ಉಡುಪಿ : ಮಹಿಳೆಯೊಬ್ಬರಿಗೆ ಅವರ ಅಂತಿಮ ಇಚ್ಛೆಯಂತೆ ಸಾಮಾಜಿಕ ಕಾರ್ಯಕರ್ತ ಈಶ್ಚರಮಲ್ಪೆಯವರು ತನ್ನ ತಂಡದ ಜರ್ಸಿ ತೊಡಿಸುವ ಮೂಲಕ ಕೊನೆ ಆಸೆ ಈಡೇರಿಸಿದ್ದಾರೆ.
ಉಡುಪಿಯ ಉದ್ಯಾವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪ್ರದೀಪ್ ಹಾಗೂ ಸೋನಿ ದಂಪತಿ ಉಡುಪಿಯ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಾಗೂ ಅನಾಥ ಶವಗಳ ಅಂತಿಮ ಕ್ರಿಯೆಗಳಿಗೆ ತಮ್ಮಿಂದಾಗುವ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಅನಾಥ ಶವಗಳಿಗೆ ಹೆಗಲು ಕೊಡುವುದು ಮಾತ್ರವಲ್ಲದೆ, ಅದರ ಸಂಸ್ಕಾರ ಮಾಡಲು ಬೇಕಾದ ಹೊಂಡವನ್ನು ತೋಡುವುದು, ಅಂತಿಮ ಕ್ರಿಯೆಯಲ್ಲಿ ತೊಡಗುವ ಎಲ್ಲಾ ಕೆಲಸ ಕಾರ್ಯಗಳನ್ನು ಇತರ ಸಮಾಜ ಸೇವಕರೊಂದಿಗೆ ಸೇರಿ ಹಲವು ಅನಾಥ ಶವಗಳ ಮೋಕ್ಷಕ್ಕಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಸಮಾಜಸೇವೆಯನ್ನೇ ನೆಚ್ಚಿಕೊಂಡು ಸಂತಸದ ಜೀವನವನ್ನು ಸಾಗಿಸುತ್ತಿರುವಾಗ ಸೋನಿ ಅವರು ಅಚಾನಕ್ ಆಗಿ ಅನಾರೋಗ್ಯ ಪೀಡಿತರಾದರು. ಕಳೆದ ಕೆಲವು ದಿನಗಳಿಂದ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಸಮಾಜ ಸೇವಕಿ ಸೋನಿ ಅವರು ಈಶ್ವರ್ ಮಲ್ಪೆಯವರ ಸಮಾಜಸೇವೆಯ ಬಗ್ಗೆ ಅಪಾರ ಗೌರವ ಅಭಿಮಾನವನ್ನು ಇಟ್ಟಿದ್ದರು. ನನಗೇನಾದರೂ ಹೆಚ್ಚು ಕಡಿಮೆ ಆದರೆ, ನಾನು ಸಾಯುವ ಮೊದಲು ಆಪತ್ಭಾಂಧವ ಈಶ್ವರ ಮಲ್ಪೆ ಮತ್ತು ತಂಡದ ಜೆರ್ಸಿ (ಟಿ-ಶರ್ಟ್) ಯನ್ನು ಧರಿಸಿ ಆ ನಂತರ ನಾನು ಸಾಯಬೇಕು ಎನ್ನುವ ಮಹದಾಸೆಯನ್ನು ಹೊಂದಿದ್ದರು.
ಅದರಂತೆಯೇ ಈಶ್ವರ್ ಮಲ್ಪೆಯವರು ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡುತ್ತಿದ್ದ ಸಮಾಜ ಸೇವಕಿ ಸೋನಿಯವರಿಗೆ ತಮ್ಮ ತಂಡದ ಜೆರ್ಸಿಯನ್ನು ತೊಡಿಸಿ, ತಮ್ಮ ಕೈಲಾದ ಸಹಾಯವನ್ನು ಮಾಡಿ, ಅವರ ಕೊನೆಯ ಆಸೆಯನ್ನು ಪೂರೈಸಿದ್ದಾರೆ. ದುರದೃಷ್ಟವಶಾತ್ ಮರುದಿನವೇ ಅವರ ದೇಹಾಂತ್ಯವಾಗಿದೆ.