ಉಡುಪಿ : ಜಾತಿ ಜನಗಣತಿ ವಿಚಾರವಾಗಿ ಬಿಜೆಪಿ ಕಾದು ನೋಡುವ ತೀರ್ಮಾನ ಮಾಡಿದೆ. ವರದಿಯ ಅಂಗೀಕಾರ, ಸ್ವೀಕಾರ ಮತ್ತು ಬಿಡುಗಡೆ ವಿಚಾರದಲ್ಲಿ ಸರ್ಕಾರ ಹಳಿ ತಪ್ಪಿದೆ. ಸರ್ಕಾರ ಸಚಿವ ಸಂಪುಟದಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಒಂದೇ ಜಾತಿ ಎಂದು ಪರಿಗಣಿಸಲಾಗಿದೆ. ಆದರೆ ಲಿಂಗಾಯಿತರು ಮತ್ತು ಒಕ್ಕಲಿಗರನ್ನು ವಿಂಗಡಿಸಿ ಸಮಾಜವನ್ನು ಒಡೆಯಲಾಗಿದೆ. ವಿಶ್ವಕರ್ಮರು, ಈಡಿಗರು, ಬಲಿಜಿಗರು ನಾವು 30-35 ಲಕ್ಷ ಇದ್ದೇವೆ ಎನ್ನುತ್ತಾರೆ. ಆದರೆ ಸರ್ಕಾರ 11-12 ಲಕ್ಷ ಎನ್ನುತ್ತಿದೆ, ನಮ್ಮ ಸಮಾಜದಲ್ಲೂ ಗೊಂದಲ ಉಂಟಾಗಿದೆ ಎನ್ನುತ್ತಾರೆ.
ಬಹುದೊಡ್ಡ ಸಂಖ್ಯೆಯಲ್ಲಿರುವ ಪ. ಜಾತಿ, ಪ. ಪಂಗಡ ಮುಖಂಡರು ಜಾತಿ ಆಧಾರದಲ್ಲಿ ನಮ್ಮನ್ನು ವಿಭಜನೆ ಮಾಡಿದ್ದಾರೆ ಎನ್ನುತ್ತಾರೆ.
ಅಲ್ಪಸಂಖ್ಯಾತರನ್ನು ಹೆಚ್ಚು ಎಂದು ತೋರಿಸುವ ತಂತ್ರ ನಡೆಯುತ್ತಿದೆ. ಒಟ್ಟಾರೆ ಸರಕಾರ ತನಗೆ ಬಂದಿರುವ ಗಂಡಾಂತರದಿಂದ ತಪ್ಪಿಸಿಕೊಳ್ಳಲು ಜನಗಣತಿಯನ್ನು ಮುನ್ನಲೆಗೆ ತಂದಿದೆ. ಸಿದ್ದರಾಮಯ್ಯನವರೇ ಇದಕ್ಕಾಗಿ ಹಣ ಬಿಡುಗಡೆ ಮಾಡಿದ್ದು, ಅವರೇ ಕಾಂತರಾಜ್ರನ್ನು ನೇಮಕ ಮಾಡಿರುವುದು. ಈಗ ಸರ್ಕಾರದ ಮೇಲೆ ಸಮಸ್ಯೆ ಬರುತ್ತಿದೆ ಎಂದಾಗ ಜಾತಿಗಣತಿ ವಿಚಾರವನ್ನು ಮುಂದೆ ತಂದಿದ್ದಾರೆ. ಸರಕಾರ ಜಾತಿಗಣತಿಯನ್ನು ಗುರಾಣಿಯಾಗಿ ಇಟ್ಟುಕೊಂಡಿದೆ ಎಂದು ಕೋಟ ಆರೋಪ ಮಾಡಿದ್ದಾರೆ.