ಉಡುಪಿ : ಪ್ರತಿ ಕುಟಂಬಗಳು ತಮ್ಮ ಮನೆಯ ಮೇಲ್ಬಾವಣಿಯಲ್ಲಿ ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ವೆಚ್ಚದ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ‘ಸೂರ್ಯ ಘರ್’ ಯೋಜನೆಯನ್ನು ಜಾರಿಗೊಳಿಸಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಶನಿವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಉಡುಪಿ ಜಿಲ್ಲಾಡಳಿತದ ವತಿಯಿಂದ ಪ್ರಧಾನಮಂತ್ರಿ ‘ಸೂರ್ಯ ಘರ್’ ಯೋಜನೆ, ಮಾಹಿತಿ ಕಾರ್ಯಾಗಾರ ಮತ್ತು ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ಯೋಜನೆಯಲ್ಲಿ ಇದುವರೆಗೆ ವಿದ್ಯುತ್ ಹೊಂದಿಲ್ಲದ ಕುಟುಂಬದ ಮನೆಗಳಿಗೆ ಮೊದಲ ಆದ್ಯತೆ ನೀಡಿದಾಗ ಯೋಜನೆ ಯಶಸ್ವಿಯಾಗುತ್ತದೆ ಎಂದ ಅವರು, ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳು ಈ ಯೋಜನೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು. ಇದರ ಅಡಿಯಲ್ಲಿ ಒದಗಿಸಲಾಗುವ ಸಹಾಯಧನದ ಕುರಿತು ಎಲ್ಲರಿಗೂ ಮಾಹಿತಿ ನೀಡಬೇಕು ಎಂದರು.
ಸೂರ್ಯ ಘರ್ ಯೋಜನೆಯಡಿ ಸೌರ ಶಕ್ತಿ ಪ್ಯಾನೆಲ್ಗಳನ್ನು ಅಳವಡಿಸಿಕೊಳ್ಳಲು ಗ್ರಾಹಕರಿಗೆ 3 ಕಿ.ವ್ಯಾಟ್ವರೆಗೆ ಮಾತ್ರ ಸಹಾಯಧನ ಮೊತ್ತವನ್ನು ನೀಡಲಾಗುತ್ತದೆ. 1ಕಿ.ವ್ಯಾಟ್ಗೆ 30,000 ರೂ, 2 ಕಿ.ವ್ಯಾಟ್ಗೆ 60,000 ರೂ. ಮತ್ತು 3 ಕಿ.ವ್ಯಾಟ್ಗೆ 78 ಸಾವಿರ ರೂ. ಸಬ್ಸಿಡಿಯನ್ನು ನೀಡಲಾಗುತ್ತದೆ ಎಂದರು.