ಉಡುಪಿ : ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಕರ್ನಾಟಕ ಉಚ್ಚ ನ್ಯಾಯಾಲಯ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಗ್ರಹಿಸಿದ್ದಾರೆ.

ಈ ನೆಲದ ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ. ಇತರರ ವಿಚಾರದಲ್ಲಿ ರಾಜೀನಾಮೆ ಕೇಳಲು ಬಹಳ ಆಸಕ್ತಿ ವಹಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಸರದಿ ಬಂದಾಗ ರಾಜಿನಾಮೆ ನೀಡದೆ ವೃಥಾ ಕಾಲಹರಣ ಮಾಡುತ್ತಿರುವುದು ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಎಸಗಿದ ಘೋರ ಅಪಚಾರವಾಗಿದೆ.
ರಾಜ್ಯದ ಸಂಪತ್ತನ್ನು ಲೂಟಿಗೈದವರನ್ನು ಜೈಲಿಗೆ ಅಟ್ಟಬೇಕು, ನಮ್ಮದು ನುಡಿದಂತೆ ನಡೆವ ಸರಕಾರ ಎಂದೆಲ್ಲಾ ಬೊಗಳೆ ಬಿಡುತ್ತಿದ್ದ ಸಿದ್ದರಾಮಯ್ಯ ಅವರಿಗೆ ತನ್ನ ಮಾತನ್ನು ಉಳಿಸಿಕೊಳ್ಳುವ ಅವಕಾಶ ಒದಗಿ ಬಂದಿದೆ. ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ, ಡಿನೋಟಿಫಿಕೇಷನ್ ಪ್ರಕರಣ, ಅಧಿಕಾರ ದುರ್ಬಳಕೆ, ಸ್ವಜನ ಪಕ್ಷಪಾತ ಸಹಿತ ಸಾಲು ಸಾಲು ಹಗರಣಗಳನ್ನು ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನಿನ ಕುಣಿಕೆಯಿಂದ ಪಾರಾಗಲು ಸಾಧ್ಯವೇ ಇಲ್ಲ ಎಂಬುದನ್ನು ರಾಜ್ಯದ ಜನತೆಗೆ ಚೆನ್ನಾಗಿಯೇ ಅರಿತುಕೊಂಡಿದ್ದಾರೆ.
ಅಧಿಕಾರದ ದಾಹದಿಂದ ಜನರ ಭಾವನೆಯೊಂದಿಗೆ ಚೆಲ್ಲಾಟವಾಡಿ, ರಾಜ್ಯವನ್ನು ದಿವಾಳಿಯ ಅಂಚಿಗೆ ನೂಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಶೀಘ್ರ ರಾಜೀನಾಮೆಯನ್ನು ನೀಡಿ ಮುಂದಿನ ಪ್ರಕ್ರಿಯೆಗೆ ಸಹಕರಿಸಿ ಈ ನೆಲದ ಕಾನೂನನ್ನು ಗೌರವಿಸಬೇಕು ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.