ಪಡುಬಿದ್ರಿ : ಯುವತಿ ಮತ್ತು ಯುವಕ ಪಡುಬಿದ್ರೆ ಬ್ಲೂ ಫ್ಲಾಗ್ ಬೀಚಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಪೊಲೀಸರಿಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಅದರಂತೆ ಬೀಟ್ ಕರ್ತವ್ಯದಲ್ಲಿದ್ದ ಎಎಸ್ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿರುವ ಯುವಕ ಮತ್ತು ಯುವತಿಯನ್ನು ಕರೆದು ಬುದ್ಧಿಮಾತು ಹೇಳಿದ್ದಾರೆ. ಇದು ಬ್ಲೂ ಫ್ಲಾಗ್ ಬೀಚ್, ವಸತಿ ಪ್ರದೇಶ. ಇಲ್ಲಿ ಅಸಭ್ಯವಾಗಿ ವರ್ತಿಸಬಾರದು ಎಂದು ಹೇಳಿದ ಬಳಿಕ ಅವರು ಅಲ್ಲಿಂದ ತೆರಳಿದ್ದಾರೆ. ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿರುವುದಿಲ್ಲ. ಈ ಬಗ್ಗೆ ಯುವತಿಯನ್ನು ಸಂಪರ್ಕಿಸಿ ಅವರಿಗೆ ಯಾವುದೇ ದೂರುಗಳಿದ್ದಲ್ಲಿ ಮುಕ್ತವಾಗಿ ನೀಡಬಹುದಾಗಿ ತಿಳಿಸಲಾಗಿದೆ. ಈ ಬಗ್ಗೆ ದೂರು ಬಂದಲ್ಲಿ ಕಾನೂನಿನಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
Safety Measures
ಯುವತಿಯ ಅತ್ಯಾಚಾರ ಪ್ರಕರಣ : ಅಲ್ತಾಫ್, ಝೇವಿಯರ್ ಬಂಧನ; ಮತ್ತೋರ್ವನಿಗಾಗಿ ಪೊಲೀಸರಿಂದ ಶೋಧ
ಕಾರ್ಕಳ : ಕಾರ್ಕಳದಲ್ಲಿ ಶುಕ್ರವಾರ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿದ್ದು ಈ ಸಂಬಂಧ ಆರೋಪಿ ಅಲ್ತಾಫ್ ಎಂಬಾತನ ಬಂಧನವಾಗಿದೆ. ಆತನಿಗೆ ಸಹಕರಿಸಿದ ಝೇವಿಯರ್ ಕ್ವಾಡ್ರಸ್ ಎಂಬಾತನನ್ನೂ ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಆರೋಪಿ ಬಿಯರ್ನಲ್ಲಿ ಅಮಲು ಪದಾರ್ಥ ಮಿಶ್ರಣ ಮಾಡಿ ಕೊಟ್ಟು ಯುವತಿಯ ಅತ್ಯಾಚಾರ ಮಾಡಿದ್ದಾಗಿ ಕಾರ್ಕಳ ಠಾಣೆಯಲ್ಲಿ ದೂರು ದಾಖಲಾಗಿದೆ.
ಇವತ್ತು ಕಾರ್ಕಳ ಬಿಜೆಪಿ ಡಿವೈಎಸ್ಪಿಗೆ ಅವರಿಗೆ ಮನವಿ ಸಲ್ಲಿಸಿತು. ಮಹಿಳೆಯರಿಗೆ, ಯುವತಿಯರಿಗೆ ಇಲಾಖೆ ರಕ್ಷಣೆ ಕೊಡಬೇಕು.
ಸಮಾಜಘಾತುಕ ಶಕ್ತಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು. ಕಾರ್ಕಳದಲ್ಲಿ ಭಯಮುಕ್ತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಬಿಜೆಪಿ ಮುಖಂಡರು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಡಿವೈಎಸ್ಪಿ
ಘಟನೆ ನಡೆದ ತಕ್ಷಣ ಕ್ರಮ ಕೈಗೊಂಡಿದ್ದೇವೆ. ಈ ಬಗ್ಗೆ ತನಿಖೆ ನಡೆಸಿ ವಿಳಂಬ ಮಾಡದೆ ಆರೋಪಿಗಳ ವಿರುದ್ದ ಕ್ರಮ ಜರುಗಿಸುತ್ತೇವೆ ಎಂದು ಡಿವೈಎಸ್ಪಿ ಬಿಜೆಪಿ ಮುಖಂಡರಿಗೆ ಭರವಸೆ ನೀಡಿದರು.
ಕಾರ್ಕಳ : ಬಸ್ಸಿನಿಂದ ಎಸೆಯಲ್ಪಟ್ಟು ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಸಂಭವಿಸಿದೆ. ಮಾಳ ಗ್ರಾಮದ ಹುಕ್ರಟ್ಟೆ ನಿವಾಸಿ ಜನಿತ್ ಶೆಟ್ಟಿ (19) ಮೃತ ವಿದ್ಯಾರ್ಥಿ.
ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಜನಿತ್, ಇಂದು ಬೆಳಿಗ್ಗೆ ಕಾರ್ಕಳದಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಬಸ್ ಚಲಿಸುತ್ತಿದ್ದಾಗಲೇ ಕೆಳಕ್ಕೆ ಎಸೆಯಲ್ಪಟ್ಟಿದ್ದಾನೆ. ಮುಂದಿನ ಬಾಗಿಲಿನಿಂದ ರಸ್ತೆಗೆ ಬಿದ್ದ ಆತನ ಮೈಮೇಲೆ ಬಸ್ಸಿನ ಹಿಂಬದಿಯ ಚಕ್ರ ಹರಿದಿದ್ದು ಗಂಭೀರ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿಂದ ಉಡುಪಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಜನಿತ್ ಶೆಟ್ಟಿ ಕೊನೆಯುಸಿರೆಳೆದಿದ್ದಾನೆ. ಮೃತ ಯುವಕ ತಾಯಿ ಮತ್ತು ತಂಗಿಯನ್ನು ಅಗಲಿದ್ದಾರೆ.
ಮಳೆಯಿಂದ ಇದುವರೆಗೆ ಅಂದಾಜು 183 ಕೋಟಿ ರೂ. ನಷ್ಟ : ಅಪರ ಜಿಲ್ಲಾಧಿಕಾರಿ ಮಮತಾದೇವಿ
ಉಡುಪಿ : ಪ್ರಸಕ್ತ ಸಾಲಿನ ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ.41ರಷ್ಟು ಸುರಿದ ಅಧಿಕ ಮುಂಗಾರು ಮಳೆಯಿಂದಾಗಿ ಜಿಲ್ಲೆಯ ರಸ್ತೆ, ಮೇಲ್ಸೇತುವೆ, ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್ ಹಾಗೂ ಲೈನ್ಗಳು, ಶಾಲೆಗಳು, ಅಂಗನವಾಡಿ ಕಟ್ಟಡಗಳು ಸೇರಿದಂತೆ ಉಂಟಾಗಿರುವ ವಿವಿಧ ಹಾನಿಗಳಿಂದಾಗಿ ಜಿಲ್ಲೆಯಲ್ಲಿ ಇದುವರೆಗೆ ಸುಮಾರು 183 ಕೋಟಿ ರೂ. ಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ತಿಳಿಸಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮಳೆಯಿಂದಾಗಿ ಈಗಾಗಲೇ ಹಾನಿಗೊಂಡಿರುವ ಮೂಲ ಸೌಕರ್ಯಗಳು, ವಿವಿಧ ಸೊತ್ತುಗಳ ಪುನರ್ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು ಶೀಘ್ರದಲ್ಲೇ ಅವುಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟುಕೊಡಬೇಕು ಎಂದರು.
ಮಳೆಗಾಲದಲ್ಲಿ ಸಂಭವಿಸುವ ಭೂಕುಸಿತಗಳಿಂದಾಗುವ ಅಪಾಯಗಳನ್ನು ತಪ್ಪಿಸಿ, ಜನ ಹಾಗೂ ಜಾನುವಾರುಗಳ ಜೀವಕ್ಕೆ ಅಪಾಯವಾಗದಂತೆ ಸಾಕಷ್ಟು ಮುಂಚಿತವಾಗಿಯೇ ಮುನ್ನಚ್ಚರಿಕೆ ವಹಿಸುವ ಉದ್ದೇಶದಿಂದ ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ಸಂಭಾವ್ಯ ಭೂಕುಸಿತ ಪ್ರದೇಶಗಳನ್ನು ನಿಖರವಾಗಿ ಗುರುತಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಪ್ರತಿನಿತ್ಯ ಅಂತಹ ಪ್ರದೇಶಗಳ ಸ್ಥಳಗಳನ್ನು ಪರಿಶೀಲಿಸಬೇಕು. ಭೂಕುಸಿತ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ತಡೆಗೋಡೆ ಕಾಮಗಾರಿ ಕೈಗೊಳ್ಳಬೇಕು ಎಂದರು.
ಲೈಂಗಿಕ ದೌರ್ಜನ್ಯ ಯತ್ನಕ್ಕೆ ವಿರೋಧ ವ್ಯಕ್ತಪಡಿಸಿದ ಬಾಲಕಿಯ ಕೊಲೆ – ಕಾಮುಕ ಅರೆಸ್ಟ್
ಮಂಗಳೂರು : ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದಾಗ ವಿರೋಧ ವ್ಯಕ್ತಪಡಿಸಿದ ಬಾಲಕಿಯನ್ನು ಕತ್ತುಹಿಸುಕಿ ಹತ್ಯೆ ಮಾಡಿರುವ ಮಧ್ಯವಯಸ್ಸಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಬೆಳಗಾವಿ ಜಿಲ್ಲೆ ಮೂಲದ ಪ್ರಸ್ತುತ ಮಂಗಳೂರಿನ ತೋಕೂರು ಗ್ರಾಮದ ಜೋಕಟ್ಟೆ ಬಾಡಿಗೆ ನಿವಾಸಿ ಫಕೀರಪ್ಪ ಹಣಮಪ್ಪ ಮಾದರ(51) ಬಂಧಿತ ಆರೋಪಿ.
ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ ಹನುಮಂತ ಎಂಬವರು ವಾಸ್ತವ್ಯವಿದ್ದರು. ಕೈನೋವಿನ ಚಿಕಿತ್ಸೆಗೆಂದು ಬೆಳಗಾವಿಯಿಂದ ಬಂದಿದ್ದ ಅವರ ಸಹೋದರನ ಪುತ್ರಿ 13ವರ್ಷದ ಬಾಲಕಿ ಕಳೆದ 4ದಿನಗಳಿಂದ ಅವರ ಮನೆಯಲ್ಲಿ ವಾಸ್ತವ್ಯವಿದ್ದಳು. ಆಗಸ್ಟ್ 6ರಂದು ಎಂದಿನಂತೆ ಮನೆಯಲ್ಲಿದ್ದ ಎಲ್ಲರೂ ಕೆಲಸಕ್ಕೆ ಹೋಗಿದ್ದರು. ಬೆಳಗ್ಗೆ 10.30ರ ವೇಳೆಗೆ ಬಾಲಕಿಯ ತಾಯಿ ಪಕ್ಕದ ಮನೆಯವರಿಗೆ ಕರೆ ಮಾಡಿ ಬಾಲಕಿಗೆ ಪೋನ್ ಕೊಡಲು ಹೇಳಿದ್ದಾರೆ. ಅದರಂತೆ ಅವರು ಫೋನ್ ಕೊಡಲು ಬಂದಾಗ ಬಾಡಿಗೆ ಮನೆಯಲ್ಲಿ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಯಾರೋ ಕೊಲೆ ಮಾಡಿದ ರೀತಿ ಕಂಡುಬಂದಿದೆ. ವಿಚಾರ ತಿಳಿದು ಹನುಮಂತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಫಕೀರಪ್ಪನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿ ಫಕೀರಪ್ಪ ಕಳೆದ ಆರು ತಿಂಗಳಿನಿಂದ ಜೋಕಟ್ಟೆ ಪರಿಸರದಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ. ಈತ ಮೃತ ಬಾಲಕಿಯ ಚಿಕ್ಕಪ್ಪನಿಗೆ ಪರಿಚಿತನಾಗಿದ್ದ. ಆದ್ದರಿಂದ ಜೋಕಟ್ಟೆಯ ಬಾಡಿಗೆ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಅದೇ ರೀತಿ ಆಗಸ್ಟ್ 6ರಂದು ಬೆಳಗ್ಗೆ ಮನೆಯಲ್ಲಿ ಬಾಲಕಿ ಒಬ್ಬಳೆ ಇದ್ದಾಗ ಬಂದಿದ್ದಾನೆ. ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಕ್ಕೆ ಬಾಲಕಿಯನ್ನು ಕೊಲೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.
ಉಡುಪಿ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದ ಅಮಾನವೀಯ ಘಟನೆ ಆತಂಕ ಹುಟ್ಟಿಸಿದೆ. ಕುಡಿದ ಮತ್ತಿನಲ್ಲಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ನಂತರ ಕೈಯಲ್ಲಿ ಕತ್ತಿ ಹಿಡಿದು ನರ್ತಿಸಿದ ಪತಿಯ ಕ್ರೂರ ಕೃತ್ಯವನ್ನು ಸ್ಥಳೀಯರು ಮತ್ತು ಪೋಲೀಸರು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೊರಬ ಮೂಲದ ಲಕ್ಷ್ಮಣ (ರಮೇಶ್) ಮತ್ತು ಅನಿತಾ, ಕಾಶಿಮಠದ ತೋಟ ನೋಡಿಕೊಳ್ಳಲು ಉಡುಪಿ ಜಿಲ್ಲೆಗೆ ನಾಲ್ಕು ತಿಂಗಳ ಹಿಂದೆಯಷ್ಟೆ ಬಂದಿದ್ದರು. ನಿನ್ನೆ ರಾತ್ರಿ, ಕುಡಿದ ಮತ್ತಿನಲ್ಲಿ ಪತಿ ಲಕ್ಷ್ಮಣ (ರಮೇಶ್) ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕತ್ತಿ ಹಿಡಿದು ಮನೆಯ ಬಾಗಿಲ ಚಿಲಕ ಹಾಕಿ ಹಾಲ್ನಲ್ಲಿ ನರ್ತಿಸುತ್ತಿದ್ದನು.
ಘಟನೆಯ ಅರಿವೇ ಬಂದ ಕೂಡಲೇ ಸ್ಥಳೀಯರು ಕಿಟಕಿ ಒಡೆದು ಅಡುಗೆ ಕೋಣೆಗೆ ಪ್ರವೇಶಿಸಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನಿತಾ ಅವರನ್ನು ಹೊರತೆಗೆದು, ಚಿಂತಾಜನಕ ಸ್ಥಿತಿಯಲ್ಲಿದ್ದಾಕೆಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಇಷ್ಟಾದರೂ ಮೈಮೇಲೆ ದೈವ ಬಂದವರಂತೆ ಕೈಯಲ್ಲಿ ಕತ್ತಿ ಹಿಡಿದು ನರ್ತಿಸುತ್ತಿದ್ದ ಪತಿ. ಸ್ಥಳಕ್ಕೆ ಬಂದ ಪೊಲೀಸ್ರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಪರಿಸ್ಥಿತಿ ಹತೋಟಿ ತರಲು ಹರಸಾಹಸಪಟ್ಟರು. ಮನೆಯೊಳಗೆ ಪ್ರವೇಶಿಸಲು ಸಾಧ್ಯವಾಗದ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು, ಅಶ್ರುವಾಯು ಪ್ರಯೋಗಿಸಿ, ಒಂದೂವರೆ ಗಂಟೆ ಬಳಿಕ ಆರೋಪಿ ಲಕ್ಷ್ಮಣ (ರಮೇಶ್) ಅವರನ್ನು ಸೆರೆ ಹಿಡಿದರು.
ಈ ಕುರಿತು, ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀಚ್ಗಳ ಸಮಗ್ರ ಅಭಿವೃದ್ಧಿಯ ವಿಸ್ತೃತ ಯೋಜನೆಯಲ್ಲಿ ಪ್ರವಾಸಿಗರ ರಕ್ಷಣೆಗೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ
ಉಡುಪಿ, ಆ.1: ಜಿಲ್ಲೆಯ ಬೀಚ್ಗಳ ಸಮಗ್ರ ಅಭಿವೃದ್ಧಿಗಾಗಿ ವಿಸ್ತೃತ ಯೋಜನೆಯ ತಯಾರಿಯಲ್ಲಿ ಪ್ರವಾಸಿಗರ ಜೀವಹಾನಿ ಸಂಭವವನ್ನು ತಡೆಗಟ್ಟಲು ಒತ್ತು ನೀಡುವುದರೊಂದಿಗೆ, ಯೋಜನೆಯನ್ನು ರೂಪಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.
ಅವರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕಡಲತೀರಗಳಿಗೆ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಬೀಚ್ಗಳ ಸ್ಥಳೀಯ ಭೌಗೋಳಿಕ ಪ್ರದೇಶದ ಮಾಹಿತಿ ಕೊರತೆಯಿಂದ ಜೀವಹಾನಿಗಳು ಉಂಟಾಗುತ್ತವೆ. ಈ ಬಗ್ಗೆ ಪ್ರವಾಸಿಗರಿಗೆ ಸರ್ವಋತುಗಳಲ್ಲಿ ಸ್ಥಳೀಯ ಭೌಗೋಳಿಕ ಮಾಹಿತಿ ನೀಡುವುದು, ಅವರ ಭದ್ರತೆ, ಸುರಕ್ಷತೆ ಸೇರಿದಂತೆ ಮೂಲಸೌಲಭ್ಯಗಳ ವ್ಯವಸ್ಥೆಗಳನ್ನು ಕಲ್ಪಿಸುವುದನ್ನು ಒಳಗೊಂಡಂತೆ ಯೋಜನೆಯನ್ನು ರೂಪಿಸಬೇಕು ಎಂದರು.
ಜಿಲ್ಲೆಯ ಪ್ರಾಕೃತಿಕ, ಧಾರ್ಮಿಕ ಪ್ರವಾಸೋದ್ಯಮಗಳ ಬಗ್ಗೆ ದೇಶ ವಿದೇಶಗಳಲ್ಲಿ ಪ್ರಚಾರ ಪಡಿಸುವ ಮಾಹಿತಿಯನ್ನು ಒಳಗೊಂಡ ನೂತನ ವೆಬ್ಸೈಟ್ ಅನ್ನು ಸೃಜನಪಡಿಸಬೇಕು. ಇದರಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಛಾಯಾಚಿತ್ರಗಳು, ಅಲ್ಲಿ ಪ್ರವಾಸಿಗರಿಗೆ ಸಿಗುವ ಸೌಲಭ್ಯಗಳು, ಕರಾವಳಿಯ ಪರಂಪರೆ, ಮಾರ್ಗಸೂಚಿಗಳು ಹಾಗೂ ನೆರೆಹೊರೆ ಜಿಲ್ಲೆಯ ಪ್ರವಾಸಿತಾಣಗಳ ಮಾಹಿತಿಯನ್ನು ಒಳಗೊಂಡಂತೆ ರಚಿಸಿದ್ದಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಇದನ್ನು ಆಗಿಂದಾಗ್ಗೆ ಉನ್ನತೀಕರಣಗೊಳಿಸುವುದರ ಜೊತೆಗೆ ನಿರ್ವಹಣೆಯನ್ನು ಮಾಡಬೇಕೆಂದು ತಿಳಿಸಿದರು.
ಬ್ರಹ್ಮಾವರ ತಾಲೂಕಿನ ಕೋಡಿಕನ್ಯಾನ ಬೀಚ್ ಬಳಿ ವಿಶೇಷ ಪ್ರವಾಸೋದ್ಯಮ ವಲಯವನ್ನು ಆಧುನಿಕ ಶೈಲಿಯಲ್ಲಿ ಅಭಿವೃದ್ಧಿಪಡಿಸಲು 80 ಎಕ್ರೆ ಜಮೀನನ್ನು ಕಂದಾಯ ಇಲಾಖೆಯ ಅಧಿಕಾರಿಗಳು ತಯಾರಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಯ್ದಿರಿಸಬೇಕೆಂದು ಸೂಚನೆ ನೀಡಿದರು. ಕುಂದಾಪುರದ ಕೋಡಿಯ ಸೀವಾಕ್ ಪಕ್ಕದಲ್ಲಿ ಕೋಡಿ ಬೀಚ್ನ ಪಕ್ಕದಲ್ಲಿ 26 ಎಕ್ರೆ ಜಮೀನನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಿ, ಖಾಸಗಿ ಸಹಭಾಗಿತ್ವದೊಂದಿಗೆ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಸ್ಥಳವನ್ನು ಶೀಘ್ರದಲ್ಲಿಯೇ ಪ್ರವಾಸೋದ್ಯಮ ಇಲಾಖೆಗೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆ ನಡೆಸುವ ಮುನ್ನ ಕೆ.ಟಿ.ಟಿ.ಎಫ್ ಕಾಯ್ದೆಯನ್ವಯ ನೋಂದಣಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಈವರೆಗೂ ಕೆಲವು ಭಾಗೀದಾರರು ನೋಂದಣಿ ಮಾಡಿರುವುದಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕು ಎಂದರು. ರಾಜ್ಯ ಪ್ರವಾಸೋದ್ಯಮ ಇಲಾಖೆ ಈಗಾಗಲೇ ಜಿಲ್ಲೆಯ ಕಡಲತೀರಗಳ ಪ್ರವಾಸೋದ್ಯಮವನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಲು ಸೂಚನೆ ನೀಡಿದ್ದು, ಇದರ ಅನುಷ್ಠಾನಕ್ಕೆ ಕ್ರಮವಹಿಸಬೇಕೆಂದು ಸೂಚನೆ ನೀಡಿದರು. ಜಿಲ್ಲೆಯ ಪ್ರವಾಸೋದ್ಯಮದ ಜೊತೆಗೆ ಪ್ರವಾಸಿಗರು, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಸೇರಿದಂತೆ ಮತ್ತಿತರ ಚಟುವಟಿಕೆಗಳ ಅನುಭವಗಳನ್ನು ಪಡೆದುಕೊಳ್ಳುವ ಅವಕಾಶ ಕಲ್ಪಿಸುವುದರೊಂದಿಗೆ ಈ ಬಗ್ಗೆ ಪ್ರಚಾರ ಪಡಿಸಬೇಕು ಎಂದರು. ಈಗಾಗಲೇ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಇವುಗಳನ್ನು ಆದ್ಯತೆಯ ಮೇಲೆ ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು. ಸರಕಾರಕ್ಕೆ ಕಳುಹಿಸಿರುವ ಪ್ರಸ್ತಾವನೆಗಳನ್ನು ಅನುಸರಿಸಿ, ಅನುಮೋದನೆ ಪಡೆದು ಅನುಷ್ಠಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಸಂಚಾರ ಬೆಳೆಸಲು ಅನುಕೂಲವಾಗುವಂತೆ ರೂಟ್ಮ್ಯಾಪ್ ಗಳನ್ನೊಳಗೊಂಡ ಫಲಕಗಳನ್ನು ಅಲ್ಲಲ್ಲಿ ಪ್ರದರ್ಶಿಸಬೇಕು ಹಾಗೂ ನಿಖರ ದಾರಿಯಲ್ಲಿ ಸಂಚರಿಸುವ ಸೈನ್ಬೋರ್ಡಗಳನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ., ಡಿಎಫ್ಓ ಗಣಪತಿ, ಉಪವಿಭಾಗಾಧಿಕಾರಿ ಮಹೇಶ್ಚಂದ್ರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು., ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂ ಅಧ್ಯಕ್ಷ ಮನೋಹರ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ : ನಗರದ ಬ್ರಹ್ಮಗಿರಿ ಪ್ರದೇಶದಲ್ಲಿ ನಾಲ್ವರು ಮುಸುಕುಧಾರಿಗಳು ಕಳ್ಳತನಕ್ಕೆ ಯತ್ನಿಸಿದ ಘಟನೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಉಡುಪಿಯ ಬ್ರಹ್ಮಗಿರಿಯ ಅಪಾರ್ಟ್ಮೆಂಟ್ ಒಂದರಲ್ಲಿ, ಆಗಸ್ಟ್ 1ರ ಮುಂಜಾನೆ ನಾಲ್ವರು ಮುಖಕ್ಕೆ ಮುಸುಕು ಧರಿಸಿ, ಕಬ್ಬಿಣದ ಸಲಾಕೆ ಹಿಡಿದು, ಪ್ಲ್ಯಾಟ್ ಬಾಗಿಲು ಒಡೆಯಲು ಯತ್ನಿಸಿದ್ದ ದೃಶ್ಯ ಅಪಾರ್ಟ್ಮೆಂಟ್ ಸಿಸಿಟಿಯಲ್ಲಿ ಸ್ಪಷ್ಟವಾಗಿ ದಾಖಲಾಗಿವೆ.
ಬ್ರಹ್ಮಗಿರಿ ಭಾಗದ ಮೂರು ಅಪಾರ್ಟ್ಮೆಂಟ್ಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು, ಅಲ್ಲಿನ ನಿವಾಸಿಗಳಿಗೆ ಆತಂಕ ಮೂಡಿಸಿದೆ.
ಬ್ಯಾರಿಕೇಡ್ಗೆ ಢಿಕ್ಕಿಯಾಗಿ ಉರುಳಿಬಿದ್ದ ಕಾರು – ಎದೆ ಝಲ್ ಎನಿಸುವ ವೀಡಿಯೋ ವೈರಲ್
ಬಂಟ್ವಾಳ : ಗುಡ್ಡಕುಸಿತದ ಮುಂಜಾಗ್ರತೆಗಾಗಿ ರಸ್ತೆ ಬದಿ ಅಳವಡಿಸಿರುವ ಬ್ಯಾರಿಕೇಡ್ಗೆ ಢಿಕ್ಕಿಯಾಗಿ ಕಾರೊಂದು ಉರುಳಿ ಬಿದ್ದಿರುವ ಘಟನೆ ಬಂಟ್ವಾಳದ ಅಂಚಿಕಟ್ಟೆ ಕೊಪ್ಪಲ ಎಂಬಲ್ಲಿ ನಡೆದಿದೆ. ಈ ಕಾರ್ ಪಲ್ಟಿಯಾಗುವ ಎದೆ ಝಲ್ ಎನಿಸುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಬಂಟ್ವಾಳ-ಧರ್ಮಸ್ಥಳ ರಸ್ತೆಯ ಅಂಚಿಕಟ್ಟೆ ಕೊಪ್ಪಲ ಎಂಬಲ್ಲಿ ಗುಡ್ಡ ಕುಸಿತ ಆಗುತ್ತಿತ್ತು. ಆದ್ದರಿಂದ ಮುಂಜಾಗ್ರತೆಗಾಗಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆದರೆ ಮಳೆ ಸುರಿಯುತ್ತಿದ್ದರಿಂದ ಬ್ಯಾರಿಕೇಡ್ ಗಮನಿಸದ ಕಾರೊಂದು ಬ್ಯಾರಿಕೇಡ್ಗೆ ಢಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಲ್ಟಿಯಾದ ಕಾರು ಉರುಳಿ ಬಿದ್ದಿದೆ. ಸದ್ಯ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಸದ್ಯ ಈ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ದಕ್ಷಿಣ ಕನ್ನಡ : ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬುಧವಾರ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಅಧಿಕಾರಿಗಳೊಂದಿಗೆ ಜಿಲ್ಲೆಯ ವಿವಿಧ ನೆರೆ ಪೀಡಿತ ಹಾಗೂ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾಧಿಕಾರಿಗಳು ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದರು. ಸ್ಥಳೀಯ ಸಾರ್ವಜನಿಕರೊಂದಿಗೆ ಅಹವಾಲು ಆಲಿಸಿದ ಅವರು, ನೆರೆ ಪೀಡಿತ ಪ್ರದೇಶಗಳಲ್ಲಿ ಹಾಗೂ ಸಂಭಾವ್ಯ ನೆರೆ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೆರೆ ಪ್ರದೇಶಗಳ ನಿವಾಸಿಗಳ ಸ್ಥಳಾಂತರ ಮತ್ತು ಕಾಳಜಿ ಕೇಂದ್ರಗಳ ಸ್ಥಾಪನೆಯ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಕಾಳಜಿ ಕೇಂದ್ರಗಳಲ್ಲಿ ತಂಗಿರುವ ನಾಗರಿಕರೊಂದಿಗೆ ಸಮಾಲೋಚಿಸಿ, ಧೈಯ೯ ತುಂಬಿದ ಜಿಲ್ಲಾಧಿಕಾರಿಗಳು, ಸಹಜ ಪರಿಸ್ಥಿತಿ ಬರುವವರೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು. ಹರೇಕಳ, ಬಂಟ್ವಾಳ, ಆಲಡ್ಕ, ಉಪ್ಪಿನಂಗಡಿ ಮತ್ತಿತರ ಕಡೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ನೆರೆ ಪರಿಸ್ಥಿತಿ ವೀಕ್ಷಿಸಿದರು.
ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.