ಕುಂದಾಪುರ : ಎರಡು ದಿನಗಳ ಹಿಂದೆ ಹುತಾತ್ಮರಾಗಿದ್ದ ಯೋಧ ಅನೂಪ್ ಪೂಜಾರಿ ಅವರ ಬೀಜಾಡಿಯ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಶುಕ್ರವಾರ ರಾತ್ರಿ ಭೇಟಿ ನೀಡಿ ಮೃತರ ತಾಯಿ ಚಂದು ಪೂಜಾರಿ, ಪತ್ನಿ ಮಂಜುಶ್ರೀ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಸ್ಪೀಕರ್ ಜೊತೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಕೂಡ ಇದ್ದರು.
ಈ ಸಂದರ್ಭ ಮಾತನಾಡಿದ ಖಾದರ್, ಬೀಜಾಡಿ ಕಡಲ ತೀರದಲ್ಲಿ ಅನೂಪ್ ಪೂಜಾರಿ ಅವರ ಸ್ಮಾರಕ ನಿರ್ಮಿಸಲು ಸಹಕಾರ ನೀಡಲಾಗುವುದು. ಅನೂಪ್ ಪೂಜಾರಿ ಬಗ್ಗೆ ಮುಖ್ಯಮಂತ್ರಿಗಳ ಜತೆಗೆ ಮಾತನಾಡಿ ಸರಕಾರದಿಂದ ಒದಗಿಸಬಹುದಾದ ಸವಲತ್ತು ಹಾಗೂ ಪರಿಹಾರ ನೀಡುವುದಾಗಿ ಹೇಳಿದರು. ಮೃತರ ಪತ್ನಿ ಪದವೀಧರೆಯಾಗಿದ್ದು, ಅವರಿಗೆ ಸರಕಾರಿ ಕೆಲಸ ಕೊಡಿಸಬೇಕು ಎಂದು ಕುಂದಾಪುರ ಬಿಲ್ಲವ ಸಮಾಜದ ಅಧ್ಯಕ್ಷ ಅಶೋಕ ಪೂಜಾರಿ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಖಾದರ್ ಹೇಳಿದರು.

