕ್ಕೆ ಮಂಗಳೂರು ಸೇರಿದಂತೆ ರಾಜ್ಯದ ಜನತೆ ಪ್ರೀತಿ, ವಿಶ್ವಾಸ ಇಟ್ಟು ಯಶಸ್ವಿಗೊಳಿಸಿದ್ದಾರೆ. ಈ ಮೂಲಕ ಸಿನೆಮಾದ ಗೌರವ ಉಳಿಸಿದ್ದಾರೆ ಎಂದರು.
ಬುರ್ದುಗೋಳಿ ಕ್ಷೇತ್ರದ ಪರವಾಗಿ ದುನಿಯಾ ವಿಜಯ್ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು. ಕದ್ರಿ ಈವೆಂಟ್ಸ್ನ ಸಂಚಾಲಕರಾದ ಜಗದೀಶ್ ಕದ್ರಿ, ದುನಿಯಾ ವಿಜಯ್ ಜತೆಯಲ್ಲಿದ್ದರು.
ಬುರ್ದುಗೋಳಿ ಕ್ಷೇತ್ರದ ಆಡಳಿತ ಸಮಿತಿಯ ಪುರುಷೋತ್ತಮ ಮೇಲಾಂಟ, ನವೀನ್ ಕಾಯಂಗಳ, ಪ್ರಶಾಂತ್ ಕಾಯಂಗಳ, ಪುರುಷೋತ್ತಮ ಕಲ್ಲಾಪು, ಸಂಜಯ್, ಯೋಗಿಶ್, ಜಯಶ್ರೀ ಕೊಟ್ಟಾರಿ, ದೀಕ್ಷಾ ಕುತ್ತಾರು, ವನಿತ ಗಿರೀಶ್, ಗುರು ಪ್ರಸಾದ್ ಕೊಟ್ಟಾರಿ, ಪ್ರವೀಣ್ ಕೊಲ್ಯ, ಸದಾನಂದ , ರೇಣುಕ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ : ದೇಶದ ದಿಗ್ಗಜ ಉದ್ಯಮಿ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ಭಾರತದ ಮುಂಚೂಣಿ ಉದ್ಯಮಿಯಾಗಿದ್ದ ಅವರು ಸರಳತೆಗೆ ಹೆಸರುವಾಸಿಯಾಗಿದ್ದರು. ಸದಾ ಮಾಮೂಲಿ ದಿರಿಸು ತೊಡುವುದರ ಜೊತೆ ತಾನೊಬ್ಬ ಆಟೊಮೊಬೈಲ್ ಉದ್ಯಮಿಯಾಗಿದ್ದರೂ ಮಾಮೂಲಿ ಕಾರುಗಳಲ್ಲೇ ಓಡಾಡುತ್ತಿದ್ದರು. ಇಂತಹ ಉದ್ಯಮಿ ಉಡುಪಿ ಜೊತೆಗೆ ನಂಟು ಹೊಂದಿದ್ದರು.
ಇವತ್ತಿನ ಪರ್ಯಾಯ ಪುತ್ತಿಗೆ ಮಠಾಧೀಶರ ಆಹ್ವಾನದ ಮೇರೆಗೆ ಅವರು ಕೆಲವು ವರ್ಷಗಳ ಹಿಂದೆ ಉಡುಪಿಗೆ ಆಗಮಿಸಿದ್ದರು.
ಉಡುಪಿ ಸಮೀಪದ ಪುತ್ತಿಗೆ ಮಠದ ಮೂಲ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಹಿರಿಯ ಉದ್ಯಮಿ ಅಲ್ಲಿ ಕೆಲವು ಹೊತ್ತು ಕಳೆದಿದ್ದರು. ಇವರ ಆಗಮನದ ನಿರೀಕ್ಷೆಯಲ್ಲಿ ಸಾಕಷ್ಟು ಜನರು ಹಿರಿಯಡ್ಕ ಮೂಲಮಠದಲ್ಲಿ ಸೇರಿದ್ದರು. ಟಾಟಾ ಗತ್ತು ನೋಡಲು ಸೇರಿದ ಜನರಿಗೆ ಅವರ ಆಗಮನ ಕಂಡು ಆಶ್ಚರ್ಯ ಕಾದಿತ್ತು. ಯಾಕೆಂದರೆ ದೇಶದ ಶ್ರೀಮಂತ ಉದ್ಯಮಿಯಾಗಿದ್ದರೂ ಅತ್ಯಂತ ಸರಳ ರೀತಿಯಲ್ಲಿ ಬಂದು ಗ್ರಾಮೀಣ ಪರಿಸರದ ಮಠದಲ್ಲಿ ಸಮಯ ಕಳೆದಿದ್ದರು. ಮಠದಲ್ಲಿ ಮಾಮೂಲಿ ಜನರಂತೆಯೇ ಕಾಲ ಕಳೆದಿದ್ದರು.
ರತನ್ ಟಾಟಾ ಅಗಲಿಕೆ ವಿಷಯ ತಿಳಿದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ದೇಶ ಮೊದಲು ಎಂಬ ತತ್ವ ರತನ್ ಟಾಟಾ ಅವರದ್ದು. ಆದರ್ಶಮಯ ಜೀವನ ನಡೆಸಿದ ಅವರು ಮಠಕ್ಕೆ ಆಗಮಿಸಿ, ದೇವರ ದರ್ಶನ ಪಡೆದಿದ್ದರು.
ಭಗವದ್ಗೀತೆ ಬಗ್ಗೆ ತಮಗಿರುವ ಆದರ ವ್ಯಕ್ತಪಡಿಸಿದ್ದರು. ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರು ಅವರ ಆತ್ಮಕ್ಕೆ ಸದ್ಗತಿ ಕೊಡಲಿ ಎಂದು ಶ್ರೀಗಳು ತಮ್ಮ ಸಂತಾಪ ಸೂಚಿಸಿದ್ದಾರೆ.
ಮಂಗಳೂರು : ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಇಂದು ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ಇದೆ ವೇಳೆ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಪೂಜ್ಯ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದರು.
ಬಳಿಕ ನಾಗಾರಾಧನೆಗೆ ಪ್ರಸಿದ್ಧವಾದ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ ಸ್ವಾಮಿಯ ದರ್ಶನ ಪಡೆದರು.
ಉಡುಪಿ : ಶ್ರೀ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಉಡುಪಿಯಲ್ಲಿ ಈ ಬಾರಿ ತಾವು ನಡೆಸಿದ ತಮ್ಮ 45ನೇ ಚಾತುರ್ಮಾಸ್ಯ ವ್ರತವನ್ನು ಸಂಪನ್ನಗೊಳಿಸಿದರು.
ಪಟ್ಟದ ದೇವರ ಪೂಜೆಯ ಬಳಿಕ ವ್ರತದ ಮೃತ್ತಿಕೆಯನ್ನು ಶ್ರೀ ಕೃಷ್ಣಮಠದ ಮಧ್ವ ಸರೋವರದಲ್ಲಿ ವಿಸರ್ಜನೆಗೊಳಿಸಿದರು. ಮಧ್ಯಾಹ್ನ ಭಿಕ್ಷೆ ಸ್ವೀಕರಿಸಿದ ಬಳಿಕ ಪಟ್ಟದ ದೇವರು ಮತ್ತು ಶಿಷ್ಯರೊಂದಿಗೆ ಉಡುಪಿ ನಗರದ ಸೀಮೆ ಉದ್ಯಾವರದ ಅಘನಾಶಿನಿ ನದೀ ತೀರಕ್ಕೆ ಬಂದರು. ಅಲ್ಲಿ ಅನೇಕ ಭಕ್ತರು ನಾಗರಿಕರು ಶ್ರೀಗಳನ್ನು ಆದರದಿಂದ ಬರಮಾಡಿಕೊಂಡ ಬಳಿಕ ಶ್ರೀಗಳು ನದಿಗೆ ಸೀಯಾಳಾಭಿಷೇಕ, ಅರಸಿನ ಕುಂಕುಮ ತಾಂಬೂಲ ದಕ್ಷಿಣೆ, ಸೀರೆ ರವಿಕೆ ಕಣ ಅಕ್ಕಿ ತೆಂಗಿನಕಾಯಿ ಫಲವಸ್ತುಗಳುಳ್ಳ ಬಾಗಿನ ಅರ್ಪಿಸಿ ಮಂಗಳಾರತಿ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ದೋಣಿಯ ನಾವಿಕನಿಗೆ ವಸ್ತ್ರ ಫಲ ಸಹಿತ ಭಾವನೆ ಕೊಟ್ಟು ನದಿಯನ್ಜು ದಾಟಿಸುವಂತೆ ಸೂಚಿಸಿದರು. ಶ್ರೀಗಳು ಪಟ್ಟದೇವರು ಹಾಗೂ ಕೆಲಶಿಷ್ಯರೊಂದಿಗೆ ದೋಣಿಯಲ್ಲಿ ಕುಳಿತರು. ನಾವಿಕ ಜಯರಾಮ್ ದೋಣಿ ಚಲಾಯಿಸಿ ನದಿ ಆಚೆ ತೀರಕ್ಕೆ ಶ್ರೀಗಳನ್ನು ಬೀಳ್ಕೊಟ್ಟರು.
ಈ ಸಂದರ್ಭ ಶಿಷ್ಯರು ಸ್ತೋತ್ರ ಪಠಣ ಗೈದು ಶ್ರೀ ಕೃಷ್ಣ ಶ್ರೀರಾಮ ಮುಖ್ಯಪ್ರಾಣ ಮಧ್ವಗುರುಗಳು ಹಾಗೂ ಶ್ರೀಗಳಿಗೆ ಜೈಕಾರ ಹಾಕಿದರು. ಶ್ರೀನಿವಾಸ ಬಾದ್ಯ ಮತ್ತು ವಾಸುದೇವ ಭಟ್ ಪೆರಂಪಳ್ಳಿ ಸೀಮೋಲ್ಲಂಘನ ವಿಧಿಯನ್ನು ಸಂಯೋಜಿಸಿದರು.