Recognition
ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರ ವಿತರಣೆ
ಕಾರ್ಕಳ : ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಸ್ವಾವಲಂಬಿ ಅರ್ಹ ಫಲಾನುಭವಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಯು ಡಿಸೆಂಬರ್ 02ರಂದು ವಿಕಾಸ ಕಚೇರಿಯಲ್ಲಿ ನಡೆಯಿತು.

ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಾಗಬೇಕು ಮತ್ತು ಸ್ವಾವಲಂಬಿಗಳಾಗಿ ದುಡಿಯಬೇಕು ಎನ್ನುವ ನಿಟ್ಟಿನಲ್ಲಿ ಸರಕಾರವು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡುತ್ತಿದೆ. ಅರ್ಜಿ ಸಲ್ಲಿಸಿದ 35 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಗಿದೆ ಎಂದರು.
ಜೊತೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಕಾರ್ಕಳ ತಾಲೂಕು ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.


ಹೆಡ್ ಕಾನ್ಸ್ಟೇಬಲ್ ಬಿ. ವಿಜಯ್ ಕುಮಾರ್ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ
ಉಡುಪಿ : ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಆರ್ಬಿ ವಿಭಾಗದಲ್ಲಿ ಸಿವಿಲ್ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ಬಿ. ವಿಜಯ್ ಕುಮಾರ್ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಲಭಿಸಿದೆ. ಇವರು 1993ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು.

ಈತನಕ ಪಣಂಬೂರು, ಪುತ್ತೂರು ನಗರ, ಉರ್ವ, ಉಡುಪಿ ನಗರ, ಕುಂದಾಪುರ, ಉಡುಪಿ ಟ್ರಾಫಿಕ್, ಉಡುಪಿ ಮಹಿಳಾ ಠಾಣೆ ಮತ್ತು ಹಿರಿಯಡ್ಕ ಠಾಣೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. 2022ರಲ್ಲಿ ಇವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದರು.
ಲಯನ್ಸ್ ಕ್ಲಬ್ನಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಡಾ. ತಲ್ಲೂರು ಅವರಿಗೆ ಅಭಿನಂದನೆ
ಉಡುಪಿ : ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಬುಧವಾರ ನಡೆದ ಲಯನ್ಸ್ ಮತ್ತು ಲಿಯೋ ಕ್ಲಬ್ ಮಲ್ಪೆ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಲಯನ್ಸ್ ಜಿಲ್ಲೆ 317ಸಿ ಮಾಜಿ ಗವರ್ನರ್ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಲಯನೆಸ್ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಮಾಜಿ ಗವರ್ನರ್ ಶ್ರೀಧರ ಶೇಣವ, ಲಯನ್ಸ್ ಕ್ಲಬ್ ಮಲ್ಪೆಯ ನೂತನ ಅಧ್ಯಕ್ಷ ಸುಧಾಕರ ಪೂಜಾರಿ, ಪದಗ್ರಹಣ ಅಧಿಕಾರಿ ಡಾ. ಮೆಲ್ವಿನ್ ಡಿಸೋಜ, ಮುಖ್ಯ ಅತಿಥಿ ರೋ.ಹೇಮಂತ್ ಯು.ಕಾಂತ್, ಲಿಯೋ ಅಧ್ಯಕ್ಷ ನಂದನ್ ಡಿ.ಕುಂದರ್, ಕಾರ್ಯದರ್ಶಿ ರವೀಂದ್ರ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
ಡಾ.ತಲ್ಲೂರು ಶಿವರಾಮ ಶೆಟ್ಟರು ತಮ್ಮ ಸಂಪಾದನೆಯ ಒಂದು ಪಾಲನ್ನು ಕಲಾವಿದರ ಶ್ರೇಯುಸ್ಸಿಗೆ, ಕಲಾ ಪ್ರಚಾರಕ್ಕೆ, ಕಲೆಯ ಉಳವಿಗೆ ವ್ಯಯಿಸುವ ಮೂಲಕ ಸಮಾಜದ ಮನ ಗೆದ್ದಿದ್ದಾರೆ.
ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ನಾಡಿನ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಅನುಪಮ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಸರಕಾರ ಅವರನ್ನು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ನೇಮಕಗೊಳಿಸಿದೆ.
ಉಡುಪಿ ಜಿಲ್ಲೆಯ ಪ್ರತಿಷ್ಠಿತ ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಸುಮಾರು 7 ವರ್ಷ ಕಾಲ ತುಂಬು ಚಟುವಟಿಕೆಗಳನ್ನು ನಡೆಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸುವಂತೆ ಮಾಡಿದವರು ಡಾ.ತಲ್ಲೂರು. ಕಲಾರಂಗ ಸಂಘಟಿಸುವ ವಿದ್ಯಾಪೋಷಕ್ ಸ್ಕಾಲರ್ಶಿಪ್ನ್ನು ವಿಸ್ತರಿಸುವ ಕಾರ್ಯ ಮಾಡಿದ್ದಾರೆ.
ಯಕ್ಷಗಾನದ ಪದ್ಮಶ್ರೀ ಚಿಟ್ಟಾಣಿ ಅವರ ಯಕ್ಷಗಾನ ಸಪ್ತಾಹ, ಅಷ್ಟಾಹ, ದಶಹ ಕಾರ್ಯಕ್ರಮಗಳು ಉಡುಪಿ ರಾಜಾಂಗಣದಲ್ಲಿ ಪ್ರತಿ ವರ್ಷ ಇವರ ಸಾರಥ್ಯದಲ್ಲಿಯೇ ನೆರವೇರುತ್ತಿದೆ. ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಪ್ರತಿಷ್ಠಾನದಿಂದ ಯಕ್ಷಗಾನ ಸಪ್ತಾಹ, ತೆಂಕುತಿಟ್ಟಿನ ದಶಾವತಾರಿ ಕೆ. ಗೋವಿಂದ ಭಟ್ಟರ ಯಕ್ಷ ಸಪ್ತಾಹ, ಪ್ರಸಿದ್ಧ ಅರ್ಥಧಾರಿ ಸಾಮಗ ಸಂಸ್ಮರಣೆ ಹೀಗೆ ಯಕ್ಷಗಾನದ ಪ್ರಸಿದ್ಧ ನಾಮರ ಹೆಸರಲ್ಲಿ ಯಕ್ಷಗಾನ ಕಾರ್ಯಕ್ರಮಗಳು, ಸಾಧಕ ಕಲಾವಿದರಿಗೆ ಪ್ರಶಸ್ತಿ ನೀಡುವ ಮೂಲಕ ಧನ್ಯತೆಯ ಭಾವ ಅನುಭವಿಸಿದ್ದಾರೆ. ಈ ವರ್ಷ ಹಟ್ಟಿಯಂಗಡಿ ಮೇಳದವರ ಪಂಚಾಹ ಕಾರ್ಯಕ್ರಮ ಮಾಡಿದ್ದಾರೆ.
ಕಲಾರಾಧನೆ ಮೂಲಕ ಸಂತೃಪ್ತಿ ಹೊಂದಿದ್ದ ಡಾ.ತಲ್ಲೂರು ಅವರು ಯಕ್ಷಗಾನ ಕಲಾರಂಗದ ಚುಕ್ಕಾಣಿ ಹಿಡಿದ ಮೇಲೆ ತಮ್ಮ 60ನೇ ವಯಸ್ಸಿನಲ್ಲಿ ಗೆಜ್ಜೆಕಟ್ಟಿ ಕುಣಿದರು. ಖ್ಯಾತ ಗುರು ಬನ್ನಂಜೆ ಸಂಜೀವ ಸುವರ್ಣರ ಬಳಿ ಯಕ್ಷಗಾನ ಕಲಿತರು. ಶ್ರೀಕೃಷ್ಣ, ಬಲರಾಮ, ಹನುಮ, ಸಂಜಯ, ಮಗಧ, ಮೊದಲಾದ ದೊಡ್ಡ ವೇಷಗಳನ್ನು ಸಮರ್ಥವಾಗಿ ನಿಭಾಯಿಸಿ ಈವರೆಗೆ 400ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಅವರ ಕಚೇರಿಗೆ ಹೋದಾಗ ಅವರು ನಿರ್ವಹಿಸಿದ ಪಾತ್ರಗಳ ಫೋಟೊಗಳು ಕಲಾಸಕ್ತರಿಗೆ ಧನ್ಯತೆಯ ಭಾವವನ್ನು ಮೂಡಿಸುತ್ತವೆ.
ಡಾ. ತಲ್ಲೂರು ಅವರ ಕಲಾರಾಧನೆಗೆ ಸಂದ ಪ್ರಶಸ್ತಿಗಳು, ಸಮ್ಮಾನಗಳನ್ನು ಗಮನಿಸಿದಾಗ ಬೆರಗು ಮೂಡುತ್ತದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅವರಿಗೆ 2022ನೇ ಸಾಲಿನ ‘ಗೌರವ ಡಾಕ್ಟರೇಟ್’ ನೀಡಿ ಗೌರವಿಸಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ತುರುವೆ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ, ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ, ಜಗಜ್ಯೋತಿ ಬಸವೇಶ್ವರ ಕಾಯಕಶ್ರೀ ಪ್ರಶಸ್ತಿ ಸೇರಿದಂತೆ ನಾಡಿನ ಪ್ರತಿಷ್ಠಿತ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿ ಗೌರವಿಸಿದೆ.
ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಹಿರಿಯ ಸದಸ್ಯೆ ಕಾಮತ್ರವರು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯಿಂದ ಕೊಡ ಮಾಡಲ್ಪಡುವ 2024ರ ಡಾ. ಬಿ.ಸಿ. ರಾಯ್ ಪ್ರಶಸ್ತಿಗೆ ಭಾಜನರಾಗಿದ್ದಾರೆ

ಬೆಂಗಳೂರಿನಲ್ಲಿ ನಡೆದ ವೈದ್ಯರ ದಿನಾಚರಣೆಯ ಸಂದರ್ಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಡಾ. ಎಚ್ ಕೆ ಪಾಟೀಲ್, ಭಾ ವೈ ಸಂಘದ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ ಹಾಗೂ ಗೌರವ ಕಾರ್ಯದರ್ಶಿ ಡಾ ಕರುಣಾಕರ್ ಉಪಸ್ಥಿತರಿದ್ದರು.
ಶಿರ್ವ : ಕರ್ನಾಟಕ ರಾಜ್ಯ ಭಾರತೀಯ ರೆಡ್ಕ್ರಾಸ್ ಸಂಸ್ಥೆ ನೇತೃತ್ವದಲ್ಲಿ ವಿಶ್ವ ರೆಡ್ಕ್ರಾಸ್ ದಿನಾಚರಣೆ ಪ್ರಯುಕ್ತ ಬೆಂಗಳೂರು ರೆಡ್ಕ್ರಾಸ್ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಡಾರು ಸರಕಾರಿ ಶಾಲಾ ಮುಖ್ಯಶಿಕ್ಷಕ ದೇವದಾಸ್ ಪಾಟ್ಕರ್ ಮುದರಂಗಡಿ ಅವರಿಗೆ ರಾಜ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ರಾಜ್ಯಾಧ್ಯಕ್ಷ ವಿಜಯಕುಮಾರ್ ಪಾಟೀಲ ಶಾವಂತಗೇರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವದಾಸ್ ಪಾಟ್ಕರ್ ಅವರಿಗೆ ಕರ್ನಾಟಕ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ರಾಜ್ಯ ಪುರಸ್ಕಾರ ನೀಡಿ ಸನ್ಮಾನಿಸಿದರು.
ಪಾಟ್ಕರ್ರವರು 78 ಬಾರಿ ರಕ್ತದಾನ ಮಾಡಿದ್ದಲ್ಲದೆ ಪ್ರತೀ ವರ್ಷವೂ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದು, ಈವರೆಗೆ 25ಕ್ಕೂ ಅಧಿಕ ರಕ್ತದಾನ ಶಿಬಿರಗಳನ್ನು ಸಂಘಟಿಸಿದ್ದಾರೆ. ತುರ್ತು ರಕ್ತ ವ್ಯವಸ್ಥೆ ಬಗ್ಗೆ ಬರುವ ಕರೆಗಳಿಗೆ ಸ್ಪಂದಿಸಿ ಉಡುಪಿ, ಮಂಗಳೂರು ಪ್ರದೇಶಗಳ ರೋಗಿಗಳಿಗೂ ರಕ್ತವನ್ನು ಒದಗಿಸಿದ್ದಾರೆ. ಈ ಬಾರಿ ರಾಜ್ಯಮಟ್ಟದ ಗೌರವಕ್ಕೆ ಕರ್ನಾಟಕದಿಂದ ಏಳು ಮಹಾ ರಕ್ತದಾನಿಗಳು ಆಯ್ಕೆಯಾಗಿದ್ದು, ಉಡುಪಿ ಜಿಲ್ಲೆಯಿಂದ ದೇವದಾಸ್ ಪಾಟ್ಕರ್ರವರಿಗೆ ಈ ಗೌರವ ಸಂದಿದೆ.
ಉಡುಪಿ : ರೋಟರಿ ಕ್ಲಬ್ ಮಣಿಪಾಲ್ ವತಿಯಿಂದ ರೋಟರಿ ಜನಸೇವಾ ಅವಾರ್ಡ್ ಪ್ರಶಸ್ತಿ ಪ್ರಧಾನ ಸಮಾರಂಭ ಸರಕಾರಿ ಉಡುಪಿ ಮಹಿಳಾ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು.
ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಬಿ. ಸಿ. ಗೀತಾರವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿವಿಧ ಕೇತ್ರದಲ್ಲಿ ಗಣನೀಯ ಸೇವೆ ನೀಡುತ್ತಿರುವ ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ (ರಾಜ್ಯಪಾಲೆ) ಬಿ.ಸಿ. ಗೀತಾರವರಿಗೆ ಸಮಾಜಸೇವೆ, ಗ್ರಾಮೀಣ ಅಭಿವೃದ್ಧಿ, ಉತ್ತಮ ಸಂಘಟನೆ ಮೂಲಕ ಸಮಾಜಸೇವೆಯ ವಿಶೇಷ ಸಾಧನೆಯನ್ನು ಗುರುತಿಸಿ ರೋಟರಿ ಜನಸೇವಾ ಅವಾರ್ಡ್ ಪ್ರಶಸ್ತಿಯನ್ನು ಮುಖ್ಯ ಅತಿಥಿಗಳಾಗಿ ಶಾಲಾ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಯಶಪಾಲ್ ಸುವರ್ಣ ನೀಡಿ ಗೌರವಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯನ್ನು ಗುರುತಿಸಿ DIAT ಉಪ ಪ್ರಾಂಶುಪಾಲರು ಡಾ ಅಶೋಕ್ ಕಾಮತ್ರವರಿಗೆ ರೋಟರಿ ಜಿಲ್ಲಾ ಗವರ್ನರ್ ಬಿ. ಸಿ. ಗೀತಾ ರವರು ಪ್ರಶಸ್ತಿ ಪ್ರಧಾನ ಮಾಡಿ ಶುಭ ಹಾರೈಸಿದರು.
ಪರಿಸರ ಸಂರಕ್ಷಣೆ, ಕೃಷಿ ಭೂಮಿಯ ಫಲವತ್ತತೆ ಕುರಿತು ವಿಶೇಷ ಅಧ್ಯಯನ ಮಾಡಿ ಸಾಧನೆಗೈದ ZUARI ಆಗ್ರೀ ಕೆಮಿಕಲ್ ಸೀನಿಯರ್ ಮೆನೇಜರ್ ಅನಂತ ಪ್ರಭು ಗೋವಾರವರಿಗೆ ರೋಟರಿ ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ. ಗೌರಿ ರೋಟರಿ ಅವಾರ್ಡ್ ನೀಡಿ ಗೌರವಿಸಿದರು.
ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಗಣಪತಿ, ಬಿಇಒ ಡಾ ಯಲ್ಲಮ್ಮ, ಸಹಾಯಕ ಗವರ್ನರ್ ಪ್ರೇಮಕುಮಾರ್, ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್ ಡಾ ಸುಮಾ, ಮಹಿಳಾ ಹೈಸ್ಕೂಲ್ ಮುಖ್ಯ ಉಪಾಧ್ಯಾಯನಿ ಇಂದಿರಾ, ಕಾರ್ಯದರ್ಶಿ ಡಾ ಶ್ರೀಕಾಂತ್ ಪ್ರಭು, ರೇಣು ಜಯರಾಂ, ಡಾ ಗಿರಿಜಾ, ಜೈವಿಠಲ್, ರಾಮಚಂದ್ರ ಉಪಧ್ಯಾಯ, ರೋಟರಿ ಪಧಾದಿಕಾರಿಗಳು ಉಪಸ್ಥಿತರಿದ್ದರು.
ರೋಟರಿ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಮಣಿಪಾಲ್ ಅಧ್ಯಕ್ಷರಾದ ಶ್ರೀಪತಿ ಸ್ವಾಗತಿಸಿದರು. ರೋಟರಿ ಸೇವಾ ನಿರ್ದೇಶಕ ಅಮಿತ್ ಅರವಿಂದ್ ನಾಯಕ್ ಕಾರ್ಯಕ್ರಮದ ನಿರೂಪಣೆಗೈದರು. ರೋಟರಿ ರಾಜವರ್ಮ ವಂದನಾರ್ಪಣೆಗೈದರು.