ಉಡುಪಿ : ಮಹಾಲಕ್ಷ್ಮಿ ಬ್ಯಾಂಕ್ನ ಮಲ್ಪೆ ಬ್ರಾಂಚ್ನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು ಅದನ್ನು ಎಸ್ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಘುಪತಿ ಭಟ್ ವಂಚನೆಗೊಳಗಾದ ನೂರು ಮಂದಿ ಜೊತೆಗೆ ಸುದ್ದಿಗೋಷ್ಠಿ ನಡೆಸಿದರು. ಬ್ಯಾಂಕ್ನಲ್ಲಿ ಮೂರು ರೀತಿಯ ಅಕ್ರಮ ನಡೆದಿದೆ. ಮೊದಲನೆಯದಾಗಿ ಹಲವು ಮಂದಿಗೆ ಬ್ಯಾಂಕ್ನವರೇ ಅವರ ಮನೆಗೆ ತೆರಳಿ 20, 30 ಸಾವಿರ ಸಾಲ ನೀಡಿದ್ದಾರೆ. ಈಗ ಬ್ಯಾಂಕ್ನಿಂದ ಎರಡು ಲಕ್ಷ ಕಟ್ಟಬೇಕು ಎಂಬ ನೋಟೀಸ್ ನೀಡಲಾಗಿದೆ. ಇನ್ನೂ ಕೆಲವರಿಗೆ ಮೀನುಗಾರಿಕೆಗಾಗಿ ಸಾಲದ ಹೆಸರಿನಲ್ಲಿ ಸಹಿ ಪಡೆಯಲಾಗಿದ್ದು ಅವರಿಗೆ ಯಾವುದೇ ಹಣ ನೀಡಿಲ್ಲ. ಇದೇ ರೀತಿ ಹಲವಾರು ರೀತಿಯಲ್ಲಿ ಬ್ಯಾಂಕ್ನವರು ಕೋಟ್ಯಂತರ ರೂ. ಅಕ್ರಮ ಎಸಗಿದ್ದಾರೆ. ಸಂತ್ರಸ್ತರು ಈಗ ತಮ್ಮನ್ನು ಸಂಪರ್ಕಿಸಿದ್ದು ನ್ಯಾಯಕ್ಕಾಗಿ ಒತ್ತಾಯ ಮಾಡಿದ್ದಾರೆ. ಅವರ ದನಿಯಾಗಿ ನಾನು ಅವರ ಜೊತೆ ನಿಂತಿದ್ದೇನೆ. ಸರಕಾರ ಮಹಾಲಕ್ಷ್ಮಿ ಬ್ಯಾಂಕ್ ವಿರುದ್ಧ ಎಸ್ಐಟಿ ತನಿಖೆ ನಡೆಸುವ ಮೂಲಕ ನೊಂದವರಿಗೆ ನ್ಯಾಯ ಒದಗಿಸಿಕೊಡಬೇಕು ಮತ್ತು ಬ್ಯಾಂಕ್ನವರು ಆಣೆ ಪ್ರಮಾಣಕ್ಕೆ ಆಹ್ವಾನ ನೀಡಿದ್ದು ತಾವದಕ್ಕೆ ಸಿದ್ಧ ಎಂದು ರಘುಪತಿ ಭಟ್ ಅವರು ಹೇಳಿದ್ದಾರೆ.
ರಘುಪತಿ ಭಟ್ ಜೊತೆಗೆ ಬ್ಯಾಂಕ್ನಿಂದ ನೊಂದ ಸುಮಾರು ನೂರು ಮಂದಿ ಜನರು ಉಪಸ್ಥಿತರಿದ್ದು ತಮ್ಮ ಸಮಸ್ಯೆಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡರು.







