ಉಡುಪಿ : ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡಲಾಗುವ ಟಿ.ವಿಮಲಾ ವಿ.ಪೈ ಪ್ರಾಯೋಜಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಪ್ರಸಿದ್ಧ ವಿದ್ವಾಂಸ ನಾಡೋಜ ಹಂ.ಪ.ನಾಗರಾಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಆಯ್ಕೆ ಸಮಿತಿಯು 2024ನೇ ಸಾಲಿನ ಪ್ರಶಸ್ತಿಗೆ ಪ್ರೊ.ಹಂ.ಪ ನಾಗರಾಜಯ್ಯ ಅವರನ್ನು ಸೂಚಿಸಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆ ಸಮಿತಿಯು ಡಾ. ತಾಳ್ತಜೆ ವಸಂತ ಕುಮಾರ್, ಡಾ.ಕೆ. ಚಿನ್ನಪ್ಪ ಗೌಡ, ಡಾ. ಪ್ರಭಾಕರ ಜೋಶಿ, ಡಾ.ಕಿಶೋರಿ ನಾಯಕ್, ಡಾ. ಎಸ್. ಪಾಡೀಗಾರ್ ಅವರನ್ನು ಒಳಗೊಂಡಿತ್ತು. ಒಂದು ಲಕ್ಷ ರೂ.ಬಹುಮಾನ ಮೊತ್ತದ ಈ ಪ್ರಶಸ್ತಿಯನ್ನು ಉದ್ಯಮಿ ಟಿ.ಮೋಹನ್ದಾಸ್ ಪೈ ಅವರು ತಮ್ಮ ತಾಯಿಯ ಹೆಸರಿನಲ್ಲಿ ಸ್ಥಾಪಿಸಿದ್ದಾರೆ.
ಮಾರ್ಚ್ 23ರಂದು ಉಡುಪಿಯಲ್ಲಿ ನಡೆಯಲಿರುವ ಗೋವಿಂದ ಪೈ ಸಂಶೋಧನ ಸಂಪುಟದ ದ್ವಿತೀಯ ಭಾಗದ ಲೋಕಾರ್ಪಣೆ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಡಾ.ಜಗದೀಶ ಶೆಟ್ಟಿ ತಿಳಿಸಿದ್ದಾರೆ.