ಉಡುಪಿ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕಾರ್ಕಳ, ಹೆಬ್ರಿ ತಾಲೂಕುಗಳ ಅಂಗನವಾಡಿ ಪ್ರಾಥಮಿಕ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜು.31ರಂದು ರಜೆ ಘೋಷಿಸಿ ಆಯಾ ತಾಲೂಕಿನ ತಹಶೀಲ್ದಾರ್ಗಳು ಆದೇಶ ನೀಡಿದ್ದಾರೆ.
Safety Measures
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ಜು 31 ರಂದು ರಜೆಯನ್ನು ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ನಾಳೆ ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ತುರ್ತು ಕ್ರಮಗಳನ್ನು ಕೈಗೊಂಡಿದೆ.
ಉಡುಪಿ ನಗರಸಭೆ ವ್ಯಾಪ್ತಿಯ ಚಕ್ರತೀರ್ಥ ಮಾರ್ಗದ ಕಿರು ಸೇತುವೆ ಹಾನಿ : ಶಾಸಕ ಯಶ್ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ
ಉಡುಪಿ ನಗರಸಭೆ ವ್ಯಾಪ್ತಿಯ ಮೂಡುಸಗ್ರಿ ವಾರ್ಡಿನಲ್ಲಿ ಮಳೆಯಿಂದಾಗಿ ಹಾನಿಗೀಡಾದ ಚಕ್ರತೀರ್ಥ ಮಾರ್ಗದ ಕಿರುಸೇತುವೆ ವಾಹನ ಸಂಚಾರಕ್ಕೆ ಅಪಾಯ ಸ್ಥಿತಿಯಲ್ಲಿರುವ ಹಿನ್ನಲೆಯಲ್ಲಿ ಉಡುಪಿ ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದು, ಈಗಾಗಲೇ ಸುಮಾರು ರೂ. 13 ಲಕ್ಷ ಅನುದಾನವನ್ನು ಕಿರು ಸೇತುವೆಯ ಮರು ನಿರ್ಮಾಣಕ್ಕೆ ಮಂಜೂರು ಮಾಡಿದ್ದು ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭಿಸಲು ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಶ್ರೀಮತಿ ಭಾರತಿ ಪ್ರಶಾಂತ್, ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಅಮೀನ್, ನಗರ ಸಭಾ ಸದಸ್ಯರಾದ ಗಿರೀಶ್ ಅಂಚನ್, ಸ್ಥಳೀಯ ಮುಖಂಡರಾದ ಶ್ರೀ ಈಶ್ವರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು : ನಗರದ ನಂತೂರು ಪದವು – ಜಂಕ್ಷನ್ ನಡುವಿನ ಎನ್ಎಚ್66ನಲ್ಲಿ ಟ್ಯಾಂಕರ್ ಹರಿದು ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮಂಗಳೂರು ನಗರದ ಅಡ್ಯಾರು ಕಣ್ಣಗುಡ್ಡೆ ನಿವಾಸಿ ಶಿವಾನಂದ ಶೆಟ್ಟಿ(42) ಮೃತಪಟ್ಟವರು.
ಶಿವಾನಂದ ಶೆಟ್ಟಿ ಅಡ್ಯಾರ್ ಕಣ್ಣೂರಿನಲ್ಲಿ ವಾಚ್ಗಳ ಬಿಡಿ ಭಾಗಗಳ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದರು. ಇವರು ಕಾರ್ಯ ನಿಮಿತ್ತ ನಂತೂರು ವೃತ್ತದ ಮೂಲಕ ಕದ್ರಿ ಪದವು ಕಡೆಗೆ ಸ್ಕೂಟರಿನಲ್ಲಿ ಆಗಮಿಸುತ್ತಿದ್ದರು. ಈ ವೇಳೆ ಹಿಂಭಾಗದಿಂದ ಬರುತ್ತಿದ್ದ ಟ್ಯಾಂಕರ್ ಲಾರಿ ಇವರ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಸವಾರ ಶಿವಾನಂದ ಶೆಟ್ಟಿ ರಸ್ತೆಗೆಸೆಯಲ್ಪಟ್ಟಿದ್ದಾರೆ. ಆದರೆ ಟ್ಯಾಂಕರ್ ನಿಲ್ಲದೆ ಚಕ್ರ ಅವರ ತಲೆಯ ಮೇಲೆಯೇ ಹರಿದ ಪರಿಣಾಮ ಶಿವಾನಂದ ಶೆಟ್ಟಿಯವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಟ್ಯಾಂಕರ್ ಹಾಗೂ ಚಾಲಕನನ್ನು ವಶಪಡಿಸಿಕೊಂಡಿದ್ದಾರೆ. ಸ್ಕೂಟರ್ ಸ್ಕಿಡ್ ಆಗಿ ಬೀಳಲು ರಸ್ತೆ ಗುಂಡಿ ಕಾರಣವೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ಸ್ಥಳದಲ್ಲಿ ಅಂಥಹ ಗುಂಡಿ ಇರಲಿಲ್ಲ ಎಂದು ಸ್ಥಳದಲ್ಲಿದ್ದ ಪೊಲೀಸರು ತಿಳಿಸಿದ್ದಾರೆ.
ಕಾರ್ಕಳ : ಕುಕ್ಕುಂದೂರು ಗ್ರಾಮ ಪಂಚಾಯತ್ ವಾಪ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆಯ ಬಳಿ ಹೊಸದಾಗಿ ನಿರ್ಮಿಸಿರುವ ಮನೆಯೊಂದರಲ್ಲಿ ಜು. 27 ರ ಮುಂಜಾನೆ 3-35ಕ್ಕೆ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು, ರೂ. 2 ಲಕ್ಷ ನಷ್ಟ ಸಂಭವಿಸಿದೆ.
ಕಾರ್ಕಳ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ತಕ್ಷಣ ದೌಡಾಯಿಸಿ ಬೆಂಕಿಯನ್ನು ಸಂಪೂರ್ಣ ನಂದಿಸಲು ಯಶಸ್ವಿಯಾಗಿದ್ದು, ಹೆಚ್ಚಿನ ಪ್ರಮಾಣದ ಅನಾಹುತ ತಪ್ಪಿಸಿದೆ.
ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಅಚ್ಚುತ ಕರ್ಕೇರ, ಜಯ ಮೂಲ್ಯ, ನಿತ್ಯಾನಂದ, ರವಿಚಂದ್ರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಕುಂದಾಪುರ : ಭಾರೀ ಗಾಳಿ-ಮಳೆಯಿಂದಾಗಿ ಮನೆಯೊಂದರ ಮೇಲೆ ಮರ ಬಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ತಾಲೂಕಿನ ಬಳ್ಕೂರಿನಲ್ಲಿ ನಡೆದಿದೆ.
ಬುಧವಾರ ರಾತ್ರಿ ಭಾರೀ ಗಾಳಿ-ಮಳೆ ಬಂದ ಪರಿಣಾಮ ಹೆಮ್ಮಾಡಿ ಗ್ರಾ.ಪಂ ವ್ಯಾಪ್ತಿಯ ಗುಂಡಿಕೊಡ್ಲು ಸೀತಾ ದೇವಾಡಿಗ ಅವರ ಮನೆಯ ಮೇಲೆ ಬೃಹತ್ ಗಾತ್ರದ ಮಾವಿನ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ.
ಮರ ಬಿದ್ದ ರಭಸಕ್ಕೆ ಮನೆಯ ಮಹಡಿ ಸಂಪೂರ್ಣ ಕುಸಿದ ಪರಿಣಾಮ ಮನೆಯೊಳಗೆ ಮಲಗಿದ್ದ ಸೀತಾ ದೇವಾಡಿಗ ಅವರ ಪತಿ ಶಂಕರ ದೇವಾಡಿಗ ಅವರ ತಲೆ ಹಾಗೂ ಮೈಮೇಲೆ ಹೆಂಚು ಬಿದ್ದು ಗಾಯಗೊಂಡಿದ್ದಾರೆ. ಗಾಯಾಳು ಶಂಕರ ದೇವಾಡಿಗ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಉಡುಪಿ : ಕರಾವಳಿಯಲ್ಲಿ ಈ ಬಾರಿಯ ಕಡಲ ಕೊರೆತ ಹಾಗೂ ಮಳೆ ಹಾನಿಯ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂದಿನ ಎರಡು-ಮೂರು ದಿನಗಳಲ್ಲಿ ಪ್ರತ್ಯೇಕ ಸಭೆಯನ್ನು ನಡೆಸಲಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಸಭೆಯಲ್ಲಿ ಸಮಗ್ರ ಮಾಹಿತಿ ನೀಡಲು ಹಾಗೂ ಅನುದಾನ ಪಡೆಯಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಈ ಬಾರಿ ಪ್ರಾಕೃತಿಕ ವಿಕೋಪದಿಂದ ಆಗಿರುವ ನಷ್ಟಗಳ ವಿವರವನ್ನು ಛಾಯಾಚಿತ್ರದೊಂದಿಗೆ ಇಲಾಖಾವಾರು ಅತೀ ಶೀಘ್ರದಲ್ಲಿ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿಯೂ ಸಹ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚಿನ ಮಾನವ ಜೀವಹಾನಿ ಹಾಗೂ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮುಂಗಾರು ಮಳೆ ಆಗಸ್ಟ್ ತಿಂಗಳ ಕೊನೆಯವರೆಗೂ ಬರಲಿದೆ. ನೆರೆ-ಪ್ರವಾಹವು ಯಾವಾಗ ಬೇಕಾದರೂ ಉಂಟಾಗುವ ಸಾಧ್ಯತೆಗಳಿರುತ್ತವೆ. ಇವುಗಳ ನಿರ್ವಹಣೆಗೆ ಅಧಿಕಾರಿಗಳು ಸನ್ನದ್ಧರಾಗಿರಬೇಕು. ನಗರ ಹಾಗೂ ಗ್ರಾಮೀಣ ಭಾಗದ ತಗ್ಗುಪ್ರದೇಶಗಳಲ್ಲಿ ಮಳೆಯ ನೀರು ನುಗ್ಗಿ ನೆರೆ ಉಂಟಾಗುವ ಸಾಧ್ಯತೆಗಳಿರುವ ವ್ಯಾಪ್ತಿಯಲ್ಲಿ ಜನರು ಹಾಗೂ ಕುಟುಂಬಗಳನ್ನು ತಕ್ಷಣದಲ್ಲಿಯೇ ಬೇರೆಡೆಗೆ ವರ್ಗಾಯಿಸುವುದು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಯೋಜನೆಗಳನ್ನು ರೂಪಿಸಿ, ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ನೆರವಿಗೆ ಧಾವಿಸಬೇಕು ಎಂದರು.
ಮಂಗಳೂರು : ತಡರಾತ್ರಿ ಸುರಿದ ಗಾಳಿ ಮಳೆಗೆ ತಡೆಗೋಡೆ ಮನೆಯ ಮೇಲೆಯೇ ಕುಸಿದು ಬಾಲಕನೋರ್ವ ಮೃತಪಟ್ಟ ಘಟನೆ ಮಂಗಳೂರು ನಗರದ ಹೊರವಲಯದ ಜೋಕಟ್ಟೆ ಬಳಿ ನಡೆದಿದೆ.
ಮುಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್(17) ಮೃತಪಟ್ಟ ಬಾಲಕ.
ಶೈಲೇಶ್ ಜೋಕಟ್ಟೆಯಲ್ಲಿರುವ ಸಂಬಂಧಿಕರ ಮನೆಗೆ ಅಥಿತಿಯಾಗಿ ಬಂದಿದ್ದ. ರಾತ್ರಿ ಮನೆಮಂದಿ ಊಟ ಮಾಡಿ ಮಲಗಿದ್ದರು. ಆದರೆ ರಾತ್ರಿ ವೇಳೆ ಸುರಿದ ಭಾರೀ ಗಾಳಿ – ಮಳೆಗೆ ಪಕ್ಕದವರ ತಡೆಗೋಡೆ ಇವರ ಮನೆ ಮೇಲೆಯೇ ಕುಸಿದು ಬಿದ್ದಿದೆ. ಪರಿಣಾಮ ಮನೆ ಸಂಪೂರ್ಣ ಕುಸಿದಿದೆ. ಈ ವೇಳೆ ಮಣ್ಣಿನಡಿಯಲ್ಲಿ ಸಿಲುಕಿದ್ದ ಶೈಲೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಕ್ಷಣ ಅಗ್ನಿ ಶಾಮಕದಳ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿ ಬಾಲಕನ ಮೃತದೇಹವನ್ನು ಹೊರ ತೆಗೆದಿದ್ದಾರೆ.
ಉಡುಪಿ : ಲೋಕೊ ಪೈಲಟ್ಛ್ಗಳ ಸಕಾಲಿಕ ತುರ್ತು ಕ್ರಮದಿಂದ ಇಂದು ಬೆಳಗ್ಗೆ ಮುಂಬಯಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು ದೊಡ್ಡ ದುರಂತದಿಂದ ಪಾರಾದ ಘಟನೆ ಬಾರಕೂರು – ಉಡುಪಿ ನಿಲ್ದಾಣಗಳ ನಡುವೆ ಸಂಭವಿಸಿದೆ.
ಕೊಂಕಣ ರೈಲು ಮಾರ್ಗದಲ್ಲಿ ಬಾರಕೂರು ಹಾಗೂ ಉಡುಪಿ ನಿಲ್ದಾಣಗಳ ನಡುವೆ ಬೆಳಗ್ಗೆ 9:18ಕ್ಕೆ ಮಣಿಪಾಲದ ಪೆರಂಪಳ್ಳಿ ಬಳಿ ದೊಡ್ಡ ಮರವೊಂದು ಭಾರೀ ಮಳೆಯಿಂದ ಹಳಿಗೆ ಅಡ್ಡವಾಗಿ ಬಿದ್ದಿರುವುದನ್ನು ರೈಲಿನ ಲೋಕೋಪೈಲಟ್ಗಳು ತೀರಾ ಸಮೀಪದಲ್ಲಿ ಗಮನಿಸಿದ್ದರು.
ತಕ್ಷಣವೇ ಅವರು ಎಮರ್ಜೆನ್ಸಿ ಬ್ರೇಕ್ ಅನ್ನು ಬಳಸಿ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಹಳಿಯಲ್ಲಿ ಬಿದ್ದ ಮರ ಪೈಲಟ್ಗಳ ಗಮನಕ್ಕೆ ಬರುವುದು ಸ್ವಲ್ಪ ತಡವಾಗಿದ್ದರೂ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ಒಎಚ್ಇ ತಂಡದವರು ಮರವನ್ನು ಹಳಿಯಿಂದ ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಕಾಲಿಕ ಕ್ರಮದಿಂದ ದೊಡ್ಡ ಅನಾಹುತ ತಪ್ಪಿಸಿದ ಜಾಗೃತ ಮಂಡ್ಯ ಮತ್ತು ಭಟ್ಕಳದ ಲೋಕೊ ಪೈಲಟ್ ಮತ್ತು ಸಹಾಯಕ ಪೈಲಟ್ಗೆ ಕೊಂಕಣ ರೈಲ್ವೆಯ ಸಿಎಂಡಿ ಸಂತೋಷ್ ಕುಮಾರ್ ಝಾ ಅವರು ತಲಾ 15,000ರೂ ಬಹುಮಾನವನ್ನು ಘೋಷಿಸಿದ್ದು, ಸುರತ್ಕಲ್ ನಿಲ್ದಾಣದಲ್ಲಿ ಬಹುಮಾನದ ಚೆಕ್ ಅನ್ನು ಹಸ್ತಾಂತರಿಸಲಾಯಿತು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ತನಿಕೋಡ್ ಗೇಟ್ ಟು ಎಸ್.ಕೆ. ಬಾರ್ಡರ್ – ಭಾರೀ ವಾಹನಗಳ ಸಂಚಾರ ನಿಷೇಧಿಸಿ ಡಿ.ಸಿ ಆದೇಶ
ಉಡುಪಿ : ರಾ.ಹೆ. 169ರ ಮಾಳದಿಂದ ತನಿಕೋಡ್ ಗೇಟ್ ಮೂಲಕ ಎಸ್.ಕೆ. ಬಾರ್ಡರ್ವರೆಗೆ ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ಆದೇಶಿಸಿದ್ದಾರೆ.
ಈ ಮಾರ್ಗದ ಕೊರ್ಕನಹಳ್ಳ, ಗುಲ್ಗುಂಜಿ ಮನೆ ಸಮೀಪದ ಸೇತುವೆ ಶಿಥಿಲಾವಸ್ಥೆಯಲ್ಲಿರುವುದರಿಂದ ಘನ ವಾಹನ ಸಂಚಾರ ನಿಷೇಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶವನ್ನು ಅನುಷ್ಠಾನಗೊಳಿಸಿ ಈ ರಸ್ತೆಯಲ್ಲಿ ಉಡುಪಿ ಜಿಲ್ಲೆಯಿಂದ ಬರುವ ವಾಹನಗಳು ಸಹ ಸಂಚಾರ ಮಾಡುವುದರಿಂದ ತನಿಕೋಡ್ ಗೇಟ್ನಿಂದ ಎಸ್.ಕೆ. ಬಾರ್ಡರ್ವರೆಗೆ ಅಧಿಕ ಭಾರದ ಸರಕು ಸಾಗಣಿಕೆ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಲಾಗಿದೆ.
ಚಿಕ್ಕಮಗಳೂರಿನಿಂದ ಬರುವ ಭಾರೀ ವಾಹನಗಳು ಬಾಳೆ ಹೊನ್ನೂರು-ಮಾಗುಂಡಿ-ಕಳಸ- ಕುದುರೆಮುಖ-ಎಸ್.ಕೆ. ಬಾರ್ಡರ್ ಮಾರ್ಗವಾಗಿ ಹಾಗೂ ನರಸಿಂಹರಾಜಪುರ ಕಡೆಯಿಂದ ಬರುವ ಭಾರಿ ವಾಹನಗಳು ಕೊಪ್ಪ-ಜಯಪುರ- ಬಾಳೆಹೊಳೆ-ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ಮಾರ್ಗವಾಗಿ ಸಂಚರಿಸುವಂತೆ ಡಿಸಿ ಕಚೇರಿ ಪ್ರಕಟನೆ ತಿಳಿಸಿದೆ.