ದಕ್ಷಿಣ ಕನ್ನಡ : ಮಾದಕ ದ್ರವ್ಯ ಹಾವಳಿ ತಡೆಗೆ ಸರಕಾರ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಪ್ರಯತ್ನಗಳಿಗೆ ಪೂರಕವಾಗಿ ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯ, ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್, ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿ, ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಮತ್ತು ಕ್ಯಾಥೋಲಿಕ್ ಶಿಕ್ಷಣ ಮಂಡಳಿ ಸಹಯೋಗದಲ್ಲಿ ಅ. 18ರಂದು ಮಧ್ಯಾಹ್ನ 2 ರಿಂದ 4:30 ರವರೆಗೆ ವಾಕಥಾನ್ ಕಾರ್ಯಕ್ರಮ ಆಯೋಜಿಸುತ್ತಿದೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಬುಧವಾರ ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಫಾ. ಪ್ರವೀಣ್ ಲಿಯೋ ಲಸ್ರಾದೋ ಮಾಹಿತಿ ನೀಡಿ, ಸಂತ ಅಲೋಶಿಯಸ್ ಮೈದಾನದಲ್ಲಿ ಆರಂಭವಾಗುವ “ಸೇ ನೋ ಟು ಡ್ರಗ್ಸ್” ಎಂಬ ಘೋಷಣೆಯೊಂದಿಗೆ ಪಾದಯಾತ್ರೆಯು ನೆಹರೂ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಈ ಕಾರ್ಯಕ್ರಮಕ್ಕೆ ಮಂಗಳೂರು ನಗರದ ಎಲ್ಲಾ ಪ್ರಮುಖ ಶಿಕ್ಷಣ ಸಂಸ್ಥೆಗಳು ಬೆಂಬಲ ನೀಡಿದ್ದು, ಮಾದಕ ದ್ರವ್ಯ ವಿರೋಧಿ ಸಂದೇಶವನ್ನು ಹರಡುವಲ್ಲಿ ಒಗ್ಗಟ್ಟನ್ನು ಸಂಕೇತಿಸುತ್ತದೆ. ಸಂತ ಅಲೋಶಿಯಸ್ ಡೀಮ್ಸ್ ವಿಶ್ವವಿದ್ಯಾನಿಲಯದ ರೆಕ್ಟರ್ ರೆ.ಫಾ. ಮೆಲ್ವಿನ್ ಪಿಂಟೊ ಅವರು ಮಧ್ಯಾಹ್ನ 2 ಗಂಟೆಗೆ ಸಂತ ಅಲೋಶಿಯಸ್ ಮೈದಾನದಲ್ಲಿ ವಿವಿಧ ಪ್ರಮುಖ ಸಂಸ್ಥೆಗಳ ನಿರ್ದೇಶಕರು ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ವಾಕಥಾನ್ಗೆ ಚಾಲನೆ ನೀಡಲಿದ್ದಾರೆ.
ನೆಹರೂ ಮೈದಾನದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಪಿ. ಮುಲೈ ಮುಗಿಲನ್ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಸಂದೇಶ ನೀಡಲಿದ್ದಾರೆ. ಅವರು ವಾಕಥಾನ್ನಲ್ಲಿ ಭಾಗವಹಿಸುವವರಿಗೆ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆಯನ್ನು ಸಹ ಭೋಧಿಸಲಿದ್ದಾರೆ ಎಂದು ಅವರು ಹೇಳಿದರು.
ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯವು ಕಳೆದ ವರ್ಷದಿಂದ ಸೆಪ್ಟೆಂಬರ್ ಪೂರ್ತಿ ಮಾದಕ ದ್ರವ್ಯ ವಿರೋಧಿ ಮಾಸವನ್ನಾಗಿ ಆಚರಿಸುತ್ತಿದೆ. ಮಾದಕ ವ್ಯಸನದ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಮಾದಕ ವ್ಯಸನಿಯಾಗದಿರಲು ಯುವಕರನ್ನು ಉತ್ತೇಜಿಸುವ ಉದ್ದೇಶದಿಂದ ಇದು ಎರಡನೇ ವರ್ಷದ ಅಭಿಯಾನವಾಗಿದೆ ಎಂದರು.
ಧರ್ಮಪ್ರಾಂತ್ಯದ ಎಲ್ಲಾ ಪ್ಯಾರಿಷಳು, ಅಂಗಸಂಸ್ಥೆ ಶಾಲೆಗಳೊಂದಿಗೆ, ಪ್ರದೇಶದಾದ್ಯಂತ ವಿವಿಧ ಜಾಗೃತಿ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಬೀದಿ ನಾಟಕಗಳು, ಸ್ಪರ್ಧೆಗಳು ಮತ್ತು ರ್ಯಾಲಿಗಳನ್ನು ಸಕ್ರಿಯವಾಗಿ ನಡೆಸುತ್ತಿವೆ. ಈ ಉಪಕ್ರಮದ ಭಾಗವಾಗಿ, ಕಳೆದ ತಿಂಗಳು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳಲ್ಲಿ ಶಿಕ್ಷಕರೊಂದಿಗೆ 50ಕ್ಕೂ ಹೆಚ್ಚು ಸಲಹೆಗಾರರಿಗೆ ವಿಶೇಷ ತರಬೇತಿಯನ್ನು ನೀಡಲಾಯಿತು. ಈ ತರಬೇತಿ ಪಡೆದ ಸಲಹೆಗಾರರು ಶಾಲೆಗಳು ಮತ್ತು ಪ್ಯಾರಿಷ್ಗಳಿಗೆ ಭೇಟಿ ನೀಡಿ ಕಾರ್ಯಾಗಾರಗಳು ಮತ್ತು ಜಾಗೃತಿ ಶಿಬಿರಗಳನ್ನು ನಡೆಸಲಿದ್ದಾರೆ.
ವಿದ್ಯಾರ್ಥಿಗಳು ಮತ್ತು ಸಮುದಾಯಗಳನ್ನು ಮಾದಕದ್ರವ್ಯದ ವ್ಯಸನವನ್ನು ನಿವಾರಿಸಲು ಜ್ಞಾನದೊಂದಿಗೆ ಸಶಕ್ತಗೊಳಿಸಲಿದ್ದಾರೆ ಎಂದವರು ವಿವರಿಸಿದರು. ಗೋಷ್ಠಿಯಲ್ಲಿ ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಡ್ರಗ್ಸ್ ವಿರೋಧಿ ಅಭಿಯಾನದ ಸಂಯೋಜಕ ಲೂವಿ ಜೆ. ಪಿಂಟೋ, ಅಲೋಶಿಯಸ್ ಡೀಮ್ಸ್ ಯೂನಿವರ್ಸಿಟಿ ಡ್ರಗ್ಸ್ ತಡೆ ಸೊಸೈಟಿ ನೋಡೆಲ್ ಅಧಿಕಾರಿ ಡಾ. ರೋಶನ್ ಮೊಂತೆರೋ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಫಾ. ಅಜಿತ್ ಮಿನೇಜಸ್, ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಮಾಧ್ಯಮ ಸಂಯೋಜಕ ಇಲಿಯಾಸ್ ಫರ್ನಾಂಡಿಸ್ ಉಪಸ್ಥಿತರಿದ್ದರು.