ಉಡುಪಿ : ಶೀಘ್ರ ಕೋಪಿ ಆಗಿರಬೇಕು, ದೀರ್ಘ ದ್ವೇಷಿ ಆಗಿರ ಬಾರದು. ಈ ಸಾಮರಸ್ಯ ಜೀವನದಲ್ಲಿ ಇದ್ದಾಗ ಬಾಂಧವ್ಯ ಸದಾ ಹಸುರಾಗಿರುತ್ತದೆ ಎಂದು ಯಕ್ಷಗುರು ಸಂಜೀವ ಸುವರ್ಣ ಹೇಳಿದರು.
ಬುಡ್ನಾರ್ ಯಕ್ಷ ಸಂಜೀವ, ಯಕ್ಷಗಾನ ಕೇಂದ್ರದಲ್ಲಿ ನಡೆದ ಸಂಜೀವ-70 ಗುರು ಶಿಷ್ಯರ ಸಂವಾದದಲ್ಲಿ ಸಂಜೀವ ಸುವರ್ಣರು ತಮ್ಮ ಯಕ್ಷಗಾನ ಜೀವನದ ಹಲವು ವಿಷಯಗಳನ್ನು ಹಂಚಿಕೊಂಡರು.
ನನ್ನ ಹುಟ್ಟು ಹಾಗೂ ಬದುಕು ವಿಚಿತ್ರವೇ ಆಗಿದೆ. ಬೇರೆಯವರಿಂದ ಪಡೆದದ್ದೇ ಹೆಚ್ಚು, ಸಮಾಜಕ್ಕೆ ನೀಡಿದ್ದು ಕಡಿಮೆ. ಸಮಾಜದಲ್ಲಿ ಕಂಡು ಕಲಿಯಬೇಕು ಹಾಗೂ ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವುದು ನನ್ನ ಅನಿಸಿಕೆ. ಯಕ್ಷಗಾನ ಕೇಂದ್ರ ಹಾಗೂ ಗುರು ಶಿವರಾಮ ಕಾರಂತರಿಂದ ದೇಶದ ಕಲೆಗಳ ಪರಿಚಯವಾಯಿತು ಮತ್ತು ಹಲವು ಒಲವು ಸಿಕ್ಕವು. ಆರೆಸ್ಸೆಸ್ ಬಾಲ್ಯದಿಂದ ಕಲಿಸಿದ ಸಂಸ್ಕಾರ, ನೀತಿಪಾಠ ಹಲವು ರೀತಿಯಲ್ಲಿ ಅನುಕೂಲವಾಗಿದೆ ಎಂದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಯಕ್ಷಗಾನ ಕರಾವಳಿಯ ಗಂಡುಕಲೆ. ಇದೀಗ ದೇಶವ್ಯಾಪಿ ಹಬ್ಬಿದೆ. ಸನಾತನ ಸಂಸ್ಕೃತಿ, ಆಚಾರ, ವಿಚಾರ ಯಕ್ಷಗಾನದ ಮೂಲಕ ತಿಳಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಸಂಜೀವ ಸುವರ್ಣರ ಸಾಧನೆ ಸ್ತುತ್ಯರ್ಹ ಎಂದರು.