ಉಡುಪಿ : ಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ಅವರಲ್ಲಿ ವಾಕ್ಚಾತುರ್ಯ, ಅಭಿನಯ, ನೃತ್ಯ, ಪೌರಾಣಿಕ ಪ್ರಸಂಗಗಳ ಬಗ್ಗೆ ಜ್ಞಾನವುಂಟಾಗುವುದಲ್ಲದೆ ಅವರ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಭಾನುವಾರ ಯಕ್ಷಗಾನ ಕೇಂದ್ರ ಹಂಗಾರಕಟ್ಟೆ – ಐರೋಡಿಯಲ್ಲಿ ಹಮ್ಮಿಕೊಂಡ 20 ದಿನಗಳ ಮಕ್ಕಳಿಗೆ ಯಕ್ಷಗಾನ ನೃತ್ಯ, ಅಭಿನಯ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನ ಕೇಂದ್ರದ ವತಿಯಿಂದ ನಿರಂತರ ಯಕ್ಷಗಾನಕ್ಕೆ ಸಂಬoಧಿಸಿದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುವುದು ಅಭಿನಂದನೀಯ. ಕಳೆದ 13 ವರ್ಷಗಳಿಂದ ‘ನಲಿ-ಕುಣಿ’ ಯಕ್ಷಗಾನ ತರಬೇತಿ ಶಿಬಿರವನ್ನು ಆಯೋಜಿಸುತ್ತಿದ್ದಾರೆ.
ಯಕ್ಷಗಾನ ಕಲಿಕೆ ಕೇವಲ ಕಲಾವಿದನಾಗಲು ಅಲ್ಲ, ಒಬ್ಬ ಉತ್ತಮಪ್ರೇಕ್ಷಕನಾಗಲು ಸಾಧ್ಯವಾಗುತ್ತದೆ. ದೈಹಿಕವಾಗಿ ಆರೋಗ್ಯದ ಜೊತೆಗೆ ಮನಸ್ಸಿಗೂ ಶಾಂತಿ, ನೆಮ್ಮದಿ ಲಭಿಸುತ್ತದೆ. ಹೀಗಾಗಿ ಮಕ್ಕಳಿಗೆ ಯಕ್ಷಗಾನ ಶಿಕ್ಷಣವನ್ನು ನೀಡಲು ಪೋಷಕರು ಹಿಂದೇಟು ಹಾಕಬಾರದು. ಯಕ್ಷಗಾನವನ್ನು ಅಭ್ಯಾಸ ಮಾಡಿದ ಮಕ್ಕಳು ಶೈಕ್ಷಣಿಕವಾಗಿಯೂ ಉತ್ತಮ ಸಾಧನೆ ಮಾಡಿರುವುದನ್ನು ನಾವು ಗಮನಿಸಿದ್ದೇವೆ ಎಂದು ಅವರು ತಿಳಿಸಿದರು.
ಯಕ್ಷಗಾನದಲ್ಲಿ ಅಭಿನಯವಿದೆ. ಮಾತಿದೆ. ಕುಣಿತವಿದೆ. ಹಿಮ್ಮೇಳದಲ್ಲಿ ಭಾಗವತಿಕೆ, ಚೆಂಡೆ, ಮದ್ದಳೆಯ ಸಂಗೀತವಿದೆ. ವೇಷಭೂಷಣದ ಸೊಗಸಿದೆ. ಮಕ್ಕಳ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬೆಳವಣಿಗೆಗೆ ಬೇಕಾದ ಎಲ್ಲಾ ಅಂಶಗಳು ಈ ಕಲೆಯಲ್ಲಿವೆ. ಜೀವನದಲ್ಲಿ ಶಿಸ್ತು ಬದ್ಧ ಜೀವನ ನಡೆಸಲು ಸಹಕಾರಿಯಾಗುತ್ತದೆ. ಶುದ್ಧ ಕನ್ನಡ ಮಾತನಾಡುವ ಏಕೈಕ ಕಲೆ ಅಂದರೆ ಅದು ಯಕ್ಷಗಾನ ಮಾತ್ರ. ಈ ನಿಟ್ಟಿನಲ್ಲಿ ಯಕ್ಷಗಾನದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಯಕ್ಷಗಾನ ಕೇಂದ್ರದ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಯಕ್ಷಗಾನ ಕೇಂದ್ರದ ಅಧ್ಯಕ್ಷರು ಹಾಗೂ ಉದ್ಯಮಿ ಆನಂದ ಸಿ.ಕುಂದರ್ ಮಾತನಾಡಿ, ಇಂದು ಯಕ್ಷಗಾನ ಕಲಾವಿದರಿಗೆ ಉತ್ತಮ ಸಂಭಾವನೆ ದೊರಕುತ್ತಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಕಲಿತರೆ ಜೀವನೋಪಾಯಕ್ಕೂ ದಾರಿಯಾಗುತ್ತದೆ. ಆದ್ದರಿಂದ ಯಕ್ಷಗಾನದ ಬಗ್ಗೆ ಕೀಳರಿಮೆ ಬೇಡ. ಈ ರಂಗದಲ್ಲಿ ಉನ್ನತಿಗೇರುವ ವಿಫುಲ ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.
ಯಕ್ಷಗಾನ ಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಯಕ್ಷಗಾನ ಕೇಂದ್ರ ಕಳೆದ 12 ವರ್ಷಗಳಿಂದ ಮಕ್ಕಳಿಗೆ ಯಕ್ಷಗಾನ, ನೃತ್ಯ, ಅಭಿನಯ ತರಬೇತಿ ‘ನಲಿ -ಕುಣಿ ‘ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದೆ. ಶಿಬಿರದ ಕೊನೆಯ ದಿನ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.
ಯಕ್ಷಗಾನ ಗುರು, ಶಿಬಿರದ ನಿರ್ದೇಶಕರಾದ ಕೆ.ಸದಾನಂದ ಐತಾಳ್ ಮಾತನಾಡಿ, ಯಕ್ಷಗಾನದಲ್ಲಿ ಮಕ್ಕಳ ಭಾವನೆಗಳನ್ನು ನಕರತಾತ್ಮಕವಾಗಿ ಕೆರಳಿಸುವ ಅಂಶಗಳೇ ಇಲ್ಲ. ಇಲ್ಲಿ ಮಕ್ಕಳ ಭಾವನೆಗಳನ್ನು ಅರಳಿಸುವ, ಅವರ ವಿಕಸನಕ್ಕೆ ಕಾರಣವಾಗುವ ಅಂಶಗಳೇ ಹೆಚ್ಚಿವೆ. ಹೀಗಾಗಿ ಪ್ರತೀ ಕುಟುಂಬದಲ್ಲಿ ಒಬ್ಬರಾದರೂ ಯಕ್ಷಗಾನವನ್ನು ಕಲಿಯಲೇ ಬೇಕು ಎಂದರು.
ಕಾರ್ಯಕ್ರಮದಲ್ಲಿ ಕೋಟೇಶ್ವರದ ಗೀತಾ ಎಚ್ಎಸ್ಎನ್ ಫೌಂಡೇಶನ್ನ ಅಧ್ಯಕ್ಷ ಶಂಕರ ಐತಾಳ್ ಅಮಾಸೆಬೈಲು ಉಪಸ್ಥಿತರಿದ್ದರು. ಈ ಯಕ್ಷಗಾನ ತರಬೇತಿ ಶಿಬಿರ ಏ.13ರಿಂದ ಮೇ 3ರವರೆಗೆ ನಡೆಯಲಿದೆ.