ಉಡುಪಿ : ಪರ್ಕಳದ ನಿವಾಸಿ ಸಂಶೋಧಕ, ಮಣಿಪಾಲ ಎಂಐಟಿಯ ಉದ್ಯೋಗಿ, ಆರ್.ಮನೋಹರ್ ತನ್ನದೇ ಸೂತ್ರ ಬಳಸಿ ಏಕಕಾಲಕ್ಕೆ ಎರಡು ಕಣ್ಣುಗಳಲ್ಲಿ ನೇರವಾಗಿ ನೋಡುವ ರೀತಿಯಲ್ಲಿ ಆವಿಷ್ಕರಿಸಿರುವ ದೂರದರ್ಶಕ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗುವ ಪ್ರಯತ್ನದಲ್ಲಿದೆ.
ದಾಖಲೆಗಾಗಿ ಮನೋಹರ್ ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಇವರು ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೇಟೆಂಟ್ ಪಡೆದು ಒಂದು ಕಣ್ಣಿನಲ್ಲಿ ನೇರವಾಗಿ ನೋಡುವ ದೂರದರ್ಶಕವನ್ನು ಆವಿಷ್ಕರಿಸುವ ಮೂಲಕ ಜಗತ್ತಿನ 9 ಮಂದಿಯಲ್ಲಿ ಒಬ್ಬರಾಗಿದ್ದಾರೆ.
ಇದೀಗ ಮತ್ತೊಮ್ಮೆ ಎರಡು ಕಣ್ಣಿನಲ್ಲಿ ಏಕಕಾಲಕ್ಕೆ ನೋಡುವಂತಹ ದೂರದರ್ಶಕವನ್ನು ಅವರು ಆವಿಷ್ಕರಿಸಿದ್ದಾರೆ. ಸದ್ಯದಲ್ಲಿ ಗಿನ್ನಿಸ್ ದಾಖಲೆ ತಂಡ ಪರ್ಕಳಕ್ಕೆ ಭೇಟಿ ನೀಡಲಿದೆ.
ಈ ದೂರದರ್ಶಕವು ಸುಮಾರು 80 ಎಕ್ಸ್ ದೂರದ ವಸ್ತು ಕಾಣುವ ತಂತ್ರಜ್ಞಾನ ಹೊಂದಿದ್ದು, ಈ ದೂರದರ್ಶಕದಲ್ಲಿ ಚಂದ್ರ ಮನಮೋಹಕನಾಗಿ ಕಾಣುತ್ತದೆ. ಈ ನವೀಕರಿಸಲ್ಪಟ್ಟ ದೂರದರ್ಶಕ ಎಚ್ಡಿ ಕ್ವಾಲಿಟಿಯನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಸಿಗುವಂತಹ ದೂರದರ್ಶಕದಲ್ಲಿ ಬಾಗಿ ಒಂದು ಕಣ್ಣಿನಲ್ಲಿ ನೋಡಬೇಕಾದರೆ, ಈ ಹೊಸ ಆವಿಷ್ಕಾರದ ದೂರದರ್ಶಕದಲ್ಲಿ ಆ ಕಷ್ಟ ಇರುವುದಿಲ್ಲ. ಇಲ್ಲಿ ಬಾಗಿ ನೋಡುವ ಬದಲು ನೇರವಾಗಿ ನಿಂತು ನೋಡ ಬಹುದಾಗಿದೆ. ಅದಕ್ಕಾಗಿ ಬೆಳಕಿನ ಪರಿವರ್ತನೆ ಮಾಡಿ ದೂರದರ್ಶಕವನ್ನು ನಿರ್ಮಿಸಿ ಪೇಟೆಂಟು ಪಡೆಯಲಾಗಿದೆ ಎಂದು ಮನೋಹರ್ ತಿಳಿಸಿದ್ದಾರೆ.