ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾ| ಕುಮಾರಧಾರಾ ನದಿಯಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ ಮಾಡಲಾಗಿದೆ.

ಕಡಬ ತಾಲೂಕಿನ ಪುಳಿಕುಕ್ಕು ಎಂಬಲ್ಲಿ ಘಟನೆ ನಡೆದಿದೆ. ಬೆಂಗಳೂರು ಮೂಲದ ರವಿಕುಮಾರ್ ಎಂಬ ವ್ಯಕ್ತಿ ತುಂಬಿ ಹರಿಯುತ್ತಿರುವ ಕುಮಾರಧಾರಾ ನದಿಯಲ್ಲಿ ಇಳಿದಿದ್ದರು, ಈ ಸಂದರ್ಭದಲ್ಲಿ ಆಯತಪ್ಪಿ ನದಿಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಕುಮಾರಧಾರಾ ನದಿಯಲ್ಲಿ ಸಿಲುಕಿದ ರವಿಕುಮಾರ್ರನ್ನು ಅಗ್ನಿಶಾಮಕ ದಳ ಮತ್ತು ಸ್ಥಳೀಯ ಶೌರ್ಯ ತಂಡದಿಂದ ರಕ್ಷಣೆ ಮಾಡಲಾಗಿದೆ. ಇದೀಗ ರವಿಕುಮಾರ್ಗೆ ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರವಿಕುಮಾರ್ ಅವರು ನದಿ ಮಧ್ಯೆ ಪೊದೆ ಹಿಡಿದುಕೊಂಡು ನಿಂತಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಈ ವಿಚಾರವನ್ನು ಕೂಡಲೇ ಅವರು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಕಡಬ ಎಸ್ಐ ಅಭಿನಂದನ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಕಡಬ ಪೊಲೀಸ್, ಅಗ್ನಿಶಾಮಕ ದಳ, ಶೌರ್ಯ ತಂಡದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಿ ಕಡಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕಡಬ ಆಸ್ಪತ್ರೆಗೆ ತಹಶಿಲ್ದಾರ್ ಪ್ರಭಾಕರ್ ಖಜೂರೆ ಭೇಟಿ ನೀಡಿದ್ದಾರೆ.