ಮಂಗಳೂರು : ಬಿಜೆಪಿ ದಕ್ಷಿಣ ಮಂಡಲ ಹಿಂದುಳಿದ ಮೋರ್ಚಾ ವತಿಯಿಂದ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ್ ತಮ್ಮ ಹುಟ್ಟುಹಬ್ಬದ ಸವಿನೆನಪಿಗಾಗಿ ಕೊಡಮಾಡಿದ ಚರ್ಮ ಕುಟೀರದ ಉದ್ಘಾಟನೆ ಮಂಗಳವಾರ ಬೆಳಗ್ಗೆ ಆರ್ಟಿಓ ಕಚೇರಿ ಮುಂಭಾಗದಲ್ಲಿ ನಡೆಯಿತು.
ಬಳಿಕ ಮಾತಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು, “ರಾಜು ಸ್ವಾಮಿ ಅವರು ಆರ್ಟಿಓ ಬಳಿ ಕಳೆದ 40 ವರ್ಷಗಳಿಂದ ಚರ್ಮ ಕುಟೀರ ನಡೆಸಿಕೊಂಡು ಬರುತ್ತಿದ್ದು ಈ ಹಿಂದೆ ಕೊಟ್ಟಿದ್ದ ಅಂಗಡಿ ಸಂಪೂರ್ಣ ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ದಿವಾಕರ ಪಾಂಡೇಶ್ವರ್ ಅವರು 85000 ರೂ. ವೆಚ್ಚದಲ್ಲಿ ಹೊಸ ಅಂಗಡಿಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಅವರ ಸಾಮಾಜಿಕ ಕಳಕಳಿ ಶ್ಲಾಘನೀಯವಾದುದು. ಅವರಿಗೆ ಭಗವಂತ ಇನ್ನಷ್ಟು ಶಕ್ತಿ ಸಾಮರ್ಥ್ಯವನ್ನು ಕೊಟ್ಟು ಸಮಾಜದ ಕೆಲಸ ಮಾಡಲು ಅರೋಗ್ಯವನ್ನು ನೀಡಲಿ“ ಎಂದು ಶುಭಹಾರೈಸಿದರು.
ಬಳಿಕ ಮಾತು ಮುಂದುವರಿಸಿದ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು, ”ಈ ಹಿಂದೆಯೂ ದಿವಾಕರ ಪಾಂಡೇಶ್ವರ್ ಅವರು ಮಹಿಳೆಯರಿಗೆ ಹೊಲಿಗೆ ಯಂತ್ರ, ಮಕ್ಕಳಿಗೆ ಸ್ಕಾಲರ್ಶಿಪ್ ನೀಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡವರು. ಈ ಬಾರಿ ತಮ್ಮ 49ನೇ ಹುಟ್ಟುಹಬ್ಬದ ಪ್ರಯುಕ್ತ ಬಡ ಚಮ್ಮಾರನಿಗೆ ಕುಟೀರ ನಿರ್ಮಿಸಿಕೊಟ್ಟಿದ್ದಾರೆ. ಅವರಿಗೆ ಮಹಾನಗರ ಪಾಲಿಕೆ ಮತ್ತು ಜನರ ಪರವಾಗಿ ಅಭಿನಂದನೆಗಳು“ ಎಂದರು.
ವೇದಿಕೆಯಲ್ಲಿ ಒಬಿಸಿ ಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ, ಹರ್ಷಿತ್ ಕೊಟ್ಟಾರಿ, ರಮೇಶ್ ಕಂಡೆಟ್ಟು, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ಮನಪಾ ಸದಸ್ಯೆಯರಾದ ಭಾನುಮತಿ, ರೇವತಿ ಶ್ಯಾಮಸುಂದರ್, ಹಿಂದುಳಿದ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.