ಉಡುಪಿ : ಕಳೆದು ಐದು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನೆರೆಯ ಭೀತಿ ಉಂಟಾಗಿದೆ. ಹವಾಮಾನ ಇಲಾಖೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ನಾಳೆ (ಜುಲೈ 20) ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ನೀಡಿದ್ದಾರೆ. ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ. ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ ಗಳಿಗೆ ರಜೆ ಘೋಷಿಸಿರುವುದಿಲ್ಲ.
Public Safety
ಉಡುಪಿ : ಕೂಲಿ ಕಾರ್ಮಿಕನೋರ್ವ ಹೊಳೆನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಚೀರೊಳ್ಳಿ ಎಂಬಲ್ಲಿ ನಡೆದಿದೆ.
ಕೂಲಿ ಕಾರ್ಮಿಕನ್ನು ತುಮಕೂರು ಮೂಲದ ಆನಂದ್ (45) ಎಂದು ಗುರುತಿಸಲಾಗಿದೆ. ಇವರು ಕೆಲಸ ಮಾಡುವ ಮನೆಗೆ ತೆರಳಲು ಸೀತಾನದಿಯ ಉಪನದಿಯನ್ನು ದಾಟಿ ಹೋಗಬೇಕಿತ್ತು. ಹಗ್ಗದ ಸಹಾಯದಿಂದ ಹೊಳೆ ದಾಟುತ್ತಿದ್ದಾಗ ಹಗ್ಗ ತುಂಡಾಗಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎನ್ನಲಾಗಿದೆ.
ಇವರು ನಾಡ್ಪಾಲಿನ ಮನೋರಮಾ ಹೆಗ್ಡೆ ಎಂಬವರಿಗೆ ಸೇರಿದ ತೋಟದಲ್ಲಿ ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿದ್ದರು. ತೋಟದ ಮನೆಯಿಂದ ಹೊಳೆ ದಾಟಿ ಬರಲು ಕಾಲುಸೇತುವೆ ಸಹಿತ ಯಾವುದೇ ಮೂಲ ಸೌಕರ್ಯವನ್ನು ಈ ತನಕ ಕಲ್ಪಿಸಲಾಗಿಲ್ಲ. ಹಾಗಾಗಿ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಹೆಬ್ರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಹೇಶ್ ಟಿಎಂ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೇತುವೆ ಮೇಲಿನಿಂದ ನೇತ್ರಾವತಿ ನದಿಗೆ ಹಾರಿ ಹುಡುಗರ ಹುಚ್ಚಾಟ – ಪ್ರವಾಹದಲ್ಲಿ ಈಜುವ ದುಸ್ಸಾಹಸ!
ಬಂಟ್ವಾಳ : ಪಾಣೆಮಂಗಳೂರು ಸೇತುವೆ ಮೇಲಿನಿಂದ ನೇತ್ರಾವತಿ ನದಿಗೆ ಹಾರಿ ಹುಡುಗರ ಗುಂಪೊಂದು ಹುಚ್ಚಾಟ ಮೆರೆಯುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ.
ಹತ್ತಾರು ಅಡಿ ಮೇಲಿನಿಂದ ಅಪಾಯಕಾರಿ ರೀತಿಯಲ್ಲಿ ನದಿಗೆ ಧುಮುಕುತ್ತಿರುವ ಹುಡುಗರು, ಪ್ರವಾಹಕ್ಕೆದುರಾಗಿ ಈಜುವ ಸಾಹಸ ಮಾಡುತ್ತಿದ್ದಾರೆ. ನೇತ್ರಾವತಿ ನದಿಯಲ್ಲಿ ಅಪಾಯದ ಮಟ್ಟವನ್ನು ಮೀರಿ ನೀರು ಹರಿಯುತ್ತಿದೆ. ಆದರೂ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಈಜುವ ಹುಚ್ಚು ಸಾಹಸ ಮಾಡುತ್ತಿದ್ದಾರೆ.
ಐರಾವತ ಬಸ್ ನಲ್ಲಿ ಆಕಸ್ಮಿಕ ಬೆಂಕಿ : ಸ್ಥಳೀಯ ಯುವಕರ ಕಾರ್ಯಾಚರಣೆಯಿಂದ ತಪ್ಪಿದ ಭಾರೀ ಅನಾಹುತ…!
ಉಪ್ಪಿನಂಗಡಿ : ಕೆಎಸ್ಆರ್ಟಿಸಿ ಐರಾವತ ಬಸ್ಸಿನಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು ತಕ್ಷಣ ಸ್ಥಳೀಯ ಯುವಕರ ಕಾರ್ಯಾಚರಣೆಯಿಂದ ಬೆಂಕಿ ಆರಿಸಲಾಗಿದ್ದು ಹೆಚ್ಚಿನ ಅನಾಹುತ ತಪ್ಪಿಸಿದ ಘಟನೆ ಉಪ್ಪಿನಂಗಡಿ ಹಳೆಗೇಟು ಬಳಿ ಇಂದು ಬೆಳಗ್ಗೆ ನಡೆದಿದೆ.
ಬೆಂಗಳೂರಿನಿಂದ – ಮಂಗಳೂರಿಗೆ ಹೋಗುತ್ತಿದ್ದ ಐರಾವತ ಬಸ್ಸಿನ ಹಿಂಬದಿ ಎಸಿಗೆ ಬೆಂಕಿ ಹತ್ತಿಕೊಂಡಿದ್ದು, ಇದನ್ನು ಗಮನಿಸಿದ ಚಾಲಕ ಹಳೆಗೇಟು ಬಳಿ ಬಸ್ಸನ್ನು ನಿಲ್ಲಿಸಿದ್ದರು.
ಕೂಡಲೇ ಪ್ರಯಾಣಿಕರೆಲ್ಲರೂ ಬಸ್ಸಿನಿಂದ ಇಳಿದಿದ್ದಾರೆ. ತಕ್ಷಣ ಅಲ್ಲಿದ್ದ ಅಟೋ ಚಾಲಕರು ರಸ್ತೆಯಲ್ಲಿದ್ದ ಕೆಸರು, ಮಣ್ಣು, ನೀರನ್ನು ಬಸ್ಸಿಗೆ ಎರಚಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಬಸ್ಸಿನ ಹಿಂಬದಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಉಡುಪಿಯಲ್ಲಿ “ಜೆಸಿಬಿ” ಅಸ್ತ್ರ! ಗುತ್ತಿಗೆದಾರನಿಂದ ಕಳಪೆ ರಸ್ತೆ ಕಾಮಗಾರಿ; ಜೆಸಿಬಿಯಿಂದ ರಸ್ತೆ ಅಗೆಸಿ ವಾರ್ನಿಂಗ್!
ಉಡುಪಿ : ಮಳೆಗೆ ನಗರದ ಹಲವು ರಸ್ತೆಗಳು ಹದಗೆಟ್ಟಿದ್ದು ಸವಾರರು ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಾ ಮುಂದೆ ಸಾಗುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಡಾಂಬರೀಕರಣ ಮಾಡಿದ್ದ ರಸ್ತೆಗಳೂ ಹದಗೆಟ್ಟಿದ್ದು ಹೊಂಡಗಳಿಂದ ಕೂಡಿವೆ. ನಗರದ ಬ್ರಹ್ಮಗಿರಿಯಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆವರೆಗಿನ ಮುಖ್ಯ ರಸ್ತೆ ಕೆಲವು ತಿಂಗಳುಗಳ ಹಿಂದೆಯಷ್ಟೆ ಡಾಂಬರೀಕರಣಗೊಂಡಿತ್ತು. ಇದೀಗ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಎದುರಾಗಿದೆ.

ನಗರಸಭೆ ಪರ್ಯಾಯ ಮಹೋತ್ಸವದ ಅನುದಾನವಾಗಿ ಈ ರಸ್ತೆಗೆ 35 ಲಕ್ಷ ಹಣ ಮಂಜೂರು ಮಾಡಿತ್ತು. ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸಿ, ಇತ್ತೀಚೆಗೆ ಅದರ ಮೇಲೆ ತೇಪೆ ಹಚ್ಚಿಸಿದ್ದರು. ಇದರ ವಿರುದ್ಧ ಸಮಾಜಸೇವಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೂ ಮುಂದಾಗಿದ್ದರು.
ಇಂದು ನಗರಸಭೆ ಆಯುಕ್ತ ರಾಯಪ್ಪ ನೇತೃತ್ವದಲ್ಲಿ ಈ ರಸ್ತೆಯ ತೇಪೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.ಬಳಿಕ ಮಾತನಾಡಿ, ಮಳೆ ಮುಗಿದ ತಕ್ಷಣ ಈ ರಸ್ತೆಯನ್ನು ವೈಜ್ಞಾನಿಕವಾಗಿ ಮತ್ತೆ ಮಾಡಿಕೊಡಬೇಕು. ಗುತ್ತಿಗೆದಾರನ 45 ಲಕ್ಷ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಸಂಪೂರ್ಣ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಮಾಡಿದ ನಂತರ ಅವರ ಹಣ ಕೊಡಲಾಗುವುದು, ಇದು ಎಲ್ಲ ಗುತ್ತಿಗೆದಾರರಿಗೂ ಎಚ್ಚರಿಕೆ ಎಂದು ಹೇಳಿದ್ದಾರೆ.
ಕಡಲ್ಕೊರೆತ ಪ್ರದೇಶಕ್ಕೆ ಉಡುಪಿ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ; ಸಮಸ್ಯೆ ಬಗೆಹರಿಸುವ ಭರವಸೆ
ಪಡುಬಿದ್ರಿ : ಇಲ್ಲಿನ ನಡಿಪಟ್ಣ ಬಳಿ ಕಡಲ್ಕೊರೆತದಿಂದ ಅಪಾಯದಂಚಿನಲ್ಲಿರುವ ಪ್ರದೇಶಕ್ಕೆ ಇಂದು ಉಡುಪಿ ಜಿಲ್ಲಾಧಿಕಾರಿ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ತಾತ್ಕಾಲಿಕ ಪರಿಹಾರವಾಗಿ ಸಮುದ್ರ ತಟಕ್ಕೆ ಕಲ್ಲು ಹಾಕುವ ಭರವಸೆ ವ್ಯಕ್ತ ಪಡಿಸಿದರು.ಕೆಲವು ದಿನಗಳಿಂದ ಕಡಲು ಕೊರೆತ ತೀವ್ರಗೊಂಡಿದ್ದರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಹಿನ್ನಲೆಯಲ್ಲಿ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಯವರನ್ನು ಸ್ಥಳೀಯರು ಒತ್ತಾಯಿಸಿದರು.
ಸದ್ಯ ಅಪಾಯದಂಚಿನಲ್ಲಿರುವ ಮೀನುಗಾರಿಕಾ ಪರಿಕರಗಳ ಶೇಕರಣ ಕೊಠಡಿ ಸಮುದ್ರ ಪಾಲಾಗುವ ಸಾಧ್ಯತೆ ಇರುವ ಕಾರಣ ಸುಮಾರು 60ಲಕ್ಷ ರೂಪಾಯಿಗಳ ಪರಿಕರಗಳನ್ನು ಸ್ಥಳಾಂತರ ಮಾಡಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ವಿದ್ಯಾ ಕುಮಾರಿಯವರ ಗಮನಕ್ಕೆ ಮೀನುಗಾರ ಪ್ರಮುಖರು ತಂದರು. ತಾತ್ಕಾಲಿಕವಾಗಿ ಬಂಡೆ ಹಾಕುವ ಕಾರ್ಯ ಶೀಘ್ರ ಪ್ರಾರಂಭಿಸಲಾಗುವುದು. ಅದು ಈ ಕಡಲಬ್ಬರದ ಮಧ್ಯೆ ಎಷ್ಟು ಪರಿಣಾಮಕಾರಿ ಎಂಬುದು ತಿಳಿಯದು. ಈ ಪ್ರದೇಶಕ್ಕೆ ಯಾರೂ ಬಾರದಂತೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್, ಕಾಪು ತಹಶಿಲ್ದಾರ್ ಪ್ರತಿಭಾ, ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶೋಭಾ ಹಾಗೂ ಸ್ಥಳೀಯ ಮೀನುಗಾರ ಪ್ರಮುಖರು ಸ್ಥಳದಲ್ಲಿದ್ದರು.
ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಗದ್ದೆಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಕೊಟ್ಟುಂಜದಲ್ಲಿ ನಡೆದಿದೆ.
ಸರಪಾಡಿ- ಬಿ.ಸಿ.ರೋಡು ನಡುವೆ ಸಂಚರಿಸುವ ಖಾಸಗಿ ಬಸ್ಸು ಕೊಟ್ಟುಂಜಕ್ಕೆ ಬರುತ್ತಿದ್ದಂತೆ ವಿಪರೀತ ಮಳೆ ಸುರಿಯುತ್ತಿತ್ತು. ಪರಿಣಾಮ ಚಾಲಕನಿಗೆ ರಸ್ತೆ ಕಾಣಿಸದೆ ನಿಯಂತ್ರಣ ತಪ್ಪಿದ ಬಸ್ ನೇಜಿ ನಾಟಿ ಮಾಡಿದ್ದ ಗದ್ದೆಗೆ ಬಿದ್ದಿದೆ.
ಬಸ್ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಆದರೆ ಬಸ್ ಬಿದ್ದು ಭತ್ತದ ಕೃಷಿಗೂ ಹಾನಿಯಾಗಿದೆ.
ಮಲ್ಪೆಯಲ್ಲಿ ನಿಂತಿದ್ದ ಬಸ್ಸಿನ ಹಿಂಬದಿಗೆ ಸ್ಕೂಟರ್ ಢಿಕ್ಕಿ ಸವಾರನಿಗೆ ಗಂಭೀರ ಗಾಯ
ಉಡುಪಿ : ನಿಂತಿದ್ದ ಬಸ್ಸಿನ ಹಿಂಬದಿಗೆ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಮಲ್ಪೆ ಸಿಟಿಜನ್ ಸರ್ಕಲ್ ಸಮೀಪದ ನೆರ್ಗಿ ಎಂಬಲ್ಲಿ ನಡೆದಿದೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ ಗುಂಡಿಬೈಲು ನಿವಾಸಿ ಲಕ್ಷ್ಮಣ (60) ಎಂದು ಗುರುತಿಸಲಾಗಿದೆ. ಅವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಸಮಾಜಸೇವಕ ಈಶ್ವರ ಮಲ್ಪೆ ಮತ್ತು ತಂಡದವರು ಸಹಕರಿಸಿದರು. ಇವರಿಗೆ ಗುಂಡಿಬೈಲ್ನಲ್ಲಿ ವರ್ಕ್ ಶಾಪ್ ಇದೆ ಎನ್ನಲಾಗುತ್ತಿದೆ.
ಮಲ್ಪೆ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಢಿಕ್ಕಿಯ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದ್ದು ಬಸ್ನ ಹಿಂಭಾಗ ಜಖಂಗೊಂಡಿದೆ.

ಉಡುಪಿ : ಎಸ್ಎಸ್ಎಫ್ ಉಡುಪಿ ಡಿವಿಷನ್ ವತಿಯಿಂದ ಉಡುಪಿ ನಗರ ಪೊಲೀಸ್ ಠಾಣೆ ಸಹಯೋಗದೊಂದಿಗೆ ಮಾದಕ ದ್ರವ್ಯ ವಿರೋಧಿ ಮಾಸಾಚರಣೆಯ ಅಂಗವಾಗಿ ಕ್ಯಾಂಪಸ್ ವಿದ್ಯಾರ್ಥಿಗಳಿಗಾಗಿ ಮಾದಕ ವ್ಯಸನದ ವಿರುದ್ದ ಜಾಗೃತಿ ಅಭಿಯಾನವನ್ನು ದೊಡ್ಡಣಗುಡ್ಡೆ ರಹ್ಮಾನಿಯ ಜುಮ್ಮಾ ಮಸೀದಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉಡುಪಿ ನಗರ ಠಾಣೆಯ ಪೋಲಿಸ್ ಉಪನಿರೀಕ್ಷಕರುಗಳಾದ ಈರಣ್ಣ ಶ್ರೀರಂಗುಪ್ಪಿ ಹಾಗೂ ಪುನೀತ್ ಕುಮಾರ್ ಮಾದಕ ವ್ಯಸನದ ಬಗ್ಗೆ ಹಾಗೂ ಸಂಚಾರ ನಿಯಮ ಪಾಲನೆ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಅಧ್ಯಕ್ಷತೆಯನ್ನು ಎಸ್ಎಸ್ಎಫ್ ಉಡುಪಿ ಡಿವಿಷನ್ ಅಧ್ಯಕ್ಷ ಇಮ್ತಿಯಾಝ್ ಸಂತೋಷ್ ನಗರ ವಹಿಸಿದ್ದರು.
ಕಾರ್ಯಾಗಾರವನ್ನು ಮಸೀದಿ ಸದರ್ ಉಸ್ತಾದ್, ಮಾಜಿ ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಹದಿ ಉದ್ಘಾಟಿಸಿದರು. ಪೋಲಿಸ್ ಸಿಬ್ಬಂದಿಗಳಾದ ಬಶೀರ್, ಚೇತನ್, ದೊಡ್ಡಣಗುಡ್ಡೆ ಮಸೀದಿಯ ಕಾರ್ಯದರ್ಶಿ ಖಾಸಿಂ, ಸಮಾಜ ಸೇವಕ ರಪೀಕ್ ದೊಡ್ಡಣಗುಡ್ಡೆ, ಡಿವಿಷನ್ ಪ್ರಧಾನ ಕಾರ್ಯದರ್ಶಿ ಫವಾಝ್ ದೊಡ್ಡಣಗುಡ್ಡೆ, ಕೋಶಾಧಿಕಾರಿ ಮುತ್ತಲಿಬ್ ರಂಗನಕೆರೆ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ : ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ದಿನಾಂಕ : 15.07.2024ರ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕ : 16.07.2024ರಂದು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿರುತ್ತದೆ.
ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ ಗಳಿಗೆ ರಜೆ ಘೋಷಿಸಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
