ಮಂಗಳೂರು : ನಗರದ ಮರವೂರು ಫಲ್ಗುಣಿ ನದಿಯಲ್ಲಿ ಈಜಲು ತೆರಳಿದ ನಾಲ್ವರು ಯುವಕರ ಪೈಕಿ ಇಬ್ಬರು ಯುವಕರು ನೀರುಪಾಲಾದ ಘಟನೆ ರವಿವಾರ ಸಂಜೆ ಸಂಭವಿಸಿದೆ.

ಮಂಗಳೂರು ಕೊಟ್ಟಾರಚೌಕಿ ನಿವಾಸಿ ಸುಮಿತ್ (20) ಹಾಗೂ ಉರ್ವಸ್ಟೋರ್ ನಿವಾಸಿ ಅನೀಶ್ (19) ನಾಪತ್ತೆಯಾದ ಯುವಕರು.
ಮರವೂರು ವೆಂಟೆಡ್ ಡ್ಯಾಂನ ಪಕ್ಕದಲ್ಲಿರುವ ರೈಲ್ವೆ ಸೇತುವೆಯ ಬಳಿಯ ಫಲ್ಗುಣಿ ನದಿಯಲ್ಲಿ ಈಜಲು ನಾಲ್ವರು ಯುವಕರ ತಂಡ ರವಿವಾರ ಸಂಜೆ 4ಗಂಟೆಗೆ ಹೋಗಿದ್ದರು. ಈ ವೇಳೆ ಸುಮಿತ್ ಹಾಗೂ ಅನೀಶ್ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಜೊತೆಗಿದ್ದ ಕೋಡಿಕಲ್ ನಿವಾಸಿಗಳಾದ ಅರುಣ್(19) ಹಾಗೂ ದೀಕ್ಷಿತ್(18) ಪಾರಾಗಿದ್ದಾರೆ. ನಾಪತ್ತೆಯಾದವರ ಹುಡುಕಾಟಕ್ಕಾಗಿ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ಆಗಮಿಸಿ, ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಜಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.