ಉಡುಪಿ : ಜಿಲ್ಲೆಯಲ್ಲಿ ಮಳೆಗಾಲ ಮುಗಿಯುತ್ತಿದ್ದಂತೆ ಮನೆ, ಕಟ್ಟಡ ನಿರ್ಮಾಣಕ್ಕೆ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಮರಳು ಲಭ್ಯವಾಗಬೇಕು. ಅಷ್ಟರೊಳಗೆ ಕೇಂದ್ರ ಕಚೇರಿ ಅನುಮತಿ, ಟೆಂಡರ್ ಪ್ರಕ್ರಿಯೆ ಇತ್ಯಾದಿ ಪೂರ್ಣಗೊಳಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಜಿಲ್ಲೆಯ ಮರಳು ಸಮಸ್ಯೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮರಳು ನಿರ್ವಹಣೆ ಸಮಿತಿ ಅಥವಾ ಏನೇ ವ್ಯವಸ್ಥೆಯಿದ್ದರೂ ಶಾಸಕರಿಗೆ ಯಾವುದೇ ಮಾಹಿತಿ ನೀಡದೇ ಕಾರ್ಯನಿರ್ವಹಿಸುವುದು ಸರಿಯಲ್ಲ. ಇಲಾಖೆಯಿಂದ ಶಾಸಕರಿಗೆ ಈ ಬಗ್ಗೆ ಕನಿಷ್ಠ ಮಾಹಿತಿಯನ್ನಾದರೂ ನೀಡಬೇಕು. ಹಾಗೆಯೇ ಸ್ಥಳೀಯವಾಗಿ ಸಮಸ್ಯೆಗಳಿದ್ದರೆ ಜನ ಪ್ರತಿನಿಧಿಗಳ ಗಮನಕ್ಕೆ ತಂದು ಬಗೆಹರಿಸಬೇಕು ಎಂದರು.
ಜಿಲ್ಲೆಯ ನಾನ್ ಸಿಆರ್ಝಡ್ ವ್ಯಾಪ್ತಿಯ 28 ಕಡೆ ಮರಳು ತೆಗೆಯಲಾಗುತ್ತಿದೆ. ತಾಂತ್ರಿಕ ಸಮಸ್ಯೆಯಿಂದ 9 ಕಡೆ ಮರಳು ತೆಗೆಯುತ್ತಿಲ್ಲ. ಗುತ್ತಿಗೆ ಮಂಜೂರಾದ 14 ಬ್ಲಾಕ್ಗಳಲ್ಲಿ 11 ಕಡೆ ಕೆಲಸ ನಡೆಯುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ಮರಳು ತೆಗೆಯಲು 101 ಕಡೆಗುರುತಿಸಿದ್ದು, ಅದರಲ್ಲಿ 11 ಕಡೆ ಟೆಂಡರ್ ಪೂರ್ಣಗೊಂಡಿದೆ. 14 ಕಡೆ ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಸಂದೀಪ್ ತಿಳಿಸಿದರು.
ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಲಿ, ಗುರುರಾಜ್ ಗಂಟಿಹೊಳೆಯವರು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಎಸ್ಪಿ ಡಾ| ಅರುಣ್ ಕೆ. ಉಪಸ್ಥಿತರಿದ್ದರು.